ಮುಖ್ಯಮಂತ್ರಿ ಕ್ಷೇತ್ರದಲ್ಲಿ ಬಿಜೆಪಿ ಅಬ್ಬರ

ಮಂಗಳವಾರ, ಏಪ್ರಿಲ್ 23, 2019
31 °C

ಮುಖ್ಯಮಂತ್ರಿ ಕ್ಷೇತ್ರದಲ್ಲಿ ಬಿಜೆಪಿ ಅಬ್ಬರ

Published:
Updated:
Prajavani

ರಾಮನಗರ: ವಂದಾರಗುಪ್ಪೆ ರೈಲ್ವೆ ಗೇಟ್‌ ಬಳಿಯಿಂದ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ರೋಡ್ ಶೋ ಆರಂಭಗೊಂಡಾಗ ಗುರುವಾರ ಬೆಳಿಗ್ಗೆ 9.30ಆಗಿತ್ತು.

ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಪ್ರಚಾರ ಆರಂಭವಾಯಿತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕ್ಷೇತ್ರ ಚನ್ನಪಟ್ಟಣದಲ್ಲಿ ಬಿಜೆಪಿಯು ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದು, ದಿನವಿಡೀ ಹಳ್ಳಿಗಳ ಸುತ್ತಾಡಿ ಮತಯಾಚನೆ ಮಾಡಿದರು.

ಬೆಳಿಗ್ಗೆ ಮೊದಲಿಗೆ ಕೆಂಗಲ್ ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ, ಪ್ರಸಾದ ಹಿಡಿದು ಹೊರಬಂದ ಅಶ್ವಥ್‌ ಪತ್ರಕರ್ತರಿಗೆ ಸಿದ್ಧತೆ, ಪ್ರಚಾರಗಳ ಬಗ್ಗೆ ಗಡಿಬಿಡಿಯಿಂದಲೇ ವಿವರಿಸಿದರು.

‘ಕಡೆ ಗಳಿಗೆಯಲ್ಲಿ ಟಿಕೆಟ್ ನೀಡಿದ್ದರೂ ಬಿಜೆಪಿಯ ನನ್ನೆಲ್ಲ ಪರಿವಾರದವರೂ ಸೇರಿ ಒಟ್ಟಾಗಿ ಪ್ರಚಾರ ನಡೆಸುತ್ತಿದ್ದೇವೆ. ಎದುರಾಳಿ ಪಕ್ಷದವರು ನಾನು ಕ್ಷೇತ್ರಕ್ಕೆ ಹೊರಗಿನವನು ಎನ್ನುತ್ತಿರುವುದುಸರಿಯಲ್ಲ. ನಾನು ರಾಜರಾಜೇಶ್ವರಿ ನಗರದಲ್ಲೇ ಇರುವವನು’ ಎಂಬ ಸ್ಪಷ್ಟನೆ ನೀಡಿದರು.

‘ಕಳೆದ ಬಾರಿ ಯೋಗೇಶ್ವರ್‌ ಅವರು ಡಿ.ಕೆ.ಸುರೇಶ್‌ ಜೊತೆ ಇದ್ದರು. ಈ ಬಾರಿ ಅವರು ಬಿಜೆಪಿ ಜೊತೆಗಿರುವುದೇ ನಮಗೆ ದೊಡ್ಡ ಅಸ್ತ್ರ’ಎಂದು ಬೀಗಿದರು.

ಅಲ್ಲಿಂದ ಪ್ರಚಾರದ ರಥ ಏರಿ ವಂದಾರಗುಪ್ಪೆ ಗ್ರಾಮದಲ್ಲಿ ರೋಡ್‌ ಶೋ ಮೂಲಕ ಮತಯಾಚಿಸಿದರು. ನೂರಾರು ಕಾರ್ಯಕರ್ತರೊಂದಿಗೆ ಬೈಕ್‌ ರ್‍ಯಾಲಿಯಲ್ಲಿ ಚನ್ನಪಟ್ಟಣ ನಗರಕ್ಕೆ ತೆರಳಿ ಪ್ರಚಾರ ನಡೆಸಿದರು.

ಬಳಿಕ ಹೊಂಗನೂರು, ಬಿ.ವಿ.ಹಳ್ಳಿ, ಸಿಂಗರಾಜಪುರ, ಕೋಡಂಬಳ್ಳಿ, ಬಾಣಗಹಳ್ಳಿಯಲ್ಲಿ ಪ್ರಚಾರ ನಡೆಯಿತು. ಮಧ್ಯಾಹ್ನದ ಬಿಸಿಲಲ್ಲಿ ಸೋಗಾಲ, ಇಗ್ಗಲೂರು, ಸುಳ್ಳೇರಿ, ಮಳೂರುಪಟ್ಟಣಕ್ಕೆ ಭೇಟಿ ಕೊಟ್ಟು ಮತಯಾಚಿಸಿದರು. ಬೈರಾಪಟ್ಟಣ, ಮುದಗೆರೆ ಗೇಟ್‌ನಲ್ಲಿ ರೋಡ್‌ ಶೋಯಿಂದ ಪ್ರಚಾರ ಅಂತ್ಯಗೊಂಡಿತು.

ಜನಸಂಖ್ಯೆ ಹೆಚ್ಚಿರುವ ಗ್ರಾಮಗಳನ್ನೇ ಪ್ರಚಾರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಮೋದಿಯೇ ಅಸ್ತ್ರ: ವಿವಿಧೆಡೆ ಚುನಾವಣಾ ಭಾಷಣ ಮಾಡಿದ ಅಶ್ವಥ್‌, ಕಾಂಗ್ರೆಸ್ ಅಭ್ಯರ್ಥಿಯನ್ನು ಟೀಕಿಸುವ ಜತೆಗೆ ಮೋದಿ ಹೆಸರಿನಲ್ಲಿ ಮತಯಾಚನೆ ಮಾಡಿದರು.

‘ಕ್ಷೇತ್ರದಲ್ಲಿ ಅಭಿವೃದ್ಧಿ ಗೊತ್ತೇ ಇಲ್ಲ. ಕೇಂದ್ರ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಇಲ್ಲಿನ ಸಂಸದರು ಸದ್ಬಳಕೆ ಮಾಡಿಕೊಂಡಿಲ್ಲ. ಬದಲಾಗಿ ವೈಯಕ್ತಿಕ ಅಭಿವೃದ್ಧಿ ಹೆಚ್ಚಾಗಿದೆಯೇ ಹೊರತು ಕ್ಷೇತ್ರ ಅಭಿವೃದ್ಧಿ ಆಗಿಲ್ಲ’ ಎಂದರು.

ಯೋಗೇಶ್ವರ್‌ ಸಾಥ್‌: ತಮ್ಮದೇ ಕ್ಷೇತ್ರದಲ್ಲಿ ನಡೆದ ಪ್ರಚಾರದ ಸಾರಥ್ಯ ವಹಿಸಿದ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಅಭ್ಯರ್ಥಿಗೆ ಸಾಥ್‌ ನೀಡಿದರು. ಒಕ್ಕಲಿಗ ಸಮುದಾಯ ಮಾಜಿ ಪ್ರಧಾನಿ ದೇವೇಗೌಡ ಕುಟುಂಬದ ಜೀತದಾಳುಗಳಲ್ಲ’ ಎಂದು ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ತೀವ್ರ ವಾಗ್ದಾಳಿ ನಡೆಸಿದರು.

ಮೆರವಣಿಗೆಯಲ್ಲಿ ಮೋದಿ ಮುಖವಾಡ: ವಿವಿಧೆಡೆ ಹಮ್ಮಿಕೊಂಡಿದ್ದ ಬೈಕ್‌ ರ್‍ಯಾಲಿ, ಮೆರವಣಿಗೆಯ ಸಂದರ್ಭ ಕಾರ್ಯಕರ್ತರು ಮೋದಿ ಮುಖವಾಡ ಧರಿಸಿ ಗಮನ ಸೆಳೆದರು. ಮೋದಿ ಪರ ಘೋಷಣೆಯನ್ನೂ ಕೂಗಿದರು. ಅಭ್ಯರ್ಥಿ ಹೆಸರಿಗಿಂತ ಪ್ರಧಾನಿ ಹೆಸರೇ ಹೆಚ್ಚು ಪ್ರತಿಧ್ವನಿಸುತಿತ್ತು!

ಲೋಕಸಭೆಗೆ ಮೊದಲ ಸ್ಪರ್ಧೆ

ಸದ್ಯ ಬೆಂಗಳೂರು ನಿವಾಸಿಯಾಗಿರುವ 59ವರ್ಷ ವಯಸ್ಸಿನ ಅಶ್ವಥ್‌ 1980ರಿಂದಲೂ ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 1999 ಹಾಗೂ 2004ರಲ್ಲಿ ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸೋಲು ಕಂಡರು. 2010ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ 6ವರ್ಷ ಕಾಲ ಸೇವೆ ಸಲ್ಲಿಸಿದ್ದರು. ನಾಲ್ಕು ವರ್ಷ ಕಾಲ ಮಂಡ್ಯ ಜಿಲ್ಲೆಯ ಬಿಜೆಪಿ ಉಸ್ತುವಾರಿಯಾಗಿದ್ದರು. ಇದೀಗ ಮೊದಲ ಬಾರಿ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !