ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿಯನ್ನು ಕಾಡುತ್ತಿರುವ ಅನಾರೋಗ್ಯ

ಆಸ್ಪತ್ರೆಗೆ ದಾಖಲಾಗಿರುವ ಕವಿ ರಮೇಶ ಹೆಗಡೆ
Last Updated 19 ಮಾರ್ಚ್ 2019, 15:13 IST
ಅಕ್ಷರ ಗಾತ್ರ

ಶಿರಸಿ: ‌ಮನೆ ಜಗುಲಿಯಲ್ಲಿಯೇ ಜಗತ್ತನ್ನು ನೋಡುವ ಸೂಕ್ಷ್ಮ ಸಂವೇದನೆಯ ಕವಿ ರಮೇಶ ಹೆಗಡೆ ಅವರು ಕಾವ್ಯದ ಮೂಲಕ ನಾಡಿನ ಸಹಸ್ರಾರು ಜನರಿಗೆ ಖುಷಿ ಹಂಚಿದವರು.

ಶಿರಸಿಗೆ ಭೇಟಿ ನೀಡುವ ಸಾಹಿತಿಗಳು, ಸಾಹಿತ್ಯಾಸಕ್ತರು ವಿನಾಯಕ ಕಾಲೊನಿಯಲ್ಲಿರುವ ಪುಟ್ಟ ಹೆಂಚಿನ ಮನೆಯನ್ನು ಹುಡುಕಿಕೊಂಡು ಬಂದು, ಜಗುಲಿಯ ಮಂಚದ ಮೇಲೆ ಮಲಗಿರುವ ರಮೇಶ ಹೆಗಡೆ ಅವರನ್ನು ಮಾತನಾಡಿಸಿಯೇ ಹಿಂತಿರುಗುತ್ತಾರೆ. ರಮೇಶ ಹೆಗಡೆ ಜತೆ ಸೆಲ್ಫಿ, ಫೋಟೊ ತೆಗೆಯಿಸಿಕೊಳ್ಳುವುದೇ ಅವರಿಗೆ ಸಂಭ್ರಮ.

ಚಿಕ್ಕಂದಿನಿಂದ ಆಸ್ಟಿಯೋ ಜೆನಿಸಿಸ್ ಇಂಪರ್ಫೆಕ್ಟಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ರಮೇಶ ಅವರಿಗೆ, ಹಾಸಿಗೆ, ಅದರ ಸುತ್ತ ಹರಡಿರುವ ಪುಸ್ತಕ, ಮೊಬೈಲ್ ಇದೇ ಪ್ರಪಂಚ. ಸದಾ ಮಲಗಿರುವ ಅವರಿಗೆ ಸ್ವತಂತ್ರವಾಗಿ ಎದ್ದು ಕುಳಿತುಕೊಳ್ಳಲು ಸಹ ಇನ್ನೊಬ್ಬರನ್ನು ಅವಲಂಬಿಸಬೇಕಾದ ಸ್ಥಿತಿಯಿದೆ. ಓದು, ಬರಹದಲ್ಲಿ ನೋವನ್ನು ಮರೆತ ಅವರು, ಸಾಧನೆ ಮಾಡಬೇಕೆಂಬ ಹಂಬಲದಿಂದ ಬಾಹ್ಯ ವಿದ್ಯಾರ್ಥಿಯಾಗಿ, ಪದವಿ ಪರೀಕ್ಷೆ ಬರೆದವರು. ಅವರ ಆರು ಕವನ ಸಂಕಲನಗಳು ಪ್ರಕಟಗೊಂಡಿವೆ. ಎರಡು ವರ್ಷಗಳ ಹಿಂದೆ ಅವರ ಮನೆ ಜಗುಲಿಯಲ್ಲಿ ಸೇರಿದ್ದ ಜನರ ನಡುವೆ ಸಾಹಿತಿ ಜಯಂತ ಕಾಯ್ಕಿಣಿ ಅವರು ‘ಕಿಟಕಿಯೊಳಗಿನ ಕಣ್ಣು’ ಕವನ ಸಂಕಲವನ್ನು ಬಿಡುಗಡೆಗೊಳಿಸಿದ್ದರು.

ಉತ್ಸಾಹದ ಚಿಲುಮೆಯಂತಿದ್ದ ರಮೇಶ ಸೋಮವಾರ ಮಧ್ಯಾಹ್ನ ದಿಢೀರ್ ಅನಾರೋಗ್ಯಕ್ಕೆ ಒಳಗಾಗಿ, ಇಲ್ಲಿನ ಟಿಎಸ್‌ಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದ ಅವರಿಗೆ, ಶ್ವಾಸಕೋಶದಲ್ಲಿ ನೀರು ತುಂಬಿದೆ. ವಯಸ್ಸಾದ ಅಪ್ಪ–ಅಮ್ಮ ಮನೆಯಲ್ಲಿದ್ದಾರೆ. ಅಣ್ಣ ರಾಜೇಶ ಹೆಗಡೆ ಸಣ್ಣ ಎಲೆಕ್ಟ್ರಿಕಲ್ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಇವರೇ ಈ ಕುಟುಂಬಕ್ಕೆ ಜೀವನಾಧಾರ. ಆರ್ಥಿಕ ಮುಗ್ಗಟ್ಟಿನಲ್ಲಿರುವ ಅವರಿಗೆ ಸಹಾಯ ಮಾಡಲು ಇಚ್ಛಿಸುವವರು Ramesh Govind Hegde, KVGB Bank, Sirsi Branch, A/c 89043335298, IFSC code:KVGB0009502 ಈ ಖಾತೆಗೆ ನೆರವು ನೀಡಬಹುದು. ಅವರ ಕುಟುಂಬದ ಸಂಪರ್ಕ ಸಂಖ್ಯೆ: 9964717756, 9036655660.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT