ಕಾಂಗ್ರೆಸ್‌ಗೆ ಮೂಗು ದಾರ ಹಾಕಲು ವಿಶ್ವನಾಥ್‌ ‘ಅಸ್ತ್ರ’ !

7

ಕಾಂಗ್ರೆಸ್‌ಗೆ ಮೂಗು ದಾರ ಹಾಕಲು ವಿಶ್ವನಾಥ್‌ ‘ಅಸ್ತ್ರ’ !

Published:
Updated:

ಬೆಂಗಳೂರು: ಹಿರಿಯ ಶಾಸಕ ಅಡಗೂರು ವಿಶ್ವನಾಥ್‌ ಅವರನ್ನು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿರುವ ಹಿಂದಿನ ‘ಒಳಮರ್ಮ’ವೇನು?

ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಉತ್ತಮ ‘ಫಸಲು’ ತೆಗೆಯಲು ಈ ‘ಪಟ್ಟಾಭಿಷೇಕ’ ಜೆಡಿಎಸ್‌ಗೆ ನೇರವಾಗಬಲ್ಲದೆ  ಅಥವಾ ‘ದೋಸ್ತಿ’ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ  ಸಿದ್ದರಾಮಯ್ಯ ‘ಅಬ್ಬರ’ಕ್ಕೆ ಕಡಿವಾಣ ಹಾಕಲು ದೇವೇಗೌಡರು ಈ ಅಸ್ತ್ರ ಪ್ರಯೋಗಿಸಿದ್ದಾರೆಯೆ?

ಈ ಪ್ರಶ್ನೆಗಳು ಈಗ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಹಿಂದುಳಿದ ಅದರಲ್ಲೂ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿದೆ ಎಂಬ ಸಂದೇಶ ನೀಡಿದ್ದರೂ, ದೇವೇಗೌಡರು ತಮ್ಮ ರಾಜಕೀಯ ಕಡು ವೈರಿ ಸಿದ್ದರಾಮಯ್ಯ ಅವರ ಪ್ರಭಾವ ತಗ್ಗಿಸಲು ಬತ್ತಳಿಕೆಗೆ ಸೇರಿಸಿಕೊಂಡ ಹೊಸ ಅಸ್ತ್ರ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗಿದೆ. 

ಕಾಂಗ್ರೆಸ್‌ನಲ್ಲಿ ತಮ್ಮನ್ನು ಮೂಲೆಗುಂಪು ಮಾಡಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಬೆಂಕಿಯುಗುಳಲು ಆರಂಭಿಸಿದ್ದ ವಿಶ್ವನಾಥ್ ಅವರನ್ನು ಚುನಾವಣೆ ಸಂದರ್ಭದಲ್ಲಿ ದೇವೇಗೌಡರು ಪಕ್ಷಕ್ಕೆ ಕರೆತಂದರು. ‘ಪಕ್ಷಕ್ಕೆ ಬಂದ ನಂತರ ಗೌರವದಿಂದ ನಡೆಸಿಕೊಳ್ಳಲಾಗುವುದು ಮತ್ತು ಸೂಕ್ತ ಸ್ಥಾನಮಾನ ನೀಡುತ್ತೇವೆ’ ಎಂದು ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ವಾಗ್ದಾನ ಮಾಡಿದ್ದರು. ಆ ಮಾತಿನಂತೆ ಅಧ್ಯಕ್ಷ ಸ್ಥಾನದ ಪಟ್ಟ ಕಟ್ಟಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಹಿರಿತನದ ಆಧಾರದಲ್ಲಿ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಮಂತ್ರಿ ಸ್ಥಾನ ಸಿಗಲಿಲ್ಲ. ಅಧ್ಯಕ್ಷ ಸ್ಥಾನ ನೀಡುವ ಮೂಲಕ ಈಗ ಅವರಿಗೆ ದೊಡ್ಡ ಹುದ್ದೆಯನ್ನೇ ನೀಡಲಾಗಿದೆ.

ವಿಶ್ವನಾಥ್‌ ಸೇರ್ಪಡೆಯಿಂದ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯಲು ಸಹಾಯಕವಾಗಬಹುದು. ಉತ್ತಮ ವಾಗ್ಮಿ ಎನಿಸಿದ್ದರೂ ಇಲ್ಲಿಯವರೆಗೆ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಅವಕಾಶ ವಿಶ್ವನಾಥ್‌ ಅವರಿಗೆ ಸಿಕ್ಕಿರಲಿಲ್ಲ. ಈಗ ಅಂತಹದ್ದೊಂದು ಅವಕಾಶ ಸಿಕ್ಕಿದೆ ಎಂದು ಪಕ್ಷ ಮೂಲಗಳು ಹೇಳಿವೆ.

ಸಮನ್ವಯ ಸಮಿತಿಗೂ ಪಟ್ಟು: ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಅವರನ್ನು ಸಮನ್ವಯ ಸಮಿತಿ ಸದಸ್ಯರನ್ನಾಗಿ ಸೇರಿಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿತ್ತು. ಈಗ ಜೆಡಿಎಸ್ ಕೂಡ ವಿಶ್ವನಾಥ್‌ಗೆ ಸಮಿತಿಯಲ್ಲಿ ಅವಕಾಶ ನೀಡಬೇಕೆಂದು ಪಟ್ಟು ಹಿಡಿಯಬಹುದು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

 ಡಿ.ದೇವರಾಜ ಅರಸು ಗರಡಿಯಿಂದ ಬಂದ ಅಡಗೂರು ವಿಶ್ವನಾಥ್‌ ಹಿರಿಯ ರಾಜಕಾರಣಿ. ತಮ್ಮ ಸುದೀರ್ಘ ರಾಜಕೀಯ ಜೀವನದ ಉದ್ದಕ್ಕೂ ಕಾಂಗ್ರೆಸ್ಸಿನಲ್ಲೇ ಇದ್ದವರು. ಸಿದ್ದರಾಮಯ್ಯ ಹಿಂದೆ ಜೆಡಿಎಸ್‌ ತೊರೆದಾಗ ಕಾಂಗ್ರೆಸ್‌ಗೆ ಕರೆತಂದು ಮುಖ್ಯಮಂತ್ರಿ ಆಗಿಸುವಲ್ಲಿ ಪಾತ್ರವಹಿಸಿದ್ದರು. ಆ ಬಳಿಕ ಪಕ್ಷದಲ್ಲಿ ಸಿದ್ದರಾಮಯ್ಯ ಆಪ್ತ ಬಳಗದಿಂದ ದೂರ ಉಳಿದರು. 

 

 

 

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !