ಸೋಮವಾರ, ಸೆಪ್ಟೆಂಬರ್ 20, 2021
28 °C

ಬಡಗು ಶೈಲಿಯ ಜೀವಧ್ವನಿ ನೆಬ್ಬೂರು ಭಾಗವತರು

ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ Updated:

ಅಕ್ಷರ ಗಾತ್ರ : | |

Prajavani

ನೆಬ್ಬೂರು ನಾರಾಯಣ ಭಾಗವತರು ಯಕ್ಷಗಾನ ಬಡಗುತಿಟ್ಟಿನ ಅಗ್ರಮಾನ್ಯ ಭಾಗವತರು. ಇವರ ವ್ಯಕ್ತಿತ್ವದ ಎರಡು ಪ್ರಧಾನ ಮುಖ ಒಂದು ಸಾಮಾಜಿಕ ವ್ಯಕ್ತಿತ್ವ, ಮತ್ತೊಂದು ಕಲಾರ್ಹತೆ ಮತ್ತು ಕಲಾಸಿದ್ಧಿ. ಇವರ ಸಾಮಾಜಿಕ ವ್ಯಕ್ತಿತ್ವ ತುಂಬ ಆಕರ್ಷಕ. ಸಮಾಜ, ಪರಿವಾರವೆಂದರೆ ತುಂಬ ಪ್ರೀತಿ. ಪ್ರೀತಿಯಿಂದಲೇ ಎಲ್ಲರ ಜತೆ ವ್ಯವಹರಿಸುವ, ಪ್ರೀತಿ ಕೊಟ್ಟು ಸಮಾಜವನ್ನು ತನ್ನತ್ತ ಸೆಳೆಯುವ ಅದ್ಭುತವಾದ ಶಕ್ತಿ ಇತ್ತು. ಆದ್ದರಿಂದಲೇ ಮದುವೆ, ಮುಂಜಿ, ಕಷ್ಟ–ಸುಖ ಎಲ್ಲ ಸಂದರ್ಭಗಳಲ್ಲೂ ಇವರು ಹಾಜರಾಗುತ್ತಿದ್ದರು. ಎಷ್ಟೇ ಕಷ್ಟವಾದರೂ ಅಲ್ಲಿ ಭಾಗವಹಿಸುತ್ತಿದ್ದರು. ತೀವ್ರ ಅನಾರೋಗ್ಯದಲ್ಲೂ ಈ ಅಭ್ಯಾಸವನ್ನು ಬಿಡಲಿಲ್ಲ.

ಎಲ್ಲರ ಜತೆಗಿನ ಹೊಂದಾಣಿಕೆ ಇವರ ವಿಶಿಷ್ಟ ಅರ್ಹತೆಯಾಗಿತ್ತು. ಅದಕ್ಕಿಂತ ಮುಖ್ಯವಾಗಿ ವಿನೋದ ಪ್ರಜ್ಞೆ, ಹಾಸ್ಯ ಚಟಾಕಿಯಿಂದ ಎಲ್ಲರನ್ನೂ ಸೆಳೆಯುತ್ತಿದ್ದರು. ನೆಬ್ಬೂರರು ಇದ್ದಲ್ಲಿ ಜೀವಕಲೆ ಇರುತ್ತಿತ್ತು. ಎಂದೂ ಅವರು ಸಪ್ಪೆಯಾದವರಲ್ಲ, ಬೇರೆಯವರನ್ನು ಸಪ್ಪೆಯಾಗಲು ಬಿಡುತ್ತಿರಲಿಲ್ಲ. ಆಸ್ಪತ್ರೆಯಲ್ಲಿರುವಾಗಲೂ ಡಾಕ್ಟರ್ ಜೊತೆಗೆ ತಮಾಷೆ ಮಾಡಿ, ಡಾಕ್ಟರ್ ಅನ್ನೇ ನಗಿಸುತ್ತಿದ್ದರು. ಇಂತಹ ವಿನೋದ ಪ್ರಜ್ಞೆ ಅವರನ್ನು ಸಮಾಜ ಆಸ್ತಿಯಾಗಿಸಿತ್ತು. ಅವರಲ್ಲಿ ಪ್ರೀತಿ ತುಂಬಿದ ಮನಸ್ಸಿತ್ತು. ಅದು ಸಮಾಜದ ಆಸ್ತಿ ಎಂದು ತೋರಿದ ಏಕೈಕ ಕಲಾವಿದ ನೆಬ್ಬೂರು ಭಾಗವತರು.

ಇಡಗುಂಜಿ ಮೇಳದ ಮುಖ್ಯ ಭಾಗವತರಾಗಿ ಅವರು ದುಡಿದಿದ್ದಾರೆ. ಅವರ ಭಾಗವತಿಕೆ ಅದೊಂದು ವಿಸ್ಮಯ. ಮಂದ್ರದಲ್ಲಿ ಅಗಲವಾಗಿ, ಮಧ್ಯದಲ್ಲಿ ಮಧ್ಯಮ ಪ್ರಮಾಣದಲ್ಲಿ, ತಾರಕ್ಕೆ ಬಂದಾಗ ಚೂಪಾಗಿ ಶ್ರುತಿಯ ಜತೆಗೆ ಹೊಂದಿಕೊಳ್ಳುವ ಇಂಪಾದ ಸ್ವರ. ಆ ಸ್ವರ ಯಾವುದೇ ರಸದ, ಯಾವುದೇ ಭಾವದ ತರಂಗಗಳನ್ನು ಹುಟ್ಟಿಸುವುದಕ್ಕೆ ಸಮರ್ಥವಾಗಿತ್ತು. ಯಾವ ಸ್ಥಾಯಿಯಲ್ಲಾದರೂ ಸುಲಭವಾಗಿ ಹಾಡುವಷ್ಟು ಅವರಿಗೆ ಸ್ವರಭಾರವಿತ್ತು. ಅವರು ವಿಲಂಬ ಗತಿಯ ಮಧ್ಯಮ ಲಯದಲ್ಲಿ ಪದ್ಯ ಹೇಳುವ ಅಪರೂಪ ಭಾಗವತರು.

ತೆಂಕಿರಲಿ, ಬಡಗಿರಲಿ ಒಂದು ಶತಮಾನದ ಗುಣಮಟ್ಟ ಅಧ್ಯಯನ ಮಾಡುವವರಿಗೆ ನೆಬ್ಬೂರು ಭಾಗವತರೊಬ್ಬರೇ ಆಕರ ವ್ಯಕ್ತಿಯಾಗಿದ್ದರು. ಅವರನ್ನು ತಿದ್ದಿ ತೀಡಿದವರು ಕೆರೆಮನೆ ಶಿವರಾಮ ಹೆಗಡೆ. ಇದಕ್ಕೆ ಕಾರಣರಾದವರು ಕೊಡಗಿಪಾಲ ಗಣಪತಿ ಹೆಗಡೆ. ಇಡಗುಂಜಿ ಮೇಳವೆಂದರೆ ಪಂಚಮೂರ್ತಿಗಳ ನೆನಪು ಮಾಸುವುದಿಲ್ಲ. ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆ ಮತ್ತು ಈ ನಾಲ್ವರು ಕಲಾವಿದರನ್ನು ಭಾವದೀಪ್ತವಾಗಿ ಹಾಡಿ ಕುಣಿಸಿದವರು ನೆಬ್ಬೂರರು. ಶಿವರಾಮ ಹೆಗಡೆಯವರ ರಂಗದಿಂದ ರಂಗಕ್ಕೆ ಚಲಿಸುವ ಮೊಬೈಲ್ ಸ್ಕೂಲ್‌ನ ಮೊದಲ ವಿದ್ಯಾರ್ಥಿ ನೆಬ್ಬೂರು ಭಾಗವತರು.

ನೆಬ್ಬೂರರು ಮತ್ತು ಶಂಭು ಹೆಗಡೆ ನಡುವಿನ ಸಂಬಂಧ ದಾಂಪತ್ಯದ ಸಂಬಂಧದಷ್ಟೇ ಗೂಢ, ಗಾಢ ಮತ್ತು ಗಂಭೀರವಾಗಿತ್ತು. ಶಂಭು ಹೆಗಡೆಯವರ ಕಲಾ ಜೀವನದಲ್ಲಿ ನೆಬ್ಬೂರರ ಪಾಲು ದೊಡ್ಡದು. ಶಂಭು ಹೆಗಡೆ ರಂಗಭೂಮಿಯ ಎತ್ತರಕ್ಕೇರಲು ನೆಬ್ಬೂರರು ಪ್ರಧಾನ ಕಾರಣ. ಕೆರೆಮನೆ ಘರಾಣೆಯ ಉತ್ತರ ಕನ್ನಡ ಬಡಗುಶೈಲಿಯ ಅತ್ಯುತ್ತಮ ರಸಾವರ್ಜಕ ಮಾದರಿಗೆ ನೆಬ್ಬೂರರು ಜೀವಧ್ವನಿಯಾಗಿದ್ದರು.

ಉತ್ತರ ಕನ್ನಡದಲ್ಲಿ 1960ರಿಂದ 90ರವರೆಗೆ ತಾಳಮದ್ದಲೆ ರಂಗವೂ ಹೊಣೆಗಾರಿಕೆಯಿಂದ ಬೆಳೆದುಬಂತು. ತಾಳಮದ್ದಲೆಗೆ ಪದ್ಯ ಹೇಳುವ ವಿಧಾನ ಬೇರೆ ಎಂದು ತೋರಿಸಿಕೊಟ್ಟವರು ನೆಬ್ಬೂರರು. ಆಗ ತಾಳಮದ್ದಲೆಯ ಮುಂಚೂಣಿಯಲ್ಲಿದ್ದವರು ವೆಂಕಟಾಚಲ ಭಟ್ಟರು, ಕೆರೇಕೈ ಕೃಷ್ಣ ಭಟ್ಟರು, ಹಸ್ರಗೋಡ ಲಕ್ಷ್ಮೀನಾರಾಯಣ ಹೆಗಡೆ ಮೊದಲಾದವರು. ಅವರೆಲ್ಲ ರಂಗಸ್ಥಳದ ಪರಿಣಾಮವನ್ನು ಮಾತಿನ ಮಾಧ್ಯಮದಲ್ಲೇ ಸ್ವಲ್ಪವೂ ನ್ಯೂನವಾಗದಂತೆ ತರಲು ಪ್ರಯತ್ನಿಸಿದರು. ಆ ಆಂದೋಲನದ ಹರಿಕಾರರಲ್ಲಿ ನೆಬ್ಬೂರರೂ ಒಬ್ಬರು. ಇಂತಹ ಭವ್ಯ ವ್ಯಕ್ತಿತ್ವ ನಮ್ಮ ಜತೆಗಿಲ್ಲ ಎಂಬ ಕಟುವಾಸ್ತವ ಅನುಭವಿಸುವುದು ಕಷ್ಟ. ಅವರಿಗೆ ದೇವರು ಸದ್ಗತಿ ಕೊಡಲಿ.

(ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ- ಲೇಖಕರು ಸಂಸ್ಕೃತ ವಿದ್ವಾಂಸ, ತಾಳಮದ್ದಲೆ ಅರ್ಥಧಾರಿ)

ನೆಬ್ಬೂರು ಭಾಗವತ ವಿಧಿವಶ

ಶಿರಸಿ: ಯಕ್ಷಗಾನ ಬಡಗುತಿಟ್ಟಿನ ಪ್ರಸಿದ್ಧ ಭಾಗವತರಾಗಿದ್ದ ನೆಬ್ಬೂರು ನಾರಾಯಣ ಭಾಗವತ (82) ಶನಿವಾರ ನಿಧನರಾದರು. ಬೆಳಿಗ್ಗೆ ದೇವರಿಗೆ ಹೂ ಕೊಯ್ಯುತ್ತಿರುವಾಗ ಹೃದಯಾಘಾತವಾಗಿ, ಅಲ್ಲಿಯೇ ಕುಸಿದು ಕೊನೆಯುಸಿರೆಳೆದರು. ಅವರಿಗೆ ಪತ್ನಿ ಶರಾವತಿ, ಪುತ್ರ, ಪುತ್ರಿ ಇದ್ದಾರೆ.

ಕಡುಬಡತನದ ಕಾರಣಕ್ಕೆ ನಾಲ್ಕನೇ ತರಗತಿಗೆ ಶಿಕ್ಷಣವನ್ನು ಮೊಟಕುಗೊಳಿಸಿದ್ದರು. ಬಾಲ್ಯದಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಹೊಂದಿದ್ದ ಅವರು, ಮೇರು ಕಲಾವಿದರಾಗಿದ್ದ ದಿವಂಗತ ಶಿವರಾಮ ಹೆಗಡೆ ಅವರ ಗರಡಿಯಲ್ಲಿ ಬೆಳೆದವರು. ಹೆಗಡೆಯವರ ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ ಐದು ದಶಕಗಳ ಕಾಲ ಭಾಗವತರಾಗಿದ್ದರು. ಪೌರಾಣಿಕ ಪ್ರಸಂಗಗಳ ಅದರಲ್ಲೂ ‘ರಾಮನಿರ್ಯಾಣ’, ‘ಕರ್ಣಪರ್ವ’ ಆಖ್ಯಾನದಲ್ಲಿ ಅವರ ಹಾಡುಗಾರಿಕೆ ಯಕ್ಷ ಪ್ರೇಕ್ಷಕರಿಗೆ ಚಿರನೆನಪು.

ಕೆರೆಮನೆ ಮೇಳದ ನೇತೃತ್ವದಲ್ಲಿ ಅಮೆರಿಕ, ಲಂಡನ್, ಚೀನಾ, ಸ್ಪೇನ್, ಸಿಂಗಪುರ, ಬರ್ಮಾ, ಮಲೇಷಿಯಾ ಮೊದಲಾದ ದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಪ್ರೇಕ್ಷಕರಿಗೆ ಯಕ್ಷಗಾನ ಭಾಗವತಿಕೆಯ ಸವಿ ಉಣಬಡಿಸಿದ್ದರು. ಅವರಿಗೆ 1996ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, 2002ರಲ್ಲಿ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, 2006ರಲ್ಲಿ ಶೇಣಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ. 2007ರಲ್ಲಿ ಅವರ ಆತ್ಮಕಥನ ‘ನೆಬ್ಬೂರು ನಿನಾದ’ ಪ್ರಕಟಗೊಂಡಿದೆ. ಡಾ.ಜಿ.ಎಸ್.ಭಟ್ಟ ಇದನ್ನು ಸಂಪಾದಿಸಿದ್ದರು. ಅವರು ನೆಲೆಸುತ್ತಿದ್ದ ತಾಲ್ಲೂಕಿನ ಹಣಗಾರಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು