ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನ ಕಲಾಪ ನೇರ ಪ್ರಸಾರಕ್ಕೆ ನಿರ್ಬಂಧ

Last Updated 9 ಅಕ್ಟೋಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು:ವಿಧಾನ ಮಂಡಲದ ಅಧಿವೇಶನ ಗುರುವಾರ ಆರಂಭವಾಗಲಿದ್ದು, ಖಾಸಗಿ ಸುದ್ದಿ ವಾಹಿನಿಗಳ ನೇರ ಪ್ರಸಾರ ಹಾಗೂ ಸದನದಲ್ಲಿ ಛಾಚಾಚಿತ್ರ ತೆಗೆಯುವುದನ್ನು ನಿಷೇಧಿಸಿದ್ದು, ಆ ಮೂಲಕ ಮಾಧ್ಯಮಗಳನ್ನು ನಿಯಂತ್ರಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ.

ಆದರೆ, ಸದನದ ಕಲಾಪವನ್ನು ದೂರದರ್ಶನ ವಾಹಿನಿ ನೇರ ಪ್ರಸಾರ ಮಾಡುತ್ತಿದ್ದು, ಈ ವಾಹಿನಿಯ ಸಂಪರ್ಕವನ್ನು ಖಾಸಗಿ ವಾಹಿನಿಗಳಿಗೆ ನೀಡಲಾಗುತ್ತದೆ. ಆಗ ಖಾಸಗಿ ವಾಹಿನಿಗಳೂ (ದೂರದರ್ಶನ ಲಿಂಕ್ ಬಳಸಿ) ನೇರ ಪ್ರಸಾರ ಮಾಡಬಹುದಾಗಿದೆ.

ಈವರೆಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ನಡೆಯುವ ಕಲಾಪವನ್ನು ಖಾಸಗಿ ಸುದ್ದಿ ವಾಹಿನಿಗಳು ನೇರ ಪ್ರಸಾರ ಮಾಡುತ್ತಿದ್ದವು. ಈಗಿನ ನಿರ್ಬಂಧದಿಂದಾಗಿ ನೇರ ಪ್ರಸಾರಕ್ಕೆ ತಡೆ ಬಿದ್ದಿದೆ. ಸುದ್ದಿ ವಾಹಿನಿಗಳ ವರದಿಗಾರರು ಸದನದೊಳಗೆ ಕ್ಯಾಮರಾಗಳನ್ನುತೆಗೆದುಕೊಂಡು ಹೋಗುವಂತಿಲ್ಲ. ಆದರೆ ವರದಿಗಾರರು ಕಲಾಪ ವರದಿ ಮಾಡಲು ಯಾವುದೇ ನಿರ್ಬಂಧ ವಿಧಿಸಿಲ್ಲ.

ಹಿನ್ನೆಲೆ:ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಸಚಿವರಾಗಿದ್ದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಇತರರು ವಿಧಾನಸಭೆ ಕಲಾಪದ ಸಮಯದಲ್ಲಿ ಮೊಬೈಲ್‌ನಲ್ಲಿ ನೀಲಿ ಚಿತ್ರಗಳನ್ನು ವೀಕ್ಷಿಸುತ್ತಿದ್ದ ದೃಶ್ಯ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಶಾಸಕ ಪ್ರಭು ಚೌವ್ಹಾಣ್ ಅವರು ಪ್ರಿಯಾಂಕ ಗಾಂಧಿ ಚಿತ್ರವನ್ನು ದೊಡ್ಡದುಮಾಡಿ ನೋಡಿದ್ದ ದೃಶ್ಯವೂ ಪ್ರಸಾರವಾಗಿತ್ತು. ಈ ವಿಚಾರಗಳು ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದ್ದು, ಸವದಿ, ಪಾಟೀಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇಂತಹ ಘಟನೆಗಳ ನಂತರ ಸದನಕ್ಕೆ ಖಾಸಗಿ ವಾಹಿನಿಗಳಿಗೆ ನಿರ್ಬಂಧ ವಿಧಿಸುವ ಚರ್ಚೆಗಳು ಮುನ್ನೆಲೆಗೆ ಬಂದಿದ್ದವು. ಲೋಕಸಭೆ ಹಾಗೂ ರಾಜ್ಯಸಭೆ ಕಲಾಪ ಪ್ರಸಾರಕ್ಕೆ ಪ್ರತ್ಯೇಕ ವ್ಯವಸ್ಥೆ ಹೊಂದಿದ್ದು, ಅದೇ ಮಾದರಿಯಲ್ಲಿ ರಾಜ್ಯದ ವಿಧಾನ ಮಂಡಲದಲ್ಲೂ ಪ್ರಸಾರ ವ್ಯವಸ್ಥೆ ರೂಪಿಸುವ ಬಗ್ಗೆ ಚರ್ಚೆಗಳು ನಡೆದಿದ್ದವು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆ.ಬಿ.ಕೋಳಿವಾಡ ವಿಧಾನಸಭೆ ಅಧ್ಯಕ್ಷರಾಗಿದ್ದ ಸಮಯದಲ್ಲಿ ಖಾಸಗಿ ವಾಹಿನಿಗಳ ನಿರ್ಬಂಧದ ಪ್ರಸ್ತಾಪ ವ್ಯಕ್ತವಾಗಿತ್ತು.

ಕೆ.ಆರ್.ರಮೇಶ್ ಕುಮಾರ್ ಸಭಾಧ್ಯಕ್ಷರಾಗಿದ್ದ ಸಮಯದಲ್ಲಿ ಲೋಕಸಭೆ ಹೊಂದಿರುವ ಟಿ.ವಿ ಪ್ರಸಾರ ಮಾದರಿಯನ್ನು ವಿಧಾನ ಮಂಡಲದಲ್ಲಿ ಅಳವಡಿಸುವ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ ಈವರೆಗೂ ಅದು ಸಾಧ್ಯವಾಗಿಲ್ಲ.

ನಿರ್ಬಂಧ ಬೇಡ:

‘ಮಾಧ್ಯಮಗಳಿಗೆ ನಿರ್ಬಂಧ ವಿಧಿಸದಂತೆ ಕೆಲ ಸಚಿವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ. ಮಾಧ್ಯಮಗಳನ್ನು ದೂರ ಮಾಡಿದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಹಿಂದಿನಂತೆ ಅವಕಾಶ ನೀಡುವಂತೆ ಮನವಿ ಮಾಡಿದರು’ ಎನ್ನಲಾಗಿದೆ.

ಸಚಿವರ ಜತೆಗೆ ಬುಧವಾರ ‘ಕೃಷ್ಣಾ’ದಲ್ಲಿ ನಡೆದ ಸಭೆಯಲ್ಲಿ ಈ ಸಲಹೆ ನೀಡಿದ್ದು, ಮುಖ್ಯಮಂತ್ರಿ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸಹ ಮಾಧ್ಯಮ ನಿರ್ಬಂಧಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಇದು ಪ್ರಜಾಪ್ರಭುತ್ವಕ್ಕೆ ಮಾರಕ. ನಿರ್ಬಂಧ ನಿರ್ಧಾರ ಪುನರ್ ಪರಿಶೀಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಮುಖಂಡರೂ ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ‘ಬಿಜೆಪಿಯವರು ಭಯದಿಂದ ಇಂಥ ನಿರ್ಧಾರ ಕೈಗೊಂಡಿರಬಹುದು. ಸದನದಲ್ಲಿ ನಡೆಯುವ ಚರ್ಚೆಗಳು ಪಾರದರ್ಶಕವಾಗಿ ಜನರಿಗೆ ತಿಳಿಯುವಂತಿರಬೇಕು’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

***

ಸದನದಲ್ಲಿ ಚರ್ಚಿಸಿ ನಿರ್ಬಂಧ ವಿಧಿಸಬೇಕೆ? ಬೇಡವೆ? ಎಂಬ ಬಗ್ಗೆ ಗುರುವಾರ ತೀರ್ಮಾನ ಪ್ರಕಟಿಸಲಾಗುವುದು
–ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT