ಬುಧವಾರ, ಡಿಸೆಂಬರ್ 11, 2019
21 °C
ಮುಖ್ಯಮಂತ್ರಿ ಬರಮಾಡಿಕೊಳ್ಳದ ರಮೇಶ ಜಾರಕಿಹೊಳಿ

ನಾನು ಪಿಆರ್‌ಒ ಅಲ್ಲ– ಲಕ್ಷ್ಮಿ ಹೆಬ್ಬಾಳಕರ; 5 ವರ್ಷ ಆಗಿದ್ದರಲ್ಲ– ರಮೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಾಂಬ್ರಾ ವಿಮಾನನಿಲ್ದಾಣಕ್ಕೆ ಸೋಮವಾರ ಬಂದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಸ್ವಾಗತಿಸಲು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಬಂದಿರಲಿಲ್ಲ. ಇದು ಹಲವು ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಮಂತ್ರಿ ಬರಮಾಡಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು ಬರುವುದು ಸಾಮಾನ್ಯ. ಆದರೆ, ಇದರಿಂದ ದೂರ ಉಳಿದ ರಮೇಶ ಜಾರಕಿಹೊಳಿ, ತಮ್ಮ ಮುನಿಸು ಇನ್ನೂ ಶಮನಗೊಂಡಿಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿಯನ್ನು ಶಾಸಕರಾದ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ, ಡಾ.ಅಂಜಲಿ ನಿಂಬಾಳ್ಕರ್, ಜೆಡಿಎಸ್ ಮುಖಂಡರಾದ ಎನ್.ಎಚ್‌. ಕೋನರೆಡ್ಡಿ, ಶಂಕರ ಮಾಡಲಗಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಬರಮಾಡಿಕೊಂಡರು.

ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಲಕ್ಷ್ಮಿ, ‘ವಿಮಾನನಿಲ್ದಾಣ ಹಾಗೂ ಸುವರ್ಣ ವಿಧಾನಸೌಧ ಎರಡೂ ನನ್ನ ಗ್ರಾಮೀಣ ಕ್ಷೇತ್ರದಲ್ಲಿವೆ. ಹೀಗಾಗಿ, ಮುಖ್ಯಮಂತ್ರಿಯನ್ನು ಸ್ವಾಗತಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಬೇರೆಯವರು ಏಕೆ ಬಂದಿಲ್ಲವೋ ನನಗೆ ಗೊತ್ತಿಲ್ಲ. ನಾನೇನು ರಮೇಶ ಜಾರಕಿಹೊಳಿ ಅವರ ಪಿಆರ್‌ಒ ಅಲ್ಲ. ಏಕೆ ಬಂದಿಲ್ಲ ಎನ್ನುವುದನ್ನು ಅವರನ್ನೇ ‍ಕೇಳಿ’ ಎಂದು ಪ್ರತಿಕ್ರಿಯಿಸಿದರು.

ನಂತರ ಇದಕ್ಕೆ ತಿರುಗೇಟು ನೀಡಿದ ರಮೇಶ, ‘ಲಕ್ಷ್ಮಿ ಹೆಬ್ಬಾಳಕರ ಐದು ವರ್ಷಗಳಿಂದ ಪಿಆರ್‌ಒ ಆಗಿದ್ದರಲ್ಲಾ, ಈಗ ಇಲ್ಲವಾ?’ ಎಂದು ಕೇಳಿದರು.

‘ನಾನು ಷೋ ಮಾಡುವುದಕ್ಕೆ ಉಸ್ತುವಾರಿ ಸಚಿವನಾಗಿಲ್ಲ. ಪ್ರಚಾರ ಪ್ರಿಯನೂ ಅಲ್ಲ. ನನ್ನ ಕೆಲಸ ಮಾಡುತ್ತಿದ್ದೇನೆ. ಹಿಂದಿನ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಗೆ ಬಂದಾಗಲೂ ಬರಮಾಡಿಕೊಳ್ಳುತ್ತಿರಲಿಲ್ಲ. ಈಗ ಕುಮಾರಸ್ವಾಮಿ ಅವರನ್ನು ಸ್ವಾಗತಿಸಿಲ್ಲ. ಇದರಲ್ಲಿ ಬೇರೇನೂ ಅರ್ಥವಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು