ಚತುಷ್ಪಥ ರಸ್ತೆ: ಸಸ್ಯಸಂಕುಲಕ್ಕೆ ಆಪತ್ತು

7
ಸಾವಿರಾರು ಮರಗಳ ಕಡಿತಲೆ ಸಾಧ್ಯತೆ: ಪರಿಸರ ಪ್ರೇಮಿಗಳ ಆತಂಕ

ಚತುಷ್ಪಥ ರಸ್ತೆ: ಸಸ್ಯಸಂಕುಲಕ್ಕೆ ಆಪತ್ತು

Published:
Updated:
Deccan Herald

ಮಡಿಕೇರಿ: ಕೊಡಗಿನ ಮೂಲಕ ಹಾದು ಹೋಗಿರುವ ಮೈಸೂರು– ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ–275 ಅನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಅನುಮತಿ ದೊರೆತಿದ್ದು ಪರಿಸರ ಪ್ರೇಮಿಗಳಿಂದ ವಿರೋಧ ವ್ಯಕ್ತವಾಗುತ್ತಿದೆ.

‘ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ’ಯೂ ಅಸ್ತಿತ್ವಕ್ಕೆ ಬಂದಿದ್ದು ಚತುಷ್ಪಥ ರಸ್ತೆ ನಿರ್ಮಾಣ ವಿರೋಧಿಸಿ, ದೊಡ್ಡಮಟ್ಟದ ಹೋರಾಟ ರೂಪಿಸಲು ಸಿದ್ಧತೆ ನಡೆದಿದೆ. ಮೈಸೂರಿನಿಂದ ಮಡಿಕೇರಿ ತನಕ ನಾಲ್ಕು ಪಥದ ರಸ್ತೆಯಾಗಿಸಲು ನೀಲನಕ್ಷೆ ಸಿದ್ಧವಾಗಿದ್ದು ಇದರಿಂದ ಕೊಡಗಿನಲ್ಲಿ ಸಸ್ಯಸಂಕುಲಕ್ಕೆ ಆಪತ್ತು ಎದುರಾಗುವ ಆತಂಕವಿದೆ.

ಭೂಸ್ವಾಧೀನ ಪ್ರಕ್ರಿಯೆಗೆ ವಿಶೇಷಾಧಿಕಾರಿ ಹಾಗೂ ರಸ್ತೆ ವಿಸ್ತರಣೆ ಮೇಲುಸ್ತುವಾರಿಗೆ ಎಂಜಿನಿಯರ್‌ ಸಹ ನೇಮಕವಾಗಿದೆ. ಡಿ. 10ರಂದು ಕಚೇರಿ ಉದ್ಘಾಟನೆ ಆಗಲಿದೆ ಎಂದು ಸಂಸದ ಪ್ರತಾಪ ಸಿಂಹ ಮಾಹಿತಿ ನೀಡಿದ್ದು, ವಿರೋಧದ ನಡುವೆಯೂ ಯೋಜನೆ ಕಾರ್ಯಗತಕ್ಕೆ ಪ್ರಯತ್ನಗಳು ನಡೆಯುತ್ತಿವೆ.

ಮತ್ತೊಂದು ಸಂಕಷ್ಟ: ‘ಮೈಸೂರಿನ ಇಲವಾಲದಿಂದ ಹುಣಸೂರು, ಪಿರಿಯಾಪಟ್ಟಣ, ಕುಶಾಲನಗರ, ಮಡಿಕೇರಿ ತನಕ ರಸ್ತೆ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ಕುಶಾಲನಗರ–ಮಡಿಕೇರಿ ನಡುವೆ 32 ಕಿ.ಮೀ ಅಂತರವಿದ್ದು ಇಲ್ಲಿ ರಸ್ತೆ ವಿಸ್ತರಿಸಿದರೆ ಗುಡ್ಡಗಳು ಬರಿದಾಗಲಿವೆ. ಕಾಫಿ ತೋಟ ನಾಶವಾಗಲಿದೆ. ಸಾವಿರಾರು ಮರಗಳ ಕಡಿತಲೆಯಿಂದ ಜಿಲ್ಲೆಯ ವಾತಾವರಣವೇ ಏರುಪೇರಾಗಲಿದೆ. ಭೂಕುಸಿತದಿಂದ ಕಂಗೆಟ್ಟಿರುವ ಜಿಲ್ಲೆ ಮತ್ತೊಂದು ರೀತಿಯ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದೆ’ ಎಂದು ಕೊಡಗು ವನ್ಯಜೀವಿ ಸಂಘದ ಅಧ್ಯಕ್ಷ ಸಿ.ಪಿ. ಮುತ್ತಣ್ಣ ಆತಂಕ ವ್ಯಕ್ತಪಡಿಸುತ್ತಾರೆ.

‘ಕೊಡಗು ಪುಟ್ಟ ಜಿಲ್ಲೆ. ಅದನ್ನು ಕೇಕ್‌ನಂತೆ ಕತ್ತರಿಸಿದರೆ ಛಿದ್ರವಾಗಲಿದೆ. ಮೈಸೂರು–ಕೋಯಿಕೋಡು 400 ಕೆ.ವಿ ಹೈಟೆನ್ಷನ್‌ ವಿದ್ಯುತ್‌ ಮಾರ್ಗಕ್ಕೆ 2015ರಲ್ಲಿ 5,400 ಮರಗಳನ್ನು ಕಡಿಯಲಾಗಿತ್ತು. ಬಳಿಕ ವಾತಾವರಣವೇ ಬದಲಾಗಿ ವಿಪರೀತ ಮಳೆ ಬೀಳುವುದು, ಇಲ್ಲವೇ ಬರ ಪರಿಸ್ಥಿತಿ ಎದುರಾಗುವ ಸ್ಥಿತಿಯಿದೆ. ಆನೆ–ಮಾನವ ಸಂಘರ್ಷ ತೀವ್ರವಾಗಿದೆ. ಪರಿಸರ ನಾಶಕ್ಕೆ ಕಾರಣವಾಗುವ ಯೋಜನೆ ಕೈಬಿಡಬೇಕು. ನಿತ್ಯ 10 ಸಾವಿರ ವಾಹನಗಳು ಸಂಚರಿಸಿದರೆ ಮಾತ್ರ ನಾಲ್ಕುಪಥದ ರಸ್ತೆ ಮಾಡಬೇಕೆಂಬ ನಿಯಮವಿದೆ. ಆದರೆ, ಮಡಿಕೇರಿ–ಕುಶಾಲನಗರದ ನಡುವೆ ಅಷ್ಟು ಪ್ರಮಾಣದಲ್ಲಿ ವಾಹನಗಳೇ ಸಂಚರಿಸುವುದಿಲ್ಲ. ಹೀಗಾಗಿ, ಯೋಜನೆಯ ಹಿಂದೆ ಅನ್ಯ ಉದ್ದೇಶವಿದೆ’ ಎಂದು ದೂರುತ್ತಾರೆ.

‘ಈಗಿರುವ 22 ಅಡಿ ಅಗಲದ ರಸ್ತೆಯನ್ನು ವಿಸ್ತರಿಸಿದರೆ ಅನಾಹುತವೇ ಹೆಚ್ಚು. ವನ್ಯಪ್ರಾಣಿಗಳಿಗೂ ಸಮಸ್ಯೆ ಆಗಲಿದೆ’ ಎಂದು ಹೇಳುತ್ತಾರೆ ಪರಿಸರ ಪ್ರೇಮಿಗಳು.

‘ಜಿಲ್ಲೆಯ ಮೂಲಕ ಇನ್ನೂ ಎರಡು ರೈಲು ಮಾರ್ಗ, ನಾಲ್ಕು ದ್ವಿಪಥ ರಾಜ್ಯ ಹೆದ್ದಾರಿ ನಿರ್ಮಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಇದಕ್ಕೆ ₹ 10 ಸಾವಿರ ಕೋಟಿ ಖರ್ಚಾಗಲಿದೆ. ಎಲ್ಲ ಯೋಜನೆಗಳೂ ಕಾರ್ಯರೂಪಕ್ಕೆ ಬಂದರೆ ಜಿಲ್ಲೆಯಲ್ಲಿ ಲಕ್ಷಾಂತರ ಮರಗಳನ್ನು ಕಡಿಯಬೇಕಾಗುತ್ತದೆ’ ಎಂದು ವೇದಿಕೆ ಅಧ್ಯಕ್ಷ ರಾಜೀವ್‌ ಬೋಪಯ್ಯ ಆತಂಕ ವ್ಯಕ್ತಪಡಿಸುತ್ತಾರೆ.  

**

ಮಡಿಕೇರಿಯ ಸುದರ್ಶನ ವೃತ್ತದಿಂದ ಮಂಗಳೂರು ರಸ್ತೆಗೆ ಸಂಪರ್ಕ ಕಲ್ಪಿಸಲು ಎಲಿವೇಟೆಡ್‌ ಕಾರಿಡಾರ್‌ (ಎತ್ತರಿಸಿದ ರಸ್ತೆ) ನಿರ್ಮಿಸಲು ತೀರ್ಮಾನಿಸಲಾಗಿದೆ. ಅತಿವೃಷ್ಟಿ ಅಥವಾ ಲಘು ಭೂಕಂಪನವಾದರೂ ಈ ರಸ್ತೆ ಕುಸಿದು ಅಪಾಯ ತಂದೊಡ್ಡುವ ಸಾಧ್ಯತೆಯಿದೆ.
– ಸಿ.ಪಿ. ಮುತ್ತಣ್ಣ, ಅಧ್ಯಕ್ಷ, ವನ್ಯಜೀವಿ ಸಂಘ

**

ಸಂತ್ರಸ್ತರು ಇನ್ನೂ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಅವರಿಗೆ ‘ವಿಶೇಷ ಪ್ಯಾಕೇಜ್‌’ಗೆ ಹಣವಿಲ್ಲ. ಅದೇ ಹೆದ್ದಾರಿ ವಿಸ್ತರಣೆಯಂಥ ಯೋಜನೆಗಳಿಗೆ ಮಾತ್ರ ಸರ್ಕಾರದಲ್ಲಿ ಹಣವಿದೆಯೇ? 
– ರಾಜೀವ್‌ ಬೋಪಯ್ಯ, ಅಧ್ಯಕ್ಷ, ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !