ಅರ್ಹರಿಗಿಲ್ಲ ಗ್ರಾಮೀಣ ಮೀಸಲಾತಿ

7
ಪಟ್ಟಣದಲ್ಲಿ ಕಲಿಯುವ ಕುಗ್ರಾಮದ ಮಕ್ಕಳಿಗೆ ಸಿಗದ ಲಾಭ

ಅರ್ಹರಿಗಿಲ್ಲ ಗ್ರಾಮೀಣ ಮೀಸಲಾತಿ

Published:
Updated:

ಕಾರವಾರ: ಶಿಕ್ಷಣ ಹಾಗೂ ಉದ್ಯೋಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಒದಗಿಸಿರುವ ಶೇ 5ರ ಸಮಾನಾಂತರ ಮೀಸಲಾತಿಯು ಮೂಲ ಉದ್ದೇಶವನ್ನು ಈಡೇರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಶಾಲೆ ಇರುವ ಪ್ರದೇಶವನ್ನು ಮಾತ್ರ ಪರಿಗಣಿಸಿ, ವಿದ್ಯಾರ್ಥಿಯ ಹಿನ್ನೆಲೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಹಲವರು ಆಕ್ಷೇಪಿಸಿದ್ದಾರೆ.

‘ಕನಿಷ್ಠ ಮೂಲಸೌಲಭ್ಯವೂ ಇಲ್ಲದ ಕುಗ್ರಾಮಗಳ ವಿದ್ಯಾರ್ಥಿಗಳು ಅನಿವಾರ್ಯವಾಗಿ ಪಟ್ಟಣದಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಅವರು ಸರ್ಕಾರಿ ವಸತಿ ನಿಲಯಗಳಲ್ಲಿ ಉಳಿದುಕೊಂಡು, ಸರ್ಕಾರಿ ಶಾಲೆಯಲ್ಲೇ ಓದುತ್ತಾರೆ. ಆದರೂ ಅವರು ಮೀಸಲಾತಿಗೆ ಅನರ್ಹರಾಗುತ್ತಾರೆ. ಇನ್ನೊಂದೆಡೆ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸ್ಥಾಪನೆಯಾದ, ಎಲ್ಲ ಸೌಲಭ್ಯಗಳಿರುವ ವಸತಿಯುತ, ಅಂತರರಾಷ್ಟ್ರೀಯ ಖಾಸಗಿ ಶಾಲೆಗೆ ಪಟ್ಟಣದಿಂದ ವಿದ್ಯಾರ್ಥಿಗಳು ಬರುತ್ತಾರೆ. ಅವರು ಮೀಸಲಾತಿಗೆ ಅರ್ಹರಾಗುತ್ತಾರೆ’ ಎಂದು ಕುಮಟಾದ ವಕೀಲ ಶರಶ್ಚಂದ್ರ ನಾಯಕ ಆಕ್ಷೇಪ ವ್ಯಕ್ತಪಡಿಸುತ್ತಾರೆ.

‘ಈ ಸೌಲಭ್ಯದ ಲಾಭ ಪ್ರತಿಷ್ಠಿತ ಹಾಗೂ ಪ್ರಭಾವಿ ವಲಯದ ಪಾಲಾಗುತ್ತಿದೆ. ಸರ್ಕಾರದ ಈ ನಿಯಮ ನೈಜ ಗ್ರಾಮೀಣ ಅಭ್ಯರ್ಥಿಗಳನ್ನು ಗುರುತಿಸುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎಂದು ಅವರು ಆಕ್ಷೇಪ ವ್ಯಕ್ತಪಡಿಸುತ್ತಾರೆ.

ವಿವಿಧ ಕಾರಣಗಳಿಂದಾಗಿ ಶಾಲೆಗಳಿಂದ ದೂರವಿದ್ದವರು ಪುನಃ ಸರ್ಕಾರಿ ಶಾಲೆಗಳಿಗೆ ದಾಖಲಾದರೂ ಮೀಸಲಾತಿಯಲ್ಲಿ ಅವರಿಗೆ ಅವಕಾಶವಿಲ್ಲ. ಬಾಹ್ಯ ಅಭ್ಯರ್ಥಿಯಾಗಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೂ ಪ್ರಯೋಜನವಿಲ್ಲ. ಶಾಲಾ ಕಟ್ಟಡ ಇರುವ ಪ್ರದೇಶವನ್ನೇ ಆಧರಿಸಿ ಹಲವು ವರ್ಷಗಳ ಹಿಂದೆ ಸಿದ್ಧಪಡಿಸಿದ ಈ ನಿಯಮದ ಪರಾಮರ್ಶೆ ಆಗುವುದು ಸೂಕ್ತ ಎಂದು ಅವರು ಅಭಿಪ್ರಾಯಪಡುತ್ತಾರೆ.

ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ ಕೂಡ ಇದೇ ಅನಿಸಿಕೆ ವ್ಯಕ್ತಪಡಿಸುತ್ತಾರೆ. ‘ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯ ಸಿಗಬೇಕು. ಒಂದನೇ ತರಗತಿಯಿಂದ ಒಂಬತ್ತನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಹತ್ತನೇ ತರಗತಿಯಲ್ಲಿ ಇದ್ದಕ್ಕಿದ್ದಂತೆ ಕನ್ನಡ ಮಾಧ್ಯಮದಲ್ಲಿ ಬರೆಯಲು ಸಾಧ್ಯವಿಲ್ಲ. ಹಾಗಾಗಿ ಪೋಷಕರು ಆರಂಭದಿಂದಲೇ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸುತ್ತಾರೆ. ಇದರಿಂದ ಕನ್ನಡ ಶಾಲೆಗಳ ಉಳಿವು ಸಾಧ್ಯ’ ಎನ್ನುವುದು ಅವರ ಸಲಹೆಯಾಗಿದೆ.

‘ಮೀಸಲಾತಿಯ ಆಮಿಷ’

‘ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆಗಳು ಗ್ರಾಮೀಣ ಮೀಸಲಾತಿಯನ್ನೇ ಮುಂದಿಟ್ಟುಕೊಂಡು ಪೋಷಕರ ದಿಕ್ಕು ತಪ್ಪಿಸುತ್ತಿವೆ. ನಮ್ಮ ಶಾಲೆಗೆ ನಿಮ್ಮ ಮಕ್ಕಳನ್ನು ಸೇರಿಸಿದರೆ ಮುಂದೆ ಮೀಸಲಾತಿ ಸಿಗಲಿದೆ ಎಂಬ ಆಮಿಷ ಒಡ್ಡಲಾಗುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಪೋಷಕರೊಬ್ಬರು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !