ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಅಧಿವೇಶನದ ವೆಚ್ಚದಲ್ಲಿ ಅಕ್ರಮ ನಡೆಸಿದ ಆರೋಪ: ಎಸ್‌. ಮೂರ್ತಿ ಅಮಾನತು

Last Updated 29 ಡಿಸೆಂಬರ್ 2018, 20:06 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಗಾವಿ ಅಧಿವೇಶನದ ಖರ್ಚು– ವೆಚ್ಚದಲ್ಲಿ ಅಕ್ರಮ ನಡೆಸಿದ ಆರೋಪದ ಮೇಲೆ ವಿಧಾನಸಭೆಯ ಕಾರ್ಯದರ್ಶಿ ಎಸ್‌.ಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ.

ಅವರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಲಾಗಿದೆ. ಅಮಾನತಿನ ಅವಧಿಯಲ್ಲಿ ಒಪ್ಪಿಗೆ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದ ಆದೇಶದಲ್ಲಿ ಸೂಚಿಸಲಾಗಿದೆ.

ಬೆಳಗಾವಿ ಅಧಿವೇಶನದ ವೇಳೆ ದುಂದುವೆಚ್ಚ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಮಹಾಲೇಖಪಾಲರ ವರದಿಯಲ್ಲಿ (ಸಿಎಜಿ) ಸಹ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಕೆ.ಆರ್‌.ರಮೇಶ್‌ ಕುಮಾರ್‌ ಅವರು ವಿಧಾನಸಭಾಧ್ಯಕ್ಷರಾದ ಬಳಿಕ ಮೂರ್ತಿ ಅವರ ಆಡಳಿತಾತ್ಮಕ ಹಾಗೂ ಹಣಕಾಸು ಅಧಿಕಾರ ಮೊಟಕುಗೊಳಿಸಿದ್ದರು. ಬೆಳಗಾವಿ ಅಧಿವೇಶನದ ಖರ್ಚು– ವೆಚ್ಚದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಕಳೆದ ತಿಂಗಳು ಸೂಚನೆ ನೀಡಿದ್ದರು. ರಾಜ್ಯ ಲೆಕ್ಕಪರಿಶೋಧನೆ ಹಾಗೂ ಲೆಕ್ಕಪತ್ರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎನ್‌.ಬಿ.ಶಿವರುದ್ರಪ್ಪ ನೇತೃತ್ವದ ಐವರು ಅಧಿಕಾರಿಗಳ ತಂಡ ಲೆಕ್ಕಪರಿಶೋಧನೆ ನಡೆಸಿ ಡಿಸೆಂಬರ್‌ 2ರಂದು ವರದಿ ಸಲ್ಲಿಸಿತ್ತು.

ಎರಡೂ ಅಧಿವೇಶನಗಳಿಗೆ ಹಣಕಾಸು ಇಲಾಖೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಅಧಿನಿಯಮ 1999ರ ಕಲಂ 4 (ಜಿ) ಅಡಿ ಕ್ರಮವಾಗಿ ₹ 20 ಕೋಟಿ ಹಾಗೂ ₹ 21.57 ಕೋಟಿಗೆ ವಿನಾಯ್ತಿ ನೀಡಿತ್ತು. ಈ ಮೊತ್ತಕ್ಕಿಂತ ₹ 8.60 ಕೋಟಿ ಹೆಚ್ಚುವರಿಯಾಗಿ ಖರ್ಚು ಮಾಡಲಾಗಿದೆ ಎಂದು ತಂಡ ಆಕ್ಷೇಪಿ
ಸಿತ್ತು. ಊಟೋಪಚಾರ, ಪೆಂಡಾಲ್‌ ನಿರ್ಮಾಣ, ಸುವರ್ಣಸೌಧದ ಸುಣ್ಣ–ಬಣ್ಣ, ಕೆಮಿಕಲ್‌ ಶೌಚಾಲಯ ಹಾಗೂ ಸೊಳ್ಳೆ ಪರದೆಗಳಿಗೆ ಪಾವತಿಸಿರುವ ಬಿಲ್‌ಗಳು ಸಂದೇಹಕ್ಕೆ ಕಾರಣವಾಗಿವೆ ಎಂದೂ ಹೇಳಿತ್ತು. ಈ ವರದಿಯನ್ನು ವಿಜಯಭಾಸ್ಕರ್‌ ಅವರು ರಮೇಶ್‌ ಕುಮಾರ್ ಅವರಿಗೆ ಡಿಸೆಂಬರ್‌ 5ರಂದು ನೀಡಿದ್ದರು. ಈ ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಮೂರ್ತಿ ಅವರು ಅಂದಿನ ವಿಧಾನಸಭಾಧ್ಯಕ್ಷರಿಗೆ ನಿಯಮಾವಳಿ ರೀತಿ ಪ್ರಸ್ತಾವನೆ ಸಲ್ಲಿಸಿಲ್ಲ. ಕೆಲವು ಸಂದರ್ಭಗಳಲ್ಲಿ ವಾಸ್ತವಾಂಶ ಹಾಗೂ ನಿಯಮಗಳನ್ನು ಕಡತದಲ್ಲಿ ಮಂಡಿಸದೆ ಸಭಾಧ್ಯಕ್ಷರನ್ನು ಕತ್ತಲಲ್ಲಿ ಇಟ್ಟು ಅನುಮೋದನೆ ಪಡೆದಿದ್ದರು. ತಮ್ಮ ಜವಾಬ್ದಾರಿ ಅರಿಯದೇ ಸಭಾಧ್ಯಕ್ಷರನ್ನು ತಪ್ಪುದಾರಿಗೆ ಎಳೆದಿರುವುದು ಗುರುತರ ಕರ್ತವ್ಯಲೋಪ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವಿಶಾಲಾಕ್ಷಿ ಅವರಿಗೆ ಹೊಣೆ: ವಿಧಾನಸಭೆ ನಿರ್ದೇಶಕಿಯಾಗಿರುವ ಎಂ.ಕೆ.ವಿಶಾಲಾಕ್ಷಿ ಅವರಿಗೆ ಕಾರ್ಯದರ್ಶಿ ಹುದ್ದೆಯ ಕಾರ್ಯಭಾರ ವಹಿಸಲಾಗಿದೆ.

ನ್ಯಾಯಾಲಯದಲ್ಲಿ ಪ್ರಶ್ನೆ: ಮೂರ್ತಿ

‘ದುರುದ್ದೇಶದಿಂದ ಹಾಗೂ ದಲಿತ ಸಮುದಾಯಕ್ಕೆ ಸೇರಿದವನು ಎಂಬ ಕಾರಣಕ್ಕೆ ನನ್ನನ್ನು ಅಮಾನತು ಮಾಡಲಾಗಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇನೆ’ ಎಂದು ಎಸ್‌.ಮೂರ್ತಿ ‍ಪ್ರತಿಕ್ರಿಯಿಸಿದರು.

‘ಅಧಿವೇಶನದ ವೇಳೆ ದುಂದುವೆಚ್ಚ ಮಾಡಿರಲಿಲ್ಲ. ಅಧಿವೇಶನಕ್ಕೆ 5 ಸಾವಿರ ಅಧಿಕಾರಿಗಳು, 5 ಸಾವಿರ ಪೊಲೀಸರು, 224 ಶಾಸಕರು ಹಾಗೂ ಅವರ ಆಪ್ತ ಸಹಾಯಕರು ಸೇರಿ 900 ಜನರು, 200 ಮಂದಿ ಪತ್ರಕರ್ತರು ಬಂದಿದ್ದರು. ಅವರ ಊಟ, ವಸತಿ ಹಾಗೂ ಸಾರಿಗೆಗೆ ಖರ್ಚು ಮಾಡಲಾಗಿತ್ತು. ನಿತ್ಯ ಹತ್ತಾರು ಪ್ರತಿಭಟನೆಗಳು ನಡೆಯುತ್ತಿದ್ದವು. ಅವರಿಗೆ ಮೂಲಸೌಕರ್ಯ ಕಲ್ಪಿಸಲು ವೆಚ್ಚ ಮಾಡಲಾಗಿತ್ತು’ ಎಂದು ಅವರುಸ್ಪಷ್ಟಪಡಿಸಿದರು.

‘ಅಮಾನತು ಆದೇಶವನ್ನು ಡಿ.27ಕ್ಕೆ ಹೊರಡಿಸಲಾಗಿದೆ. ಡಿ.27 ಹಾಗೂ 28ರಂದು ನಾನು ಕಚೇರಿಯಲ್ಲೇ ಇದ್ದೆ. ಆದರೆ, ಆದೇಶವನ್ನು ಶನಿವಾರ ತಲುಪಿಸಲಾಗಿದೆ. ಇದರ ಹಿಂದೆಯೂ ದುರುದ್ದೇಶ ಅಡಗಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT