ಭಾನುವಾರ, ಆಗಸ್ಟ್ 25, 2019
27 °C

ಮಂತ್ರಾಲಯದಲ್ಲಿ ಸಪ್ತರಾತ್ರೋತ್ಸವ ಆರಂಭ

Published:
Updated:
Prajavani

ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವನ್ನು ಶ್ರಾವಣಮಾಸದ ಶುಕ್ಲಪಕ್ಷ ಚತುದರ್ಶಿ ಬುಧವಾರದಿಂದ ವಿದ್ಯುಕ್ತವಾಗಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂಧ್ರ ತೀರ್ಥ ಸ್ವಾಮೀಜಿ ಆರಂಭಿಸಿದರು.

ಧಾರ್ಮಿಕ ವಿಧಿ ವಿಧಾನಗಳ ಅನುಸಾರ ಶ್ರಾವಣ ಬಹುಳ ಪಂಚಮಿವರೆಗೂ ನಡೆಯುವ ಸಪ್ತರಾತ್ರ್ಯೋತ್ಸವ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಮೊದಲು ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು.

ಮಠದಲ್ಲಿ ಪೂರ್ಣಕುಂಭ, ವಾದ್ಯಮೇಳಗಳು, ಮಂತ್ರಘೋಷಗಳು ಮೊಳಗಿದವು. ಶ್ರೀಕಾರಹಾಕಿದ ನಂತರ ಶ್ರೀಮಠದ ಆವರಣದಲ್ಲಿ ಧ್ವಜಾರೋಹಣ, ಗೋವು, ಅಶ್ವ,ಗಜ, ಲಕ್ಷ್ಮೀ ಹಾಗೂ ಧಾನ್ಯ ಪೂಜೆಗಳನ್ನು ಸ್ವಾಮೀಜಿ ನೆರವೇರಿಸಿದರು.

ಸಪ್ತರಾತ್ರೋತ್ಸವದುದ್ದಕ್ಕೂ ಏಳು ದಿನಗಳವರೆಗೆ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆಗಳು, ಮಹಾಸಂಸ್ಥಾನ ಪ್ರತಿಮೆಗಳ ಪೂಜೆ, ಪಂಚಾಭಿಷೇಕ, ಪ್ರಾಕಾರ ರಥೋತ್ಸವ ನಡೆಯಲಿವೆ.

ರಾಯರ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ದೇಶದ ವಿವಿಧೆಡೆಯಿಂದ ಮಂತ್ರಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈಗಾಗಲೇ ಬಂದು ತಂಗಿದ್ದಾರೆ. ಆಗಸ್ಟ್‌ 16 ರಂದು ರಾಯರ ಪೂರ್ವಾರಾಧನೆ, 17 ರಂದು ಮಧ್ಯಾರಾಧನೆ ಹಾಗೂ 18 ರಂದು ಉತ್ತರಾರಾಧನೆ ನಡೆಯಲಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರಲಿದ್ದಾರೆ.

ತುಂಗಾಸ್ನಾನ:  ಈ ಬಾರಿ ತುಂಗಾನದಿಯಲ್ಲಿ ಪುಣ್ಯಸ್ನಾನ ಮಾಡುವುದಕ್ಕೆ ಭಕ್ತರಿಗೆ ಅವಕಾಶ ಒದಗಿದೆ. ನದಿಮಧ್ಯೆ ಹೋಗದಂತೆ ಭಕ್ತರಿಗೆ ಸೂಚನೆ ನೀಡಲಾಗುತ್ತಿದೆ. ಸುಗಮವಾಗಿ ಸ್ನಾನ ಮಾಡಿಕೊಳ್ಳಲು ಅನುವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

Post Comments (+)