ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹರ ಸ್ಪರ್ಧೆಗೆ ಅಭ್ಯಂತರವಿಲ್ಲ: ಆಯೋಗ

ಸ್ಪೀಕರ್‌, ಕಾಂಗ್ರೆಸ್‌, ಜೆಡಿಎಸ್‌ಗೆ ನೋಟಿಸ್‌ ಜಾರಿ: ವಿಚಾರಣೆ ನಾಳೆಗೆ
Last Updated 24 ಸೆಪ್ಟೆಂಬರ್ 2019, 2:09 IST
ಅಕ್ಷರ ಗಾತ್ರ

ನವದೆಹಲಿ: ‘ಶಾಸಕ ಸ್ಥಾನದಿಂದ ಅನರ್ಹಗೊಂಡವರು ಉಪಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅಭ್ಯಂತರವಿಲ್ಲ’ ಎಂದು ಚುನಾವಣಾ ಆಯೋಗದ ಪರ ವಕೀಲರು ಸೋಮವಾರ ಸುಪ್ರೀಂ ಕೋರ್ಟ್‌ಗೆ ಸ್ವಯಂ ಪ್ರೇರಿತ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ, ಸ್ಪರ್ಧೆಯಿಂದ ವಂಚಿತರಾಗುವ ಆತಂಕದಲ್ಲಿದ್ದ 15 ಜನ ಅನರ್ಹರಲ್ಲಿ ಆಶಾಭಾವ ಮೂಡಿದೆ.

ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಸ್ಪೀಕರ್‌ ನೀಡಿರುವ ಆದೇಶ ಪ್ರಶ್ನಿಸಿರುವ ಮೇಲ್ಮನವಿಯ ವಿಚಾರಣೆಯ ವೇಳೆ ಮಧ್ಯ ಪ್ರವೇಶಿಸಿದ ಚುನಾವಣಾ ಆಯೋಗದ ಪರ ವಕೀಲ ರಾಕೇಶ್‌ ದ್ವಿವೇದಿ, ‘ಅನರ್ಹರ ಸ್ಪರ್ಧೆಗೆ ಅವಕಾಶ ನೀಡಬಹುದಾಗಿದೆ’ ಎಂಬ ಹೇಳಿಕೆ ನೀಡಿದರು.

‘ಚುನಾವಣೆ ಪ್ರಕ್ರಿಯೆಗೆ ತಡೆ ನೀಡುವುದಕ್ಕೆ ಬರುವುದಿಲ್ಲ. ವಿಧಾನಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶ ಹೊರಡಿ ಸಿರುವ ಸ್ಪೀಕರ್‌ಗೆ, ಅನರ್ಹರನ್ನು ಸ್ಪರ್ಧೆಯಿಂದ ದೂರವಿರಿಸಲಾಗದು’ ಎಂದು ಅವರು ಹೇಳಿದರು.

ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದಲ್ಲದೆ, 2023ರವರೆಗೆ ಎಲ್ಲ 17 ಜನರನ್ನೂ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ. ಪ್ರಕರಣದ ವಿಚಾರಣೆ ಬಾಕಿ ಇರುವುದರಿಂದ ಸ್ಪರ್ಧೆಗೆ ಅವಕಾಶ ನೀಡಬೇಕು. ಇಲ್ಲವೇ, ಚುನಾವಣೆ ಪ್ರಕ್ರಿಯೆಗೇ ತಡೆ ನೀಡಬೇಕು ಎಂದು ಅನರ್ಹರ ಪರ ವಕೀಲ ಮುಕುಲ್‌ ರೋಹಟಗಿ ಕೋರಿದಾಗ ದ್ವಿವೇದಿ ಈ ಹೇಳಿಕೆ ನೀಡಿದರು.

‘ಪ್ರಕರಣದಲ್ಲಿ ಸಾಂವಿಧಾನಿಕ ಅಂಶಗಳು ಅಡಕಗೊಂಡಿದ್ದು, ಸಮಗ್ರವಾಗಿ ವಿಚಾರಣೆ ನಡೆಸುವುದು ಅಗತ್ಯ
ವಿದೆ’ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

ಅನರ್ಹರ ಪರ ವಕೀಲರಿಗೆ ಬುಧವಾರ ಹಾಗೂ ವಿಧಾನಸಭೆಯ ಸ್ಪೀಕರ್‌, ಕೆಪಿಸಿಸಿ ಹಾಗೂ ಜೆಡಿಎಸ್‌ ಪರ ವಕೀಲರಿಗೆ ಗುರುವಾರ ವಾದ ಮಂಡನೆಗೆ ಅವಕಾಶ ನೀಡಲಾಗಿದೆ.

ಅನರ್ಹತೆ ಆದೇಶವನ್ನೇ ಪ್ರಶ್ನಿಸಿರುವುದರಿಂದ ಈ ಕುರಿತು ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿ ಸ್ಪೀಕರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ಮುಖಂಡ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ನ್ಯಾಯಪೀಠ ನೋಟಿಸ್‌ ಜಾರಿ ಮಾಡಿದೆ.

ಶಾಸಕರು ರಾಜೀನಾಮೆ ಸಲ್ಲಿಸಿದ್ದರೂ ಅಂಗೀಕರಿಸದ ಸ್ಪೀಕರ್‌,ಸದಸ್ಯತ್ವವನ್ನೇ ರದ್ದುಗೊಳಿಸಿ ಆದೇಶ ನೀಡಿರುವುದು ಕಾನೂನುಬಾಹಿರ ಎಂದು ರೋಹಟಗಿ ಸೋಮವಾರದ ವಿಚಾರಣೆಯ ಆರಂಭದಲ್ಲೇ ತಿಳಿಸಿದರು.

ರಾಜೀನಾಮೆ ಸ್ವೀಕರಿಸದ ಸ್ಪೀಕರ್‌ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ, ವಿಧಾನಸಭೆಯ ಕಲಾಪದಲ್ಲಿ ಪಾಲ್ಗೊಳ್ಳುವುದಕ್ಕೆ ಶಾಸಕರ ಮೇಲೆ ಒತ್ತಡ ಹೇರುವಂತಿಲ್ಲ ಎಂಬ ಆದೇಶ ನೀಡಿತ್ತು. ಆದರೂ ಅವರನ್ನು ಪಕ್ಷ ವಿರೋಧಿ ಚಟುವಟಿಕೆಯ ಕಾರಣ ಮುಂದಿರಿಸಿ ಅನರ್ಹಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

ವೈಯಕ್ತಿಕ ಕಾರಣನೀಡಿ ಸ್ವಯಂ ಪ್ರೇರಣೆಯಿಂದ ಸಲ್ಲಿಸಲಾದ ರಾಜೀನಾಮೆಯನ್ನು ಸ್ವೀಕರಿಸದೆ ಅನರ್ಹಗೊಳಿಸಲಾಗಿದೆ ಎಂದೂ ಅವರು ದೂರಿದರು.

ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಕೈಗೊಳ್ಳುವ ಮೊದಲು ಸಂಬಂಧಿಸಿದವರ ಪ್ರತಿಕ್ರಿಯೆಗಾಗಿ ಕನಿಷ್ಠ ಏಳು ದಿನಗಳ ಕಾಲಾವಕಾಶ ನೀಡಬೇಕು. ಆದರೆ, ಸ್ಪೀಕರ್‌ ಕೇವಲಮೂರು ದಿನಗಳ ಕಾಲಾವಕಾಶದ ನೋಟಿಸ್ ಜಾರಿ ಮಾಡಿರುವುದು ಸಮ್ಮತವಲ್ಲ ಎಂದು ಅವರು ಹೇಳಿದರು.

ಈ ಸಂದರ್ಭ ಮಾತನಾಡಿದ ಕೆಪಿಸಿಸಿ ಪರ ಹಿರಿಯ ವಕೀಲ ಕಪಿಲ್‌ ಸಿಬಲ್‌, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದವರಿಗೆ ಕಳೆದ ಫೆಬ್ರುವರಿಯಲ್ಲೇ ನೋಟಿಸ್ ನೀಡಲಾಗಿತ್ತು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ರೋಹಟಗಿ, ಫೆಬ್ರುವರಿಯಲ್ಲಿ ನೋಟಿಸ್ ನೀಡಿದ್ದು ಇಬ್ಬರಿಗೆ ಮಾತ್ರ. ಮಿಕ್ಕ 15 ಜನರಿಗೆ ರಾಜೀನಾಮೆ ಸಲ್ಲಿಸಿದ ನಂತರ ನೀಡಲಾಗಿದೆ ಎಂದರು.

ಸ್ಪೀಕರ್‌ ಪರ ಹಿರಿಯ ವಕೀಲ ತುಷಾರ್ ಮೆಹ್ತಾ ವಾದ ಮಂಡಿಸಿದರು. ಅನರ್ಹ ಶಾಸಕ ಮುನಿರತ್ನ ಕಲಾಪದ ಸಂದರ್ಭ ಸಾರ್ವಜನಿಕರ ಗ್ಯಾಲರಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT