ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ನಡೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ; ಸಿಎಂಗೆ ಪತ್ರ ಬರೆದು ಅಸಮಾಧಾನ

Last Updated 16 ನವೆಂಬರ್ 2018, 20:23 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿಭಾವಂತರಿಗೆ ಸಾಮಾನ್ಯ ವರ್ಗದಡಿ ಗೆಜೆಟೆಡ್ ಹುದ್ದೆ ಪಡೆಯಲು ಇರುವ ಅವಕಾಶವನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಿತ್ತುಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ನಾಲ್ಕು ಪುಟಗಳ ಪತ್ರ ಬರೆದಿರುವ ಅವರು, ‘ಕೆಪಿಎಸ್‌ಸಿ ನಡೆಯಿಂದ ಪರಿಶಿಷ್ಟರು ಹಾಗೂ ಹಿಂದುಳಿದ ಸಮುದಾಯದವರಿಗೆ ಅನ್ಯಾಯವಾಗಿದೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನಲ್ಲಿ ಇದೇ ವಿಷಯವಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಮಾಜಿ ಸಚಿವ ಎಚ್‌.ಸಿ. ಮಹದೇವಪ್ಪ, ಮೀಸಲಾತಿ ಕಸಿದುಕೊಳ್ಳಲು ಮುಂದಾಗಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದರು. ಕೂಡಲೇ ಈ ನಡೆಯಿಂದ ಹಿಂದೆ ಸರಿಯುವಂತೆ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದರು.

‌ಇದರ ಬೆನ್ನಲ್ಲೇ, ಸಂಪುಟ ಸಹೋದ್ಯೋಗಿಯೊಬ್ಬರು ಪತ್ರ ಬರೆದಿರುವುದು ರಾಜಕೀಯ ಕೋಲಾಹಲಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಪತ್ರದಲ್ಲಿದೇನಿದೆ? ಇಲ್ಲಿಯವರೆಗಿನ ನಿಯಮಗಳ ಪ್ರಕಾರ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಮೆರಿಟ್ ಇದ್ದರೆ, ಸಾಮಾನ್ಯ ಪ್ರವರ್ಗದಡಿ ನಿಗದಿಯಾಗಿರುವ ಹುದ್ದೆಗಳಲ್ಲಿ ನೇಮಕಾತಿಯಾಗುವ ಅವಕಾಶ ಇತ್ತು. ಪರಿಶಿಷ್ಟ ಜಾತಿ, ಪಂಗಡ ಸಮುದಾಯಕ್ಕೆ ಮೀಸಲಾದ ಹುದ್ದೆಗಳ ಜತೆಗೆ, ಸಾಮಾನ್ಯ ವರ್ಗದ ಹುದ್ದೆಗಳಲ್ಲೂ ಅವಕಾಶ ಸಿಗುತ್ತಿದ್ದರಿಂದ ಪ್ರತಿಭಾವಂತರು ನೇರ ನೇಮಕ ಹೊಂದುತ್ತಿದ್ದರು. ಕೆಪಿಎಸ್‌ಸಿಯ ಈಗಿನ ನಿರ್ಧಾರ ಈ ಸಮುದಾಯಗಳನ್ನು ಅವಕಾಶ ವಂಚಿತರನ್ನಾಗಿಸುವ ಕ್ರಮ ಎಂಬುದಾಗಿ ಕೆಲವರು ತಮಗೆ ದೂರು ಸಲ್ಲಿಸಿದ್ದಾರೆ ಎಂದು ಪ್ರಿಯಾಂಕ್‌ ವಿವರಿಸಿದ್ದಾರೆ.‌

‘ಅಲಕ್ಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಸಂವಿಧಾನದಲ್ಲಿ ಸಾಮಾಜಿಕ ಮೀಸಲಾತಿ ಒದಗಿಸಲಾಗಿದೆ. ಇದನ್ನು ಸುಪ್ರೀಂಕೋರ್ಟ್‌ ವಿವಿಧ ಆದೇಶಗಳಲ್ಲೂ ಉಲ್ಲೇಖಿಸಿದೆ. ಆದರೆ, 1998,1999 ಮತ್ತು 2004ರ ಸಾಲಿನಲ್ಲಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕುರಿತು 2016ರ ಜೂನ್‌ 12ರಂದು ತೀರ್ಪು ನೀಡಿರುವ ಹೈಕೋರ್ಟ್‌, ‘ಈ ಪ್ರಕ್ರಿಯೆಯೇ ಅಸಾಂವಿಧಾನಿಕ. ಸರ್ಕಾರದ ಆದೇಶಗಳು ಮತ್ತು ನಿಯಮಗಳಿಗೆ ವಿರುದ್ಧವಾಗಿದೆ’ ಎಂದು ಹೇಳಿದೆ. ಈ ತೀರ್ಪನ್ನು ಅನ್ವಯಿಸಿ ಸಾಮಾನ್ಯ ಅರ್ಹತೆಗೆ ಮೀಸಲಿದ್ದ ಹುದ್ದೆಗಳಿಗೆ ಕೇವಲ ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ಒಳಗೊಂಡ ಮೆರಿಟ್ ಪಟ್ಟಿ ಹಾಗೂ ಮೀಸಲಾತಿ (ಎಸ್‌ಸಿ, ಎಸ್‌ಟಿ, ಇತರ ಹಿಂದುಳಿದ ವರ್ಗಗಳು) ಕೋರಿದ್ದ ಅಭ್ಯರ್ಥಿಗಳ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಬೇಕು ಎಂದು ಕೆಪಿಎಸ್‌ಸಿ ಪ‍್ರತಿಪಾದಿಸುತ್ತಿದೆ. ಹೀಗೆ ಮಾಡಿದಲ್ಲಿ ಈ ಸಮುದಾಯಗಳ ಪ್ರತಿಭಾವಂತರಿಗೆ ಘೋರ ಅನ್ಯಾಯವಾಗಲಿದೆ’ ಎಂದು ಪ್ರಿಯಾಂಕ್ ಅಭಿಪ್ರಾಯಪಟ್ಟಿದ್ದಾರೆ.

‘ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ನೇರ ಮೀಸಲಾತಿ ಪಡೆಯಲು ಅರ್ಹವಿರುವ ಸಮುದಾಯಗಳ ಜನಸಂಖ್ಯೆ ಶೇ 93ರಷ್ಟಿದೆ. ಈ ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕೆ ಮಿತಿಗೊಳಿಸಿದರೆ ಈ ಸಮುದಾಯಗಳಿಗೆ ಸಾಮಾಜಿಕ ಹಾಗೂ ಆರ್ಥಿಕವಾಗಿ ತೀವ್ರ ಹಿನ್ನಡೆಯಾಗಲಿದೆ. ಈ ಸಂಬಂಧ ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಬೇಕು’ ಎಂದು ಪತ್ರದಲ್ಲಿ ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT