ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯು ಪರೀಕ್ಷೆ ಯಶಸ್ವಿ: ಶಿಕ್ಷಣ ಸಚಿವ ಸುರೇಶ್ ಕುಮಾರ್

Last Updated 18 ಜೂನ್ 2020, 12:31 IST
ಅಕ್ಷರ ಗಾತ್ರ

ಬೆಂಗಳೂರು: ಯಾವುದೇ ಅಹಿತಕರ ಘಟನೆಯಿಲ್ಲದೇ, ಪ್ರಶ್ನೆ ಪತ್ರಿಕೆಗಳ‌ ಸೋರುವಿಕೆಯಿಲ್ಲದೇ ಮತ್ತು‌ ಉತ್ತರ ಪತ್ರಿಕೆಗಳ ನಕಲು ಪ್ರಕರಣಗಳಿಲ್ಲದೇ‌ 2020 ರ ಪಿಯುಸಿ ಪರೀಕ್ಷೆಗಳು ಸಂಪನ್ನವಾಗಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಗುರುವಾರ ನಡೆದ ಇಂಗ್ಲಿಷ್ ಪರೀಕ್ಷೆಯ ಬಳಿಕ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

ಎರಡನೇ ಪಿಯುಸಿ ಪರೀಕ್ಷೆಯಲ್ಲಿ ಉಳಿದಿದ್ದ ಕೊನೆಯ ಪತ್ರಿಕೆಯ (ಇಂಗ್ಲಿಷ್) ಪರೀಕ್ಷೆ ಇಂದು ನಡೆದಿದೆ. ರಾಜ್ಯದಾದ್ಯಂತ 1016 ಕೇಂದ್ರಗಳಲ್ಲಿ ಸುಮಾರು 5,95,000 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು.

ಇಂದು ನಾನು ಎರಡು ಕೇಂದ್ರಗಳಿಗೆ ಭೇಟಿ ನೀಡಿದ್ದೆ ( ಜಯನಗರದ ಎನ್.ಎಂ.ಕೆ.ಆರ್.ವಿ ಹಾಗೂ ಕೆಂಗೇರಿ ಉಪನಗರದ ಶೇಷಾದ್ರಿಪುರಂ ಕಾಲೇಜು). ಈ ಎರಡು ಕೇಂದ್ರಗಳಲ್ಲಿ ಒಟ್ಟು ಸುಮಾರು 2000 ಮಕ್ಕಳು ಪರೀಕ್ಷೆಗೆ ಕುಳಿತಿದ್ದರು. ಈ ಎರಡೂ ಕೇಂದ್ರಗಳ ಪ್ರತಿ ಕೊಠಡಿಯಲ್ಲಿ ಸಾಮಾಜಿಕ ಅಂತರವಿಟ್ಟುಕೊಂಡು ಪರೀಕ್ಷೆ ಬರೆಯಲು ಮಾಡಿರುವ ವ್ಯವಸ್ಥೆ ಗಮನಿಸಿದ್ದೇನೆ. ಎಲ್ಲಾ ಮಕ್ಕಳು ಮಾಸ್ಕ್ ಧರಿಸಿ ಸಂಪೂರ್ಣ ತಲ್ಲೀನತೆಯಿಂದ ಉತ್ತರಗಳನ್ನು ಬರೆಯುತ್ತಿದ್ದದ್ದು ಎದ್ದು ಕಂಡಿತು. ಪರೀಕ್ಷಾ ಕೇಂದ್ರದ ಹೊರಗಡೆಯೂ ಸಹ ಸಾಮಾಜಿಕ ಅಂತರವನ್ನು ಕಾಪಾಡಲು ವೃತ್ತಗಳನ್ನು ಬರೆದು‌ ಬಹಳ‌‌ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದಾರೆ. ಆದರೆ ಕೆಲ ಪೋಷಕರು ತಮ್ಮ ಮಕ್ಕಳು ಕಟ್ಟಡದೊಳಗೆ ಪ್ರವೇಶಿಸುವವರೆಗೂ ತಾವೂ ಜೊತೆಗಿರಬೇಕೆಂದು ಬಂದಿರುವುದು‌ ಸ್ವಲ್ಪ ವ್ಯತ್ಯಾಸಕ್ಕೆ ಕಾರಣವಾಗಿದೆ ಎಂದು ಬರೆದುಕೊಂಡಿದ್ದಾರೆ.

ಪ್ರತಿ ಪರೀಕ್ಷಾ ಕೊಠಡಿಯಲ್ಲಿ‌ ಪರೀಕ್ಷಾ ಮೇಲ್ವಿಚಾರಕರು ಸಹ‌ ಮುಖಕ್ಕೆ ಮಾಸ್ಕ್‌, ಕೈಗಳಿಗೆ ಗ್ಲೌಸ್ ಧರಿಸಿ ‌ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಒಂದು ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಸಮಯದಲ್ಲಿ ಇಬ್ಬರು ವಿದ್ಯಾರ್ಥಿಗಳ ಟೆಂಪರೇಚರ್‌ ತುಸು ಹೆಚ್ಚು‌ ಕಂಡು ಬಂದದ್ದರಿಂದ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಉತ್ತರ ಬರೆಯಲು ಅವಕಾಶ‌ ನೀಡಲಾಗಿದೆ. ರಾಜ್ಯದ 1016 ಕೇಂದ್ರಗಳ ಪೈಕಿ ಶೇ.90 ರಷ್ಟು ಕೇಂದ್ರಗಳಲ್ಲಿ ‌ಪೋಷಕರು ಹಾಗೂ ವಿದ್ಯಾರ್ಥಿಗಳು ನಾವು ಮಾಡಿರುವ ವ್ಯವಸ್ಥೆಯಲ್ಲಿ ಪಾಲ್ಗೊಂಡು ಪರೀಕ್ಷಾ ಕೇಂದ್ರಗಳ ಹೊರಗೆ ಅಂತರ ಉಳಿಸಿಕೊಳ್ಳುವುದರಲ್ಲಿ ಸಹಕರಿಸಿದ್ದಾರೆ.

ಈ ಯಶಸ್ಸಿಗೆ ಕಾರಣೀಭೂತರಾದ ಪಿಯುಸಿ ನಿರ್ದೇಶಕರಿಗೆ, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ, ಪರೀಕ್ಷೆ ಮೇಲ್ವಿಚಾರಕರಿಗೆ, ರಾಜ್ಯದ ಆರೋಗ್ಯ- ಸಾರಿಗೆ- ಗೃಹ ಇಲಾಖೆಗಳಿಗೆ ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಹೃತ್ಪೂರ್ವಕ‌ ಅಭಿನಂದನೆ‌ ಸಲ್ಲಿಸುತ್ತೇನೆ ಎಂದು ಸಚಿವರು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT