ಸೋಮವಾರ, ಜೂನ್ 14, 2021
26 °C
ಪ್ರತಿಪಕ್ಷಗಳ ವಿರುದ್ಧ ಸಂಸದೆ ಆಕ್ರೋಶ

ಸಿದ್ದರಾಮಯ್ಯ ಬಿಡುಗಡೆ ಮಾಡಿದ ಜನರಿಂದಲೇ ಗಲಭೆ: ಮಂಗಳೂರಿನಲ್ಲಿ ಶೋಭಾ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರತಿಭಟನೆ ವೇಳೆ ನಗರದಲ್ಲಿ ನಡೆದ ಗಲಭೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಬಿಡುಗಡೆ ಮಾಡಿದ್ದವರೇ ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೆಎಫ್‌ಡಿ, ಪಿಎಫ್‌ಐ ಸಂಘಟನೆಗಳನ್ನು ಪೋಷಣೆ ಮಾಡಿದ್ದಾರೆ. ಈ ಸಂಘಟನೆಗಳ ಮೇಲಿನ 45 ಪ್ರಕರಣಗಳನ್ನು ಹಿಂಪಡೆದಿದ್ದಾರೆ. 1600 ಜನರನ್ನು ಬಿಡುಗಡೆ ಮಾಡಿದ್ದಾರೆ. ಅವರು ಬಿಡುಗಡೆ ಮಾಡಿದ ಜನರೇ ಗಲಭೆ ಮಾಡಿದ್ದಾರೆ’ ಎಂದು ದೂರಿದ್ದಾರೆ.

‘ಪೊಲೀಸರ ಮನವಿಗೆ ಸಾವಿರಾರು ವಿಡಿಯೋಗಳು ಬಂದಿವೆ. ಜೆಡಿಎಸ್ ನಾಯಕ ಕುಮಾರಸ್ವಾಮಿ, ಸಿದ್ದರಾಮಯ್ಯ ರಾಜಕೀಯ ಉದ್ದೇಶದಿಂದ ಸರ್ಕಾರ ಮೇಲೆ ಆರೋಪ ಮಾಡುತ್ತಿದ್ದಾರೆ. ಕಲ್ಲು ತೂರಾಟ ಮಾಡಿದವರ ಸಂಘಟನೆಗಳನ್ನು ಪೋಷಣೆ ಮಾಡಿರೋದು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಪರಿಹಾರ ಇಲ್ಲ: ಯಡಿಯೂರಪ್ಪ ಘೋಷಣೆ

ಬೆಂಕಿ ಹಚ್ಚುವುದಾಗಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಹೇಳಿದ 24 ಗಂಟೆಗಳೊಳಗೆ ಜಿಲ್ಲೆಗೆ ಬೆಂಕಿ ಬಿದ್ದಿದೆ. ಮುಖಕ್ಕೆ ಬಟ್ಟೆ ಕಟ್ಟಿ ದಾಂಧಲೆ ಮಾಡಿದ್ದಾರೆ. ಇದು ಕಾಂಗ್ರೆಸ್ ಪ್ರಾಯೋಜಿತ ಗಲಭೆ ಎಂದು ಶೋಭಾ ದೂರಿದ್ದಾರೆ.

ಗಲಭೆಕೋರರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು. 3 ಸಾವಿರ ಮದ್ದು ಗುಂಡುಗಳನ್ನು ಗಲಭೆಗೆ ಬಳಸಲು ನೋಡಿದರು. ಆಗ ಪೊಲೀಸರು ಗುಂಡಿನ ದಾಳಿ ಮಾಡಿದ್ದಾರೆ ಎಂದು‌ ಅವರು ಸಮರ್ಥಿಸಿಕೊಂಡಿದ್ದಾರೆ.

ಕೆಎಫ್‌ಡಿ, ಪಿಎಫ್ಐ ಬಗ್ಗೆ ಕೇಂದ್ರಕ್ಕೆ ಮಾಹಿತಿ: ಶೋಭಾ
ಮಂಗಳೂರಿನ ಗಲಭೆಯಲ್ಲಿ ಸಾಮಾನ್ಯ ಮುಸ್ಲಿಮರಿಲ್ಲ. ಕೇರಳದಿಂದ ಬಂದ ಜನ ಕೃತ್ಯ ಮಾಡಿದ್ದಾರೆ. ಅಶಾಂತಿ ವಾತವರಣ ನಿರ್ಮಾಣ ಮಾಡಿದವರಿಗೆ ಪಾಠ ಕಲಿಸುತ್ತೇವೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕೆಎಫ್‌ಡಿ, ಪಿಎಫ್ಐ ಸಂಘಟನೆಗಳ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ಈ ಸಂಘಟನೆಗಳು ಕಾರ್ಯಾಚರಣೆ ಮಾಡುತ್ತಿವೆ. ಕೇಂದ್ರದ ಗೃಹ ಇಲಾಖೆ ತನಿಖೆ ನಡೆಸಿ, ಕಠಿಣ ಕ್ರ‌ಮ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ತ್ವರಿತ ಸುದ್ದಿ, ನಿಖರ ಮಾಹಿತಿಗೆ www.prajavani.net ನೋಡಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು