ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ನಿರ್ಬಂಧ ಪ್ರಕರಣ: ನಡೆಯದ ಸಭೆ

ರೊಚ್ಚಿಗೆದ್ದ ಗ್ರಾಹಕರು * 20ರಂದು ಮುಂದಿನ ಸಭೆ
Last Updated 14 ಜನವರಿ 2020, 3:55 IST
ಅಕ್ಷರ ಗಾತ್ರ

ಬೆಂಗಳೂರು: ಖಾತೆಯಿಂದ ಹಣ ವಾಪಸು ತೆಗೆಯುವ ವಿಷಯದಲ್ಲಿ ಆರ್‌ಬಿಐ ವಿಧಿಸಿರುವ ನಿರ್ಬಂಧದಿಂದ ಆತಂಕಗೊಂಡಿರುವ ಠೇವಣಿದಾರರು ಮತ್ತು ಸದಸ್ಯರು ಬಸವನಗುಡಿಯಲ್ಲಿರುವ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕಿನ ಕೇಂದ್ರ ಕಚೇರಿ ಮುಂಭಾಗದಲ್ಲಿ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಸಂಜೆ 6 ಗಂಟೆಗೆ ನೆಟ್ಟಕಲ್ಲಪ್ಪ ವೃತ್ತದ ಬಳಿ ಇರುವ ದ್ವಾರಕಾಭವನದಲ್ಲಿ ಠೇವಣಿದಾರರು ಮತ್ತು ಸದಸ್ಯರ ಸಭೆಯನ್ನು ಆಡಳಿತ ಮಂಡಳಿ ಆಯೋಜಿಸಿತ್ತು. ಆದರೆ, ಸಭೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ಬಂದುದರಿಂದ ಆತಂಕಗೊಂಡ ಪೊಲೀಸರು, ಸಭೆಮುಂದೂಡುವಂತೆ ಸೂಚಿಸಿದರು. ಈ ವೇಳೆ ಶಂಕರಮಠದಿಂದ ರಾಮಕೃಷ್ಣಾಶ್ರಮದವರೆಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಪೊಲೀಸರು ಹರಸಾಹಸಪಟ್ಟರು.

ಆರ್‌ಬಿಐ ವಿಧಿಸಿದ್ದ ನಿರ್ಬಂಧದ ಕುರಿತು ಮೊಬೈಲ್‌ ಸಂದೇಶದ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಿದ್ದ ಆಡಳಿತ ಮಂಡಳಿ, ಎಲ್ಲರಿಗೂ ಮಾಹಿತಿ ನೀಡಿ, ಗೊಂದಲ ಬಗೆಹರಿಸಲು ಮುಂದಾಗಿತ್ತು. ಸೋಮವಾರ ಬೆಳಿಗ್ಗೆ ಆರ್‌ಬಿಐ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸಂಜೆ ಗ್ರಾಹಕರ ಜತೆ ಸಭೆ ನಡೆಸಲಾಗುವುದು ಎಂದು ತಿಳಿಸಲಾಗಿತ್ತು.

ಆದರೆ, ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಸಭೆಗೆ ಬರಬಹುದು ಎನ್ನುವ ಕಾರಣದಿಂದ ಸಭೆಯನ್ನು ರಾಮಕೃಷ್ಣ ಆಶ್ರಮದ ವೃತ್ತದ ಬಳಿ ಇರುವ ಗುರು ನರಸಿಂಹ ಕಲ್ಯಾಣ ಮಂದಿರಕ್ಕೆ ಸ್ಥಳಾಂತರಿಸಲಾಗಿತ್ತು. ಕಲ್ಯಾಣ ಮಂದಿರದ ಬಳಿ ಮಧ್ಯಾಹ್ನದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ನೆರೆದರಾದರೂ ಬ್ಯಾಂಕಿನ ಅಧ್ಯಕ್ಷರು ಅಲ್ಲಿಗೆ ಬರಲಿಲ್ಲ. ಹೀಗಾಗಿ, ಸಭೆ ನಡೆಯಲಿಲ್ಲ. ಸಮಾಧಾನದ ಉತ್ತರ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಗ್ರಾಹಕರ ಆತಂಕ ಮುಗಿಲು ಮುಟ್ಟಿತ್ತು. ಈ ಪೈಕಿ, ಕೆಲವರು ರೊಚ್ಚಿಗೆದ್ದರು.

ತಡವಾಗಿ ಬಂದ ಅಧ್ಯಕ್ಷ: ಕಲ್ಯಾಣ ಮಂದಿರದ ಬಳಿ ಸಹಸ್ರಾರು ಸಂಖ್ಯೆಯಲ್ಲಿ ಗ್ರಾಹಕರು ಜಮಾಯಿಸಿದ್ದು ಮತ್ತು ಅವರ ಆಕ್ರೋಶ ಮುಗಿಲು ಮುಟ್ಟಿದ್ದರಿಂದ ಸಭೆ ನಡೆಸುವುದು ಅಪಾಯಕ್ಕೆ ಕಾರಣ ಆಗಬಹುದು ಎನ್ನುವ ಸಲಹೆಯನ್ನು ಬ್ಯಾಂಕ್ ಆಡಳಿತ ಮಂಡಳಿಗೆ ಪೊಲೀಸರು ನೀಡಿದ್ದರು. ಹೀಗಾಗಿ, ಅಧ್ಯಕ್ಷ ರಾಮಕೃಷ್ಣ ಅವರು ಮೊದಲಿಗೆ ಸಭೆ ನಡೆಯುವ ಸ್ಥಳಕ್ಕೆ ಬರಲಿಲ್ಲ. ಬಳಿಕ, ಇಂದಿನ ಸಭೆ ರದ್ದುಪಡಿಸಲಾಗಿದ್ದು, ಇದೇ 20ರಂದು ನ್ಯಾಷನಲ್‌ ಮೈದಾನದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಆಡಳಿತ ಮಂಡಳಿ ಸದಸ್ಯರು ಪ್ರಕಟಿಸಿದ ಬಳಿಕ ಗ್ರಾಹಕರು ಚದುರಿದರು. ಗ್ರಾಹಕರ ಸಂಖ್ಯೆ ಕಡಿಮೆಯಾದ ಬಳಿಕ ಅಧ್ಯಕ್ಷರು ಅಲ್ಲಿಗೆ ಬಂದರು. ಈ ವೇಳೆ ಅಧ್ಯಕ್ಷರ ಆರೋಗ್ಯದಲ್ಲೂ ಏರುಪೇರು ಉಂಟಾಗಿದ್ದು, ಅಲ್ಲಿದ್ದವರು ಅವರನ್ನು ಸಮಾಧಾನಪಡಿಸಿದರು ಎಂದು ಗ್ರಾಹಕರೊಬ್ಬರು ತಿಳಿಸಿದರು.

ಸ್ಥಳದಲ್ಲಿದ್ದ ಸಮುದಾಯದ ಮುಖಂಡ ಕೃಷ್ಣ ಮಾತನಾಡಿ, ‘ಪಟ್ಟಣ ಬ್ಯಾಂಕ್‍ಗಳ ಮಹಾಮಂಡಲದ ಜತೆಗೆ ಶಾಸಕ ಎಚ್.ಕೆ. ಪಾಟೀಲರು ಶೀಘ್ರದಲ್ಲೇ ಸಭೆ ನಡೆಸಲಿದ್ದಾರೆ. ಮಹಾಮಂಡಲದ ನಿರ್ದೇಶಕ ರಮೇಶ್‍ಬಾಬು ಅವರೂ ಸಭೆ ನಡೆಸಲಿದ್ದು, ಈ ಸಭೆಯ ಬಳಿಕ ಬ್ಯಾಂಕಿನ ಬಗ್ಗೆ ಮತ್ತು ಸಮಸ್ಯೆಯ ಸ್ಪಷ್ಟ ಚಿತ್ರಣ ಸಿಗಲಿದೆ. ನಂತರ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಯಲಿದೆ’ ಎಂದರು.

ಅಲ್ಲಿದ್ದ ಕೆಲವರ ಜೊತೆ ಚರ್ಚಿಸಿದ ಅಧ್ಯಕ್ಷರು, ‘ಬ್ಯಾಂಕಿನ ವಸೂಲಾಗದ ಸಾಲ ₹ 350 ಕೋಟಿಯಷ್ಟಿದೆ. ಅದನ್ನು ಮಾರ್ಚ್‌ ತಿಂಗಳ ಒಳಗೆ ವಸೂಲು ಮಾಡುತ್ತೇವೆ. ಠೇವಣಿದಾರರು ಆತಂಕಕ್ಕೆ ಒಳಗಾಗುವುದು ಬೇಡ’ ಎಂದು ಸಮಾಧಾನಪಡಿಸಿದರು.

ಮಧ್ಯಪ್ರವೇಶಿಸಿದ ತೇಜಸ್ವಿ ಸೂರ್ಯ: ಈ ಮಧ್ಯೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಜೊತೆ ಮಾತನಾಡಿದರು. ಬಳಿಕ ಎಸಿಪಿ ಜೊತೆ
ಮೊಬೈಲ್‌ನಲ್ಲಿರುವ ಲೌಡ್‌ ಸ್ಪೀಕರ್‌ನಲ್ಲಿ ಕೇಂದ್ರದ ಸಚಿವರ ಜೊತೆ ಮಾತನಾಡಿರುವ ವಿಷಯವನ್ನು ಗ್ರಾಹಕರಿಗೆ ತಿಳಿಸಿದರು. ‘ಸಣ್ಣಪುಟ್ಟ ಗೊಂದಲಗಳು ಶೀಘ್ರ ಪರಿಹಾರವಾಗಲಿದೆ. ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ’ ಎಂದೂ ಹೇಳಿದರು.

ಬೆಳ್ಳಂಬೆಳಿಗ್ಗೆ ಸರದಿ ನಿಂತ ಗ್ರಾಹಕರು!

ಗ್ರಾಹಕರು ತಮ್ಮ ಉಳಿತಾಯ ಖಾತೆಯಿಂದ ₹ 35 ಸಾವಿರ ಮಾತ್ರ ಡ್ರಾ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ನಿರ್ಬಂಧ ಹೇರಿದ್ದರಿಂದ ಅಷ್ಟು ಹಣವನ್ನಾದರೂ ಪಡೆದುಕೊಳ್ಳುವ ಸಲುವಾಗಿ ಸೋಮವಾರ ನಸುಕಿನ ನಾಲ್ಕು ಗಂಟೆಯಿಂದಲೇ ಗ್ರಾಹಕರು ಬ್ಯಾಂಕಿನ ಶಾಖೆಗಳ ಮುಂದೆ ಸಾಲುಗಟ್ಟಿದ್ದರು. ಮಧ್ಯಾಹ್ನದ ವೇಳೆಗೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಬ್ಯಾಂಕ್ ಮುಂದೆ ಸಾಲುಗಟ್ಟಿದ ಬಳಿಕ, ‘ಉಳಿತಾಯ ಖಾತೆದಾರರು ಮಾತ್ರ ₹ 35 ಸಾವಿರ ಡ್ರಾ ಮಾಡಬಹುದು. ಠೇವಣಿದಾರರಿಗೆ ಆ ಅವಕಾಶ ಇಲ್ಲ’ ಎನ್ನುವ ಉತ್ತರ ಸಿಕ್ಕಿತ್ತು. ಇದರಿಂದ ಬೆಳಿಗ್ಗೆಯಿಂದಲೇ ಬ್ಯಾಂಕ್ ಎದುರು ಆತಂಕ ಮತ್ತು ಆಕ್ರೋಶದ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

ಆರ್‌ಬಿಐ ಅಧಿಕಾರಿಗಳ ಜತೆ ಇಂದು ಸಭೆ

‘ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆ ಪರಿಸ್ಥಿತಿ ಅವಲೋಕಿಸುತ್ತಿದ್ದು, ಗ್ರಾಹಕರು ಆತಂಕಕ್ಕೆ ಒಳಗಾಗದಂತೆ ಕ್ರಮ ಕೈಗೊಳ್ಳಲು ಆರ್‌ಬಿಐ ಅಧಿಕಾರಿಗಳಿಗೆ ಸೂಚಿಸಿದೆ. ಮಂಗಳವಾರ ಬೆಳಿಗ್ಗೆ 12 ಗಂಟೆಗೆ ಆರ್‌ಬಿಐ ಜತೆ ಮಹಾಮಂಡಲದ ಸಭೆ ನಡೆಯಲಿದೆ. ವಸೂಲಾಗದ ಸಾಲ (ಎನ್‍ಪಿಎ) ಕಡಿಮೆ ಮಾಡಲು ಆರ್‌ಬಿಐ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಿಯಮಗಳನ್ನು ಸಡಿಲಗೊಳಿಸಿ ಗ್ರಾಹಕರಿಗೆ ಅನುಕೂಲ ಮಾಡಿಕೊಡುವಂತೆ ಮಹಾಮಂಡಲ ಆರ್‌ಬಿಐಗೆ ಮನವಿ ಮಾಡಲಿದೆ’ ಎಂದು ರಾಜ್ಯ ಪಟ್ಟಣ ಬ್ಯಾಂಕ್‍ಗಳ ಮಹಾಮಂಡಲ ನಿರ್ದೇಶಕ ರಮೇಶ್‍ಬಾಬು ತಿಳಿಸಿದರು.

ಮಹಾರಾಷ್ಟ್ರ ಬ್ಯಾಂಕ್‌ಗೂ ನಿರ್ಬಂಧ ವಿಧಿಸಿದ್ದ ಆರ್‌ಬಿಐ

ಪಂಜಾಬ್‌ ಹಾಗೂ ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ (ಪಿಎಂಸಿ) ಗ್ರಾಹಕರು ಠೇವಣಿ ಹಿಂಪಡೆಯಲು ಆರ್‌ಬಿಐ ಕಳೆದ ವರ್ಷ ಇದೇ ರೀತಿ ನಿರ್ಬಂಧ ವಿಧಿಸಿತ್ತು. ಬ್ಯಾಂಕಿಂಗ್‌ ನಿಯಂತ್ರಣ ಕ್ರಮಗಳನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ವಿಫಲವಾಗಿರುವ ಕಾರಣ ಬ್ಯಾಂಕ್‌ ಮೇಲೆ ಈ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಲಾಗಿತ್ತು. ಮೊದಲು ಠೇವಣಿದಾರರಿಗೆ ಖಾತೆಯಿಂದ ₹ 1,000 ಹಿಂಪಡೆಯಲಷ್ಟೇ ಅವಕಾಶ ನೀಡಲಾಗಿತ್ತು. ಠೇವಣಿದಾರರು ಪ್ರತಿಭಟನೆಗೆ ಇಳಿದಿದ್ದರಿಂದ ಹಿಂಪಡೆಯುವ ಮೊತ್ತದ ಮಿತಿಯನ್ನು ₹ 40 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಈಗ ಆ ಮಿತಿಯನ್ನು ₹ 50 ಸಾವಿರಕ್ಕೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT