ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ ನಿರ್ಬಂಧ: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ಗೆ ಗ್ರಾಹಕರ ದೌಡು
Last Updated 12 ಜನವರಿ 2020, 1:53 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಹಕರು ಖಾತೆಯಿಂದ ಹಣ ವಾಪಸು ಪಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರ್ಬಂಧ ಹೇರಿದೆ ಎಂಬ ವಿಷಯ ಬಸವನಗುಡಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಸದಸ್ಯರು ಮತ್ತು ಠೇವಣಿದಾರರಲ್ಲಿ ತೀವ್ರ ಆತಂಕ ಮೂಡಿಸಿದೆ.

ಆರ್‌ಬಿಐ ನಿರ್ಬಂಧ ಹೇರಿ ಶುಕ್ರವಾರ (ಜ.10) ಹೊರಡಿಸಿರುವ ಪ್ರಕಟಣೆಯ ಕುರಿತು ಮೊಬೈಲ್‍ಗಳಿಗೆ ಸಂದೇಶ ಬರುತ್ತಿದ್ದಂತೆ, ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಬ್ಯಾಂಕಿನ ಕೇಂದ್ರ ಕಚೇರಿ ಮುಂಭಾಗದಲ್ಲಿ ಶನಿವಾರ ಬೆಳಿಗ್ಗೆ ಜಮಾಯಿಸಿದ 500ಕ್ಕೂ ಹೆಚ್ಚು ಗ್ರಾಹಕರು, ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಪೈಕಿ, ಹೆಚ್ಚಿನವರು 60 ವರ್ಷ ದಾಟಿದವರು.

ಆರ್‌ಬಿಐ ಹೊರಡಿಸಿರುವ ಪ್ರಕಟಣೆಯನ್ನು ಬ್ಯಾಂಕಿನ ಗೋಡೆ ಮೇಲೆ ಅಂಟಿಸಲಾಗಿದೆ. ಅದನ್ನು ನೋಡಿ ಗ್ರಾಹಕರು ಮತ್ತಷ್ಟು ಆತಂಕಗೊಂಡರು. ಅಧ್ಯಕ್ಷರ ಕಚೇರಿಗೆ ನುಗ್ಗಲು ಯತ್ನಿಸಿದವರನ್ನು ಆಡಳಿತ ಮಂಡಳಿಯವರಲ್ಲದ ಕೆಲವರು ತಡೆದು ಸಮಾಧಾನಪಡಿಸಿದರು. ಅಲ್ಲದೆ, ವೃದ್ಧರ ಜೊತೆ ಬಂದಿದ್ದ ಮಕ್ಕಳು ಮತ್ತು ಮೊಮ್ಮಕ್ಕಳು ಸಂತೈಸಿದರು. ಸದಸ್ಯರು ಮತ್ತು ಠೇವಣಿದಾರರು ಬ್ಯಾಂಕ್‌ ಮುಂಭಾಗದ ರಸ್ತೆಯಲ್ಲಿ ಮಾಧ್ಯಮಗಳ ಜೊತೆ ಆತಂಕದಿಂದ ತಮ್ಮ ಅಳಲು ತೋಡಿಕೊಂಡರು. ಇಷ್ಟೆಲ್ಲಾ ಆದರೂ ಬ್ಯಾಂಕಿನ ಒಳಗಿದ್ದ ಅಧ್ಯಕ್ಷರು ಹೊರಗೆ ಬರಲಿಲ್ಲ.

‘ಎಲ್ಲರೂ ಒಮ್ಮೆಗೆ ಠೇವಣಿ ವಾಪಸು ಕೇಳಿದರೆ ಕಷ್ಟ. ಆದರೆ, ಯಾರ ಹಣಕ್ಕೂ ಮೋಸ ಆಗುವುದಿಲ್ಲ. ಸ್ವಲ್ಪ ದಿನ ಸಮಯ ಕೊಡಿ. ಎಲ್ಲವೂ ಸರಿಹೋಗುತ್ತದೆ' ಎಂದು ಸ್ಥಳೀಯ ಮುಖಂಡ ಕೃಷ್ಣ ಸಮಾಧಾನಪಡಿಸಲು ಯತ್ನಿಸಿದರು. ಆಗ ಅಲ್ಲಿದ್ದವರು, ‘ಬ್ಯಾಂಕಿನ ಅಧ್ಯಕ್ಷರು ಭರವಸೆ ನೀಡಲಿ’ ಎಂದು ಆಗ್ರಹಿಸಿದರು.

ಸ್ವಲ್ಪ ಸಮಯದ ಬಳಿಕ ಹೊರಗೆ ಬಂದ ಬ್ಯಾಂಕಿನ ಅಧ್ಯಕ್ಷರು‌‌, 50 ಮಂದಿ ಠೇವಣಿದಾರರನ್ನು ಮಾತ್ರ ಪ್ರತ್ಯೇಕವಾಗಿ ಕರೆದು ಸಭೆ ನಡೆಸಲು ಮುಂದಾದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು, ‘50 ಮಂದಿಗೆ ಮಾತ್ರ ಏನು ಹೇಳುತ್ತೀರಿ. ಎಲ್ಲರಿಗೂ ಉತ್ತರ ಕೊಡಿ. ಈ ಬ್ಯಾಂಕಿಗೆ ಈ ಸ್ಥಿತಿ ಬಂದಿದ್ದು ಏಕೆ. ನಮ್ಮ ಹಣ ಯಾವಾಗ ವಾಪಸು ಸಿಗುತ್ತದೆ’ ಎಂದು ಪ್ರಶ್ನಿಸಿದರು.

ಈ ಬ್ಯಾಂಕು ಸುಮಾರು ₹ 2,400 ಕೋಟಿ ವಾರ್ಷಿಕ ವಹಿವಾಟು ಹೊಂದಿದೆ. ಒಟ್ಟು ಆರು ಶಾಖೆಗಳನ್ನು ಹೊಂದಿದ್ದು, ಸಾವಿರಾರು ಮಂದಿ ಲಕ್ಷಾಂತರ ರೂಪಾಯಿ ಠೇವಣಿ ಇಟ್ಟಿದ್ದಾರೆ. ಇತ್ತೀಚೆಗೆ ಪರಿಚಯಿಸಿದ ಹೊಸ ಯೋಜನೆಗಳಿಂದ ಆಕರ್ಷಿತರಾಗಿ ಕಳೆದ ಕೆಲವು ತಿಂಗಳುಗಳಲ್ಲೇ ಸಾವಿರಾರು ಮಂದಿ ಬ್ಯಾಂಕಿನ ಸದಸ್ಯರಾಗಿದ್ದಾರೆ. ‘ರಾಜ್ಯದಲ್ಲಿ ಶೀಘ್ರದಲ್ಲೇ ಬ್ಯಾಂಕ್‌ ನಂಬರ್ ವನ್ ಸ್ಥಾನ ಪಡೆಯಲಿದೆ’ ಎಂದು ಆಡಳಿತ ಮಂಡಳಿ ಸದಸ್ಯರು ಹೇಳಿಕೊಂಡಿದ್ದರು. ಉದ್ಯೋಗದಲ್ಲಿದ್ದು ನಿವೃತ್ತರಾದ ಅನೇಕರು ತಮ್ಮ ಜೀವಿತಾವಧಿಯ ಉಳಿತಾಯದ ಹಣವನ್ನು ಇಲ್ಲಿ ಠೇವಣಿ ಇಟ್ಟಿದ್ದಾರೆ.

‘ಉಳಿತಾಯದ ಹಣವನ್ನು, ನಿವೃತ್ತಿ ನಂತರದ ಜೀವನಕ್ಕಾಗಿ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದೇನೆ. ಈ ಹಣ ಏನಾಗುತ್ತದೊ ಗೊತ್ತಿಲ್ಲ. ನಿವೃತ್ತರ ಹಣ ನುಂಗಬೇಡಿ. ಬ್ಯಾಂಕ್ ಮತ್ತು ಆರ್‌ಬಿಐನವರು ಏನು ಬೇಕಾದರೂ ಮಾಡಿಕೊಳ್ಳಲಿ. ನಮ್ಮ ಹಣ ಮರಳಿಸಲಿ’ ಎಂದು ಠೇವಣಿದಾರರೊಬ್ಬರು ಅಲವತ್ತುಕೊಂಡರು.

‘ಬ್ಯಾಂಕಿನ ನಿರ್ದೇಶಕರ ಮಾತು ಕೇಳಿ ಇಡೀ ಕುಟುಂಬದ ಉಳಿತಾಯ ಹಣವನ್ನು ಇಲ್ಲಿ ಠೇವಣಿ ಮಾಡಿದ್ದೆ. ಆರು ತಿಂಗಳವರೆಗೂ ನಾವು ಏನೂ ಹೇಳುವುದಕ್ಕೆ ಆಗಲ್ಲ ಎಂದು ಈಗ ಬ್ಯಾಂಕಿನವರು ಹೇಳುತ್ತಿದ್ದಾರೆ’ ಎಂದು ಮತ್ತೊಬ್ಬ ಠೇವಣಿದಾರ ನೊಂದು ನುಡಿದರು.

‘ಸೋಮವಾರ ಬ್ಯಾಂಕ್ ತೆರೆಯುವವರೆಗೆ ಕಾಯುತ್ತೇವೆ. ನಮ್ಮ ಹಣ ನಮಗೆ ಸಿಗಬೇಕು. ಇಲ್ಲದಿದ್ದರೆ ಬ್ಯಾಂಕಿನ ಮುಂಭಾಗದಲ್ಲಿಯೇ ಕುಳಿತು ಉಪವಾಸ ಕೈಗೊಳ್ಳುತ್ತೇವೆ’ ಎಂದೂ ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಶನಿವಾರ ಸಂಜೆಯವರೆಗೂ ಬ್ಯಾಂಕಿನ ಕಚೇರಿ ಬಳಿ ಸದಸ್ಯರು ಮತ್ತು ಠೇವಣಿದಾರರು ಇದ್ದರು.

ಆರ್‌ಬಿಐ ನೀಡಿದ ನಿರ್ದೇಶನವೇನು?
ಆರ್‌ಬಿಐ ನೀಡಿರುವ ನಿರ್ದೇಶನದಲ್ಲಿ, ‘ಆರ್‌ಬಿಐಯಿಂದ ಲಿಖಿತವಾಗಿ ಪೂರ್ವಾನುಮತಿ ಪಡೆಯದೆ ಯಾವುದೇ ಸಾಲ ನೀಡುವುದಾಗಲಿ ಅಥವಾ ಸಾಲ ನವೀಕರಣವಾಗಲಿ ಮಾಡಬಾರದು. ಬಂಡವಾಳ ಹೂಡಿಕೆ ಮಾಡಬಾರದು. ಹೊಸದಾಗಿ ಠೇವಣಿ ಸ್ವೀಕರಿಸಬಾರದು. ಆರ್‌ಬಿಐ 2020ರ ಜ. 2ರಂದು ನೀಡಿರುವ ನಿರ್ದೇಶನದಲ್ಲಿರುವುದನ್ನು ಹೊರತುಪಡಿಸಿ ಯಾವುದೇ ವಹಿವಾಟು ನಡೆಸಬಾರದು. ಅಲ್ಲದೆ, ಪ್ರತಿ ಖಾತೆಯಲ್ಲಿರುವ ಒಟ್ಟು ಠೇವಣಿ ಮೊತ್ತದಲ್ಲಿ ₹ 35 ಸಾವಿರಕ್ಕಿಂತ ಹೆಚ್ಚು ಹಣವನ್ನು ವಾಪಸು ಪಡೆಯಲು ಅವಕಾಶ ಇಲ್ಲ. ಈ ನಿರ್ದೇಶನಗಳು ಮುಂದಿನ ಆರು ತಿಂಗಳವರೆಗೆ ಜಾರಿಯಲ್ಲಿ ಇರಲಿದೆ. ಆದರೆ, ಇದರ ಮರುಪರಿಶೀಲನೆಗೆ ಅವಕಾಶ ಇದೆ.

ಠೇವಣಿದಾರರಿಗೆ ಬಂದ ಸಂದೇಶ
‘ಬ್ಯಾಂಕಿನ ಕೆಲವು ಸಾಲಗಾರರ ಖಾತೆಯಲ್ಲಿ ಆರ್‍ಬಿಐ ಲೋಪಗಳನ್ನು ಗುರುತಿಸಿದೆ. ಈ ಕಾರಣದಿಂದ ಪ್ರತಿ ಖಾತೆಯಿಂದ ಕೇವಲ ₹ 35 ಸಾವಿರ ಡ್ರಾ ಮಾಡಲು ಆರ್‌ಬಿಐ ಅವಕಾಶ ನೀಡಿದೆ. ಠೇವಣಿದಾರರು ಮತ್ತು ಷೇರುದಾರರು ಆತಂಕಗೊಳ್ಳುವ ಅಗತ್ಯವಿಲ್ಲ. ಠೇವಣಿದಾರರ ಹಣ ಸುರಕ್ಷಿತವಾಗಿದೆ. ಶೀಘ್ರದಲ್ಲೇ ಠೇವಣಿದಾರರ ಮತ್ತು ಷೇರುದಾರರ ಸಭೆ ಕರೆಯಲಾಗುವುದು’
-ಅಧ್ಯಕ್ಷರು ಮತ್ತು ಆಡಳಿತ ಮಂಡಳಿ, ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌

ಬ್ಯಾಂಕಿನ ಸ್ಪಷ್ಟೀಕರಣ
ಆರ್‌ಬಿಐ ಹೊರಡಿಸಿರುವ ಪ್ರಕಟಣೆಯಲ್ಲಿರುವ ಹಲವು ಅಂಶಗಳ ಬಗ್ಗೆ ಸ್ಪಷ್ಟೀಕರಣ ಪಡೆಯುವ ಅಗತ್ಯವಿದೆ. ಬ್ಯಾಂಕಿನ ಉನ್ನತ ಅಧಿಕಾರಿಗಳು ಸೋಮವಾರ ಆರ್‌ಬಿಐನಿಂದ ಸ್ಪಷ್ಟನೆ ಪಡೆಯಲಿದ್ದಾರೆ. ಬಳಿಕ ಬ್ಯಾಂಕಿನ ಠೇವಣಿದಾರರಿಗೆ ತಿಳಿಸಲಾಗುವುದು. ಈ ಬಗ್ಗೆ ಬ್ಯಾಂಕಿನ ಸದಸ್ಯರಾಗಲಿ, ಠೇವಣಿದಾರರಾಗಲಿ ಆತಂಕಪಡುವ ಅಗತ್ಯವಿಲ್ಲ
-ಮುಖ್ಯ ಸಲಹೆಗಾರ, ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT