ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CSK v PBKS: ಪಂಜಾಬ್‌ಗೆ ಮಣಿದ ಸೂಪರ್‌ ಕಿಂಗ್ಸ್‌

Published 1 ಮೇ 2024, 14:05 IST
Last Updated 1 ಮೇ 2024, 19:27 IST
ಅಕ್ಷರ ಗಾತ್ರ

ಚೆನ್ನೈ: ಚಿಪಾಕ್‌ನ ಮಂದ ಗತಿಯ ಪಿಚ್‌ನಲ್ಲಿ ಪಂಜಾಬ್‌ ಕಿಂಗ್ಸ್‌ನ ಸ್ಪಿನ್ನರ್‌ಗಳು ಕರಾರುವಾಕ್‌ ದಾಳಿಯ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ವನ್ನು ಕಟ್ಟಿಹಾಕಿದ ಬಳಿಕ, ಬ್ಯಾಟರ್‌ಗಳು ಉತ್ತಮ ಪ್ರದರ್ಶನ ತೋರಿದರು. ಇದರಿಂದ ‍ಪಂಜಾಬ್‌ ತಂಡವು ಬುಧ ವಾರ ನಡೆದ ಐಪಿಎಲ್‌ನ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿತು.

10 ಪಂದ್ಯಗಳನ್ನು ಆಡಿರುವ ಪಂಜಾಬ್‌ ತಂಡ ನಾಲ್ಕರಲ್ಲಿ ಗೆದ್ದು 8 ಅಂಕದೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಎಂಟರಿಂದ ಏಳನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಮೂಲಕ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿದೆ. ಅಷ್ಟೇ ಪಂದ್ಯಗಳಲ್ಲಿ 10 ಪಾಯಿಂಟ್ಸ್‌ ಸಂಪಾದಿಸಿರುವ ಚೆನ್ನೈ ತಂಡವು ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ.

ಋತುರಾಜ್ ಗಾಯಕವಾಡ ಅವರ ಅರ್ಧಶತಕದ ಬಲದಿಂದ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗೆ 162 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಅದಕ್ಕೆ ಉತ್ತರವಾಗಿ ಇನ್ನೂ 13 ಎಸೆತಗಳು ಬಾಕಿ ಇರುವಂತೆ ಪಂಜಾಬ್‌ ತಂಡವು ಮೂರು ವಿಕೆಟ್‌ಗೆ 163 ರನ್‌ ಗಳಿಸಿ, ಸತತ ಎರಡನೇ ಜಯ ದಾಖಲಿಸಿತು. ‌‌ಅಲ್ಲದೆ, ಚೆನ್ನೈ ತಂಡವನ್ನು ‌ಮುಂಬೈ ಇಂಡಿಯನ್ಸ್‌ ಬಳಿಕ ಸತತ ಐದನೇ ಬಾರಿ ಮಣಿಸಿದ ಹಿರಿಮೆಗೆ ಪಂಜಾಬ್‌ ತಂಡ ಪಾತ್ರವಾಯಿತು.

ಗುರಿ ಬೆನ್ನತ್ತಿದ ಪಂಜಾಬ್‌ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡವು 19 ರನ್‌ ಗಳಿಸುವಷ್ಟರಲ್ಲಿ
ಪ್ರಭಸಿಮ್ರನ್‌ ಸಿಂಗ್‌ (13) ಅವರ ವಿಕೆಟ್‌ ಕಳೆದುಕೊಂಡಿತು. ಆದರೆ, ಜಾನಿ ಬೆಸ್ಟೊ (46; 30ಎ, 4x7, 6x1) ಮತ್ತು ರಿಲೀ ರೂಸೊ (43; 23ಎ, 4x5, 6x2) ಎರಡನೇ ವಿಕೆಟ್‌ ಜೊತೆಯಾಟ
ದಲ್ಲಿ ಬಿರುಸಿನ 64 ರನ್‌ (37ಎ) ಸೇರಿಸಿ ತಂಡವನ್ನು ಜಯದತ್ತ ಕೊಂಡೊಯ್ದರು.

ಅವರಿಬ್ಬರೂ ನಿರ್ಗಮಿಸಿದ ಬಳಿಕ ಶಶಾಂಕ್‌ ಸಿಂಗ್‌ (ಔಟಾಗದೇ 25;26ಎ) ಮತ್ತು ಸ್ಯಾಮ್‌ ಕರನ್‌ (ಔಟಾಗದೇ 26; 20ಎ) ತಾಳ್ಮೆಯಿಂದ ತಂಡವನ್ನು ಗೆಲುವಿನ ದಡ ದಾಟಿಸಿದರು. ಅವರು ಮುರಿಯದ ನಾಲ್ಕನೇ ವಿಕೆಟ್‌ಗೆ 50 ರನ್‌ ಸೇರಿಸಿದರು. ಶಾರ್ದೂಲ್‌ ಠಾಕೂರ್‌, ರಿಚರ್ಡ್‌ ಗ್ಲೀಸನ್‌ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್‌ ಪಡೆದರು. ಚೆನ್ನೈನ ಬೌಲರ್‌ಗಳಾದ ಮಥೀಷ ಪಥಿರಾಣ ಮತ್ತು ತುಷಾರ್‌ ದೇಶಪಾಂಡೆ ಅನಾರೋಗ್ಯದ ಕಾರಣ ಅಲಭ್ಯರಾಗಿದ್ದರು.

ಗಾಯಕವಾಡ ಆಸರೆ: ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ಚೆನ್ನೈ ತಂಡಕ್ಕೆ ಗಾಯಕವಾಡ (62, 48ಎ, 4x5, 6x2) ಮತ್ತು ಅಜಿಂಕ್ಯ ರಹಾನೆ (29, 24 ಎ) ಅವರು 61 ರನ್ ಸೇರಿಸಿ ಉತ್ತಮ ಆರಂಭ ನೀಡಿದ್ದರು. ಆದರೆ ಅದಕ್ಕೆ 49 ಎಸೆತಗಳನ್ನು ಖರ್ಚು ಮಾಡಿದ್ದರು.

ಪವರ್‌ಪ್ಲೇ (ವಿಕೆಟ್‌ ನಷ್ಟವಿಲ್ಲದೇ 55) ಮುಗಿದು ಸ್ಪಿನ್ನರ್‌ಗಳು ದಾಳಿಗಿಳಿದ ನಂತರ ಬೌಂಡರಿಗಳು ಬತ್ತಿಹೋದವು. ರಹಾನೆ ಎಡಗೈ ಸ್ಪಿನ್ನರ್‌ ಹರ್‌ಪ್ರೀತ್‌ ಬ್ರಾರ್ ಬೌಲಿಂಗ್‌ನಲ್ಲಿ ಸ್ಲಾಗ್‌ ಸ್ವೀಪ್‌ಗೆ ಯತ್ನಿಸಿ ರೂಸೊ ಅವರಿಗೆ ಕ್ಯಾಚಿತ್ತರು. ಬ್ರಾರ್‌ ಮರು ಎಸೆತದಲ್ಲೇ ಶಿವಂ ದುಬೆ (0) ಅವರನ್ನು ಎಲ್‌ಬಿ ಬಲೆಗೆ ಕೆಡವಿ ದರು. ಸ್ಪಿನ್‌ಗೆ ಮದ್ದು ಅರೆಯಲು ದುಬೆ ಅವರಿಗೆ ಮೂರನೇ ಕ್ರಮಾಂಕಕ್ಕೆ ಬಡ್ತಿ ನೀಡಲಾಗಿತ್ತು.

ಮುಂದಿನ (ಹತ್ತನೇ) ಓವರಿನಲ್ಲಿ ಲೆಗ್‌ ಸ್ಪಿನ್ನರ್ ರಾಹುಲ್ ಚಾಹರ್ ಅವರು ರವೀಂದ್ರ ಜಡೇಜ (2) ಅವರನ್ನು ಎಲ್‌ಬಿ ಬಲೆಗೆ ಬೀಳಿಸಿದರು. ಆರರಿಂದ ಹತ್ತರವರೆಗಿನ ಓವರುಗಳಲ್ಲಿ ಆತಿಥೇಯ ತಂಡ ಗಳಿಸಿದ್ದು 16 ರನ್‌. ಕಳೆದು ಕೊಂಡಿದ್ದು ಮೂರು ವಿಕೆಟ್‌. ಹರ್‌ಪ್ರೀತ್ ಮತ್ತು ಚಾಹರ್ ಒಟ್ಟು 8 ಓವರುಗಳಲ್ಲಿ ಒಂದೂ ಬೌಂಡರಿ ನೀಡಲಿಲ್ಲ. ಒಟ್ಟು 33 ರನ್ ಅಷ್ಟೇ ಕೊಟ್ಟರು.

ಕರನ್‌ ಬೌಲಿಂಗ್‌ನಲ್ಲಿ ಚೆಂಡನ್ನು ಲಾಂಗ್‌ಆನ್‌ಗೆ ಸಿಕ್ಸರ್‌ ಎತ್ತಿ ಋತುರಾಜ್‌ ಅವರು ಸತತ ಮೂರನೇ ಅರ್ಧಶತಕ ದಾಟಿದರು.  ಅಲ್ಲದೆ, ಈ ಆವೃತ್ತಿಯಲ್ಲಿ ವಿರಾಟ್‌ ಕೊಹ್ಲಿ ಅವರನ್ನು ಹಿಂದಿಕ್ಕಿ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

ಚೆನ್ನೈ ಕೊನೆಯ ಐದು ಓವರುಗಳಲ್ಲಿ 50 ರನ್ ಗಳಿಸಲು ಯಶಸ್ವಿಯಾಯಿತು. ಈ ಆವೃತ್ತಿಯ ಎಂಟು ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ ಮಾಡಿದ ಎಂ.ಎಸ್‌. ಧೋನಿ ಇದೇ ಮೊದಲ ಬಾರಿ ರನೌಟ್‌ ಮೂಲಕ ಔಟಾದರು.

ಸ್ಕೋರುಗಳು: ಚೆನ್ನೈ ಸೂಪರ್‌ ಕಿಂಗ್ಸ್‌: 20 ಓವರುಗಳಲ್ಲಿ 7 ವಿಕೆಟ್‌ಗೆ 162 (ಅಜಿಂಕ್ಯ ರಹಾನೆ 29, ಋತುರಾಜ್ ಗಾಯಕವಾಡ 62, ಸಮೀರ್ ರಿಝ್ವಿ 21; ರಬಾಡ 23ಕ್ಕೆ1, ಹರ್‌ಪ್ರೀತ್ ಬ್ರಾರ್‌ 17ಕ್ಕೆ2, ರಾಹುಲ್ ಚಾಹರ್ 16ಕ್ಕೆ2). ಪಂಜಾಬ್ ಕಿಂಗ್ಸ್‌:17.5 ಓವರ್‌ಗಳಲ್ಲಿ 3ಕ್ಕೆ 163 (ಜಾನಿ ಬೆಸ್ಟೊ 46, ರಿಲೀ ರೋಸೋ 43, ಶಶಾಂಕ್‌ ಸಿಂಗ್‌ ಔಟಾಗದೇ 25, ಸ್ಯಾಮ್‌ ಕರನ್‌ ಔಟಾಗದೇ 26; ಶಿವಂ ದುಬೆ 14ಕ್ಕೆ 1). ಪಂದ್ಯದ ಆಟಗಾರ: ಹರಪ್ರೀತ್‌ ಬ್ರಾರ್‌. ಫಲಿತಾಂಶ: ಪಂಜಾಬ್‌ ಕಿಂಗ್ಸ್‌ಗೆ 7 ವಿಕೆಟ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT