ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡವ ಪ್ರೀಮಿಯರ್ ಲೀಗ್: ಕೂರ್ಗ್ ಬ್ಲಾಸ್ಟರ್ಸ್, ಪ್ರಗತಿ ಕ್ರಿಕೆಟರ್ಸ್‌ಗೆ ಜಯ

ಮಡಿಕೇರಿಯಲ್ಲಿ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಆರಂಭ
Published 1 ಮೇ 2024, 16:01 IST
Last Updated 1 ಮೇ 2024, 16:01 IST
ಅಕ್ಷರ ಗಾತ್ರ

ಮಡಿಕೇರಿ: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಲೆದರ್ ಬಾಲ್ ‘ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲ ದಿನ ಕೂರ್ಗ್ ಬ್ಲಾಸ್ಟರ್ಸ್ ತಂಡವು ಕೊಡವ ಟ್ರೈಬ್ ವಿರುದ್ಧ 4 ವಿಕೆಟ್‌ಗಳ ಜಯ ಪಡೆಯಿತು.

ಮೊದಲು ಬ್ಯಾಟ್ ಮಾಡಿದ ಕೊಡವ ಟ್ರೈಬ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್‍ ಗಳಿಸಿತು. ಇದಕ್ಕೆ ಪ್ರತಿಯಾಗಿ ಕೂರ್ಗ್ ಬ್ಲಾಸ್ಟರ್ಸ್ ತಂಡ 17.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ವಿಜೇತ ತಂಡದ ಪರವಾಗಿ ಆಲ್ ರೌಂಡ್ ಆಟ ಪ್ರದರ್ಶನ ನೀಡಿದ ಕಾರ್ತಿಕ್ ಅವರು 14 ಎಸೆತಗಳಲ್ಲಿ 44 ರನ್‍ಗಳನ್ನು ಗಳಿಸಿದರು. ಜೊತೆಗೆ, ಕೊಡವ ಟ್ರೈಬ್ ತಂಡದ 3 ವಿಕೆಟ್‍ಗಳನ್ನೂ ಪಡೆದರು. ಇವರು ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.

ಪ್ರಗತಿ ಕ್ರಿಕೆಟರ್ಸ್‌ಗೆ ಎಂಟಿಬಿ ರಾಯಲ್ಸ್ ವಿರುದ್ಧ 52 ರನ್‌ಗಳ ಜಯ ಒಲಿಯಿತು. ಪ್ರಗತಿ ಕ್ರಿಕೆಟರ್ಸ್‌ ನೀಡಿದ 125 ರನ್‌ಗಳ ಗುರಿಯನ್ನು ಬೆನ್ನತ್ತಿದ ಎಂಟಿಬಿ ರಾಯಲ್ಸ್ ತಂಡ 73 ರನ್‌ಗಳನ್ನಷ್ಟೇ ಗಳಿಸಿತು. ಶಶಾಂಕ್ ಕಾರ್ಯಪ್ಪ ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.

ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಸಲಹೆ

ಇದಕ್ಕೂ ಮುನ್ನ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಹೈಕೋರ್ಟ್ ಹಿರಿಯ ವಕೀಲ ಮುಕ್ಕಾಟಿರ ತಿಮ್ಮಯ್ಯ ನಾಣಯ್ಯ, ‘ಕೊಡಗಿನ ಜನರ ಬಹುಕಾಲದ ಬೇಡಿಕೆಯಾಗಿರುವ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಯ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಕೂರ್ಗ್ ಕ್ರಿಕೆಟ್ ಫೌಂಡೇಷನ್ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತಾಗಲಿ ಎಂದು ಶುಭಹಾರೈಸಿದರು.

ಕೊಡವ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕೂರ್ಗ್ ಕ್ರಿಕೆಟ್ ಫೌಂಡೇಶನ್‍ನ ಹಿರಿಯ ಸಲಹೆಗಾರ ಕಿಶನ್ ಮಾದಪ್ಪ, ಪಂದ್ಯಾವಳಿಯ ಮುಖ್ಯ ಸಂಚಾಲಕ ಪೊರುಕೊಂಡ ಸುನಿಲ್, ಮುಖಂಡರಾದ ಕೊಕ್ಕಲೆರ ಅಪ್ಪಯ್ಯ, ಪೊರ್ಕೊಂಡ ಡಿಂಪಲ್ ದೇಚಮ್ಮ, ಕೂರ್ಗ್ ಕ್ರಿಕೆಟ್ ಫೌಂಡೇಶನ್‌ನ ನಿರ್ದೇಶಕ ಕುಲ್ಲೇಟಿರ ಶಾಂತ ಕಾಳಪ್ಪ, ಬಾಳೆಯಡ ದಿವ್ಯ ಮಂದಪ್ಪ ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಅತಿಥಿಗಳನ್ನು ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು. ಮೇ 15ರವರೆಗೆ ಪಂದ್ಯಾವಳಿ ನಡೆಯಲಿದ್ದು, ವಿಜೇತ ತಂಡಕ್ಕೆ ಪ್ರಥಮ ಬಹುಮಾನ ₹ 1.50 ಲಕ್ಷ, ದ್ವಿತೀಯ ₹ 75 ಸಾವಿರ, ತೃತೀಯ ₹ 25 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದರು. 10 ಫ್ರಾಂಚೈಸಿಗಳನ್ನು ಒಳಗೊಂಡಂತೆ ಇದೇ ಪ್ರಥಮ ಬಾರಿಗೆ ಲೆದರ್ ಬಾಲ್ ಕ್ರೆಕೆಟ್ ಪಂದ್ಯಾವಳಿ ನಡೆಯಲಿದೆ. ಮೊದಲ ವರ್ಷದ ಫ್ರಾಂಚೈಸಿಗಳಾಗಿ ದಿ ಕೊಡವ ಬ್ರೈಟ್, ಕೊಡವ ವಾರಿಯರ್ಸ್, ವೈಲ್ಡ್ ಫ್ಲವರ್ ಹಾತೂರು, ಪ್ರಗತಿ ಕ್ರಿಕೆಟರ್ಸ್, ಕೂರ್ಗ್ ಬ್ಲಾಸ್ಟರ್ಸ್, ರಾಯಲ್ ಟೈಗರ್ಸ್, ಅಂಜಿಗೇರಿ ನಾಡ್, ಕೂರ್ಗ್ ಯುನೈಟೆಡ್, ಎಂ.ಟಿ.ಬಿ. ರಾಯಲ್ಸ್, ಟೀಮ್ ಲೀವರೇಜ್ ಭಾಗವಹಿಸಲಿದೆ.

ನಿತ್ಯವೂ ನಡೆಯಲಿದೆ 2 ಪಂದ್ಯಗಳು 20 ಓವರ್‌ಗಳ ಪಂದ್ಯ ಮೇ 15ರವರೆಗೂ ನಡೆಯಲಿದೆ ಪಂದ್ಯಾವಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT