ಮಂಗಳವಾರ, ಮಾರ್ಚ್ 9, 2021
31 °C
ರಾಜಕಾರಣಿಗಳು, ರಾಜಕೀಯ ಪಕ್ಷಗಳು ಮಠ ಬಳಸಿಕೊಳ್ಳಲು ಅವಕಾಶ ಇಲ್ಲ

‘ಶಿವಕುಮಾರ ಸ್ವಾಮೀಜಿ ಎಂದೂ ಭಾರತ ರತ್ನ ಬಯಸಿದವರಲ್ಲ’

ಎನ್‌.ಸಿದ್ದೇಗೌಡ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಅವರು (ಡಾ.ಶಿವಕುಮಾರ ಸ್ವಾಮೀಜಿ) ಎಂದಿಗೂ ಯಾವ ಪ್ರಶಸ್ತಿಯನ್ನು ಬಯಸಿದವರಲ್ಲ; ಭಾರತ ರತ್ನವನ್ನೂ ಕೂಡ–ಹೀಗೆಂದು ಸ್ಪಷ್ಟ ನುಡಿಗಳನ್ನಾಡಿದವರು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ. ಹಿರಿಯ ಶ್ರೀಗಳ ಅಗಲಿಕೆಯ ನೋವಿನ ನಡುವೆಯೇ ‘ಪ್ರಜಾವಾಣಿ’ಗೆ ಸಂದರ್ಶನ ನೀಡಿದ ಅವರು, ‘ಶರಣರು ನುಡಿದಂತೆ ಹಿರಿಯ ಶ್ರೀಗಳು ಕೋಟಿಗೊಬ್ಬ ಶರಣರಾಗಿದ್ದರು. ಅಂತಹವರನ್ನು ಮತ್ತೆ ನೋಡಲು ಇನ್ನೆಷ್ಟು ಯುಗಗಳು ಕಾಯಬೇಕೋ’ ಎಂದರು.

ಇದನ್ನೂ ಓದಿ: ಭಾರತ ರತ್ನ ಎಂದರೇನು? ಭಾರತ ರತ್ನ ನೀಡಲು ಮಾನದಂಡಗಳು, ಅರ್ಹತೆಗಳೇನು? 

ಅವರೊಂದಿಗೆ ನಡೆಸಿದ ಪ್ರಶ್ನೋತ್ತರದ ವಿವರ ಇಲ್ಲಿದೆ;

* ದೊಡ್ಡ ಮಠ, ದೊಡ್ಡ ಜವಾಬ್ದಾರಿ ಅನಿಸುತ್ತಿದೆಯೇ?

ಹಾಗೇನಿಲ್ಲ. 35 ವರ್ಷಗಳ ಕಾಲ ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ನಡೆದುಕೊಂಡು ಬಂದಿದ್ದೇವೆ. ಅವರಿಲ್ಲದ್ದನ್ನು ನೆನೆದರೆ ಕೆಲ ಕ್ಷಣ ಅನಾಥ ಮತ್ತು ಶೂನ್ಯ ಭಾವ ಅನುಭವಕ್ಕೆ ಬರುತ್ತದೆ. ಮರು ಗಳಿಗೆಯಲ್ಲಿಯೇ ಮನಸ್ಸು ಗಟ್ಟಿ ಮಾಡಿಕೊಂಡು ದೊಡ್ಡವರು ಇಲ್ಲಿಯೇ ಇದ್ದಾರೆ ಎಂದು ಕೊಂಡು ಕಾರ್ಯೋನ್ಮುಖರಾಗುತ್ತೇವೆ.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ: ನೀವು ಓದಬೇಕಾದ ಸುದ್ದಿಗಳು

* ಮಠದ ನಿರ್ವಹಣೆ ಬಗ್ಗೆ ಹಿರಿಯ ಶ್ರೀಗಳು ನಿರ್ದಿಷ್ಟವಾದ ತರಬೇತಿಯನ್ನೇನಾದರೂ ನೀಡಿದ್ದಾರೆಯೇ?

ತರಬೇತಿ ಏನೂ ಇಲ್ಲ. ಆದರೆ ಅವರು ‘ನೋಡಿ ಸ್ವಾಮಿಗಳೇ, ಇಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಎಚ್ಚರಿಕೆಯಿಂದಿರಿ, ಜವಾಬ್ದಾರಿಯಿಂದಿರಿ’ ಎಂಬ ಮಾತನ್ನು ಸಾವಿರಾರು ಸಲ ಹೇಳಿದ್ದರು. ಆ ಮಾತುಗಳೇ ನಮಗೆ ದಾರಿದೀಪ.

* ಕೆಲ ರಾಜಕಾರಣಿಗಳು, ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಮಠವನ್ನು ಬಳಸಿಕೊಳ್ಳುತ್ತಾರೆ ಎಂಬ ಆರೋಪ ಇದೆಯಲ್ಲ?

ಯಾರೂ ಮಠವನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಎಲ್ಲ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಮಠವನ್ನು, ಪೂಜ್ಯರನ್ನು ಪ್ರೀತಿಸುತ್ತಾರೆ.

* ಹಿರಿಯ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಬರದೇ ಇರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆಯಲ್ಲ?

ಮೋದಿ ಅವರು ಬರದೇ ಇರುವುದಕ್ಕೆ ಆಕ್ಷೇಪಿಸುವುದು ಅನಗತ್ಯ. ಭದ್ರತಾ ಕಾರಣಕ್ಕೆ ಅವರು ಬರಲಾಗಲಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮೊದಲಿಗೇ ಪೂಜ್ಯರಿಗೆ ಗೌರವ ಸಲ್ಲಿಸಿದ್ದಾರೆ.

* ಭವಿಷ್ಯದ ಯೋಜನೆಗಳ ಬಗ್ಗೆ ಏನಾದರೂ ಕನಸುಗಳಿವೆಯೇ?

ಹೊಸ ಯೋಜನೆಗಳಿಗಿಂತ ಈಗಿರುವ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸುವ ಸವಾಲು ನಮ್ಮ ಮುಂದಿದೆ. ಅಪೂರ್ಣವಾಗಿರುವ ಪ್ರಾರ್ಥನಾ ಮಂದಿರ, ಉದ್ಯಾನ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದು.

* ಹಿರಿಯ ಶ್ರೀಗಳ ಸ್ಮಾರಕ ನಿರ್ಮಿಸುವ ಯೋಜನೆ ಇದೆಯೇ?

ಇಲ್ಲ. ಸದ್ಯದ ಮಟ್ಟಿಗೆ ಹಿರಿಯರ ಗದ್ದುಗೆಯೇ ಸ್ಮಾರಕ. ದೊಡ್ಡ ಪ್ರಮಾಣದಲ್ಲಿ ಏನೋನೋ ಮಾಡಬೇಕು ಎಂಬ ಚಿಂತನೆಗಳು ಕೇಳಿಬಂದಿವೆ ಅಷ್ಟೆ. 

ಕಿರಿಯ ಶ್ರೀಗಳೂ ಮಾಗಡಿ ತಾಲ್ಲೂಕಿನವರು

ಶಿವಕುಮಾರ ಶ್ರೀಗಳಂತೆ ಸಿದ್ಧಲಿಂಗಸ್ವಾಮೀಜಿ ಅವರೂ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನವರು.

ಕಿರಿಯ ಶ್ರೀಗಳ ಪೂರ್ವಾಶ್ರಮದ ಹೆಸರು ವಿಶ್ವನಾಥ್. ಕಂಚುಗಲ್ ಬಂಡೇಮಠ ಗ್ರಾಮದ ಸದಾಶಿವಯ್ಯ ಮತ್ತು ಶಿವರುದ್ರಮ್ಮ ದಂಪತಿಯ ಪುತ್ರರಾಗಿ 1963ರ ಜುಲೈ 22ರಂದು ಜನಿಸಿದರು. ಹುಟ್ಟೂರಿನ ಪರಿಸರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದ ಬಳಿಕ ಪದವಿ ಪೂರ್ವ ಶಿಕ್ಷಣಕ್ಕಾಗಿ 1981ರಲ್ಲಿ ಸಿದ್ಧಗಂಗೆ ಮಠಕ್ಕೆ ಬಂದ ವಿಶ್ವನಾಥ್‌ ಅವರಿಗೆ ಆರಂಭದಿಂದಲೂ ಹಿರಿಯ ಶ್ರೀಗಳ ಒಡನಾಟ ಸಿಕ್ಕಿತು.

ಮಠದಲ್ಲಿ ಸಂಸ್ಕೃತ, ವೇದ ಅಧ್ಯಯನ ಮತ್ತು ತುಮಕೂರಿನಲ್ಲಿ ಪದವಿ ಶಿಕ್ಷಣ ಪಡೆದ ವಿಶ್ವನಾಥ್‌ ಅವರನ್ನು 1988ರಲ್ಲಿ ಮಠದ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿ, ಸಿದ್ಧಲಿಂಗ ಸ್ವಾಮೀಜಿ ಎಂದು ನಾಮಕರಣ ಮಾಡಲಾಯಿತು. 2011ರಲ್ಲಿ ಹಿರಿಯ ಶ್ರೀಗಳು ಉಯಿಲಿನ ಮೂಲಕ ಮಠದ ಸಂಪೂರ್ಣ ಜವಾಬ್ದಾರಿಯನ್ನು ಕಿರಿಯ ಶ್ರೀಗಳಿಗೆ ವಹಿಸಿಕೊಟ್ಟರು.

ಇದನ್ನೂ ಓದಿ: ಪ್ರಣವ್‌ ಮುಖರ್ಜಿ ‘ಭಾರತ ರತ್ನ’

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು