ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ ಯುವತಿ ಪರ ವಕಾಲತು ವಹಿಸುತ್ತಿಲ್ಲ: ಸಿದ್ದರಾಮಯ್ಯ

ವದಂತಿಗಳಿಗೆ ತೆರೆ ಎಳೆದ ಕಾಂಗ್ರೆಸ್ ನಾಯಕ
Last Updated 26 ಜನವರಿ 2020, 11:20 IST
ಅಕ್ಷರ ಗಾತ್ರ

ಬೆಂಗಳೂರು:‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ್ದ ಯುವತಿ ನಳಿನಿ ಪರ ವಕಾಲತು ವಹಿಸುತ್ತಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಫ್ರೀ ಕಾಶ್ಮೀರಫಲಕ ಹಿಡಿದಿದ್ದ ಯುವತಿಯ ಪರ ನಾನು ವಕಾಲತ್ತು ವಹಿಸುತ್ತಿಲ್ಲ. ನನ್ನ ಪರವಾನಗಿಯನ್ನು ಹಿಂದೆ ಅಮಾನತು ಮಾಡಿದ್ದರು. ಅಮಾನತು ತೆಗೆಯುವಂತೆ ಅರ್ಜಿ ಸಲ್ಲಿಸಿದ್ದೇನೆ. ಯುವತಿಯ ಪರ ಯಾರೇ ವಕಾಲತ್ತು ವಹಿಸಿದರೂ ಅವರಿಗೆ ಬೆಂಬಲ ನೀಡುತ್ತೇನೆ. ಈ ಬಗ್ಗೆ ಗೊಂದಲ ಬೇಡ’ ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಮೈಸೂರು ಬಾರ್ ಕೌನ್ಸಿಲ್ ಸದಸ್ಯರಾಗಿದ್ದ ಸಿದ್ದರಾಮಯ್ಯ ಅವರ ಪರವಾನಗಿಯನ್ನು ಅವರು ಮುಖ್ಯಮಂತ್ರಿಯಾಗಿದ್ದಾಗ ಅಮಾನತುಗೊಳಿಸಲಾಗಿತ್ತು.ಈಗ ಅವರು ಪರವಾನಗಿ ನವೀಕರಣಕ್ಕೆ ಮುಂದಾಗಿದ್ದಾರೆ. ಮತ್ತೆ ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಆಪ್ತರ ಬಳಿ ಸುಳಿವು ನೀಡಿದ್ದಾರೆ.ಫ್ರೀ ಕಾಶ್ಮೀರ ಫಲಕಹಿಡಿದಿದ್ದ ಯುವತಿಯ ಪರ ವಕಾಲತ್ತು ವಹಿಸುವ ಸಾಧ್ಯತೆ ಇದೆ ಎಂಬ ವದಂತಿ ಕಳೆದೆರಡು ದಿನಗಳಿಂದ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ವಿರುದ್ಧ ಕಿಡಿ:ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧವೂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬಿಜೆಪಿಯವರು ಸಂವಿಧಾನ ವಿರೋಧಿಗಳು. ಸ್ವಾತಂತ್ರ್ಯಾನಂತರ ಸಂಸತ್‌ನಲ್ಲಿ ಸಂವಿಧಾನ ಮಂಡನೆಯಾದಾಗ ಆಗಿನ ಜನಸಂಘ ಅದನ್ನು ವಿರೋಧಿಸಿತ್ತು. ಆರ್‌ಎಸ್‍ಎಸ್ ಮತ್ತು ಜನಸಂಘಗಳು ಸಂವಿಧಾನದ ಮೇಲೆ ನಂಬಿಕೆಯಿಟ್ಟವರಲ್ಲ. ಅವರಿಗೆ ಮನುವಾದ, ಮನುಸ್ಮೃತಿ ಮೇಲಷ್ಟೇ ನಂಬಿಕೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಪಕ್ಷಕ್ಕೆ ಹಾಗೂ ಜನರ ನಂಬಿಕೆಗೆ ದ್ರೋಹ ಮಾಡಿ, ಬಿಜೆಪಿ ಸೇರಿ ಚುನಾವಣೆಯಲ್ಲಿ ಸೋತು, ಅತ್ತ ಸಚಿವ ಸ್ಥಾನವೂ ಸಿಗದೆ ಇತ್ತ ಶಾಸಕರೂ ಅಲ್ಲದೆ ಅತಂತ್ರ ಸ್ಥಿತಿಯಲ್ಲಿರುವವರಿಗೆ ತಕ್ಕ ಶಿಕ್ಷೆಯಾಗುತ್ತಿದೆ. ಇದು ನ್ಯಾಯಕ್ಕೆ ಸಂದ ಜಯ’ ಎಂದೂ ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT