ಮೌನ ವಹಿಸಲು ಪಕ್ಷದ ಸಚಿವರಿಗೆಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ

7
‘ಪ್ರತ್ಯೇಕ ರಾಜ್ಯ’ ಬೇಡಿಕೆ; ಬೆಳಗಾವಿಗೆ ‘2ನೇ ರಾಜಧಾನಿ’ ಸ್ಥಾನ

ಮೌನ ವಹಿಸಲು ಪಕ್ಷದ ಸಚಿವರಿಗೆಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ

Published:
Updated:

ಬೆಂಗಳೂರು: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆ ಮತ್ತು ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಘೋಷಿಸುವ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗಳಿಂದ ಅಂತರ ಕಾಯ್ದುಕೊಳ್ಳಲು ಪಕ್ಷದ ಸಚಿವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ನಿರ್ದೇಶನ ನೀಡಿದೆ.

ಬುಧವಾರ ರಾತ್ರಿ ಭೋಜನ ಕೂಟದ ನೆಪದಲ್ಲಿ ಎಲ್ಲ ಸಚಿವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಸಿದ್ದರಾಮಯ್ಯ ಅವರು, ಪಕ್ಷದ ವರಿಷ್ಠರ ಸೂಚನೆಯನ್ನು ಸಚಿವರಿಗೆ ತಿಳಿಸಿದ್ದಾರೆ.

‘ಈ ಎರಡೂ ವಿಷಯಗಳು ಅತ್ಯಂತ ಸೂಕ್ಷ್ನವಾಗಿವೆ. ಹೀಗಾಗಿ ಯಾರೂ ಈ ಬಗ್ಗೆ ಹೇಳಿಕೆಗಳನ್ನು ನೀಡಬಾರದು ಮತ್ತು ಮೌನ ವಹಿಸಬೇಕು’ ಎಂದು ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.

‘ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಆಗಿದೆ. ಸಣ್ಣಪುಟ್ಟ ಗೊಂದಲಗಳಿದ್ದರೆ  ಸಮನ್ವಯ ಸಮಿತಿಯಲ್ಲೇ ಚರ್ಚಿಸಬೇಕು. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ಎಲ್ಲ ಸಚಿವರು ಪಕ್ಷದ ಜಿಲ್ಲಾ ಘಟಕಗಳ ಜೊತೆ ಸಂ‍ಪರ್ಕದಲ್ಲಿರಬೇಕು. ಇದು ಹೈಕಮಾಂಡ್‌ನ ಕಟ್ಟುನಿಟ್ಟಿನ ಸೂಚನೆ’ ಎಂದೂ ಅವರು ಹೇಳಿದ್ದಾರೆ.

‘ಕುಮಾರಸ್ವಾಮಿ ಕೈಗೊಳ್ಳುವ ಏಕಪಕ್ಷೀಯ ತೀರ್ಮಾನಗಳನ್ನು ಸಚಿವ ಸಂಪುಟ ಸಭೆಯಲ್ಲೇ ವಿರೋಧಿಸಬೇಕು. ಪಕ್ಷದ ಸಚಿವರ ಸಂಖ್ಯೆ ಹೆಚ್ಚಿರುವುದರಿಂದ ಈ ಬಗ್ಗೆ ಒಕ್ಕೊರಲಿನಿಂದ ಧ್ವನಿ ಎತ್ತಬೇಕು’ ಎಂದು ಸಲಹೆ ನೀಡಿದ ಸಿದ್ದರಾಮಯ್ಯ, ‘ಉಪ ಮುಖ್ಯಮಂತ್ರಿಯಾಗಿ ನೀವು ಪಕ್ಷದ ಸಚಿವರ ಬೆಂಬಲಕ್ಕೆ ನಿಲ್ಲಬೇಕು’ ಎಂದು ಜಿ. ಪರಮೇಶ್ವರ ಅವರಿಗೆ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಅದಕ್ಕೂ ಮೊದಲು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಜೊತೆ ದೂರವಾಣಿಯಲ್ಲಿ ಸಿದ್ದರಾಮಯ್ಯ ಚರ್ಚೆ ನಡೆಸಿದ್ದರು. ಬಹುತೇಕ ಎಲ್ಲ ಸಚಿವರು ಭೋಜನ ಕೂಟದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !