ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರದಲ್ಲಿ ಬಿಜೆಪಿಗೆ ಹಿಂದುತ್ವವೇ ದಾಳ

ಗೊಂದಲದ ಗೂಡಲ್ಲಿ ಗೆಲುವಿಗಾಗಿ ಡಾ. ಭರತ್‌ ಶೆಟ್ಟಿ ಹೋರಾಟ
Last Updated 29 ಏಪ್ರಿಲ್ 2018, 13:21 IST
ಅಕ್ಷರ ಗಾತ್ರ

ಮಂಗಳೂರು: ಭಿನ್ನಮತದ ಗೂಡಾಗಿ ರುವ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ವೈ. ಭರತ್‌ ಶೆಟ್ಟಿ ಸೆಣಸಾಟ ಆರಂಭಿಸಿದ್ದಾರೆ. ನಾಮಪತ್ರ ಸಲ್ಲಿಸಿದ ದಿನದಿಂದಲೇ ಪ್ರಚಾರ ಶುರು ಮಾಡಿರುವ ಅವರು ಶುಕ್ರವಾರ ಪಂಜಿಮೊಗರಿನಲ್ಲಿರುವ ಬಲ್ಲಾಳಬೀಡಿನ ಅರಸ ವಜ್ರಕುಮಾರ ಕರಣಂ ಸಾಯ ಬಲ್ಲಾಳರ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಪ್ರಚಾರ ಆರಂಭಿಸಿದರು.

ಹತ್ತಿರದ ದೈವಸ್ಥಾನದಲ್ಲಿ ಸೇರಿದ್ದ ಕಾರ್ಯಕರ್ತರ ಜೊತೆಗೆ ಮಾತುಕತೆ ನಡೆಸಿ ಪ್ರಚಾರದ ರೂಪುರೇಶೆ, ಬಿಜೆಪಿಗೆ ಮತ ಹಾಕಬೇಕಾದ ಅಗತ್ಯತೆಯ ಬಗ್ಗೆ ಮಾತನಾಡಿದರು. 11.30ರ ಸುಮಾರಿಗೆ ಕೋಡಿಕೆರೆಯ ಬಾಪೂಜಿ ನಗರ ಕಾಲೋನಿಯ ಎಲ್ಲ ಮನೆಗಳನ್ನೂ ಸಂಪರ್ಕಿಸಿ ಮತಯಾಚನೆ ಮಾಡಿದರು. ಅಲ್ಲಿದ್ದ ಹಲವಾರು ತಮಿಳು ಭಾಷಾ ನಿವಾಸಿಗಳನ್ನು ಭೇಟಿ ಮಾಡಿ ಬಿಜೆಪಿಯ ಆದ್ಯತೆಗಳ ಬಗ್ಗೆ ವಿವರವಾಗಿ ಮಾತನಾಡಿದರು. ಕೋಡಿಕಲ್‌ನ ನಾರಾಯಣ ಗುರು ಮಂದಿರದಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸಿ, ಗಣಪತಿ ದೇವಸ್ಥಾನದಲ್ಲಿ ಅನ್ನಪ್ರಸಾದವನ್ನು ಸೇವಿಸಿದರು. ಕೋಷಡಿಕಲ್‌ನಲ್ಲಿ ಮಾಧ್ಯಮದವರೊಡನೆ ಸಂವಾದ, ಕಾವೂರಿನಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಸಭೆ ನಡೆಸುವಷ್ಟರಲ್ಲಿ  ಬಿಸಿಲು ಬಾಗಿತ್ತು. ಕುಂಜತ್ತಬೈಲು, ಬೋಂದೆಲ್, ಮರಕಡ ಪ್ರದೇಶಗಳಲ್ಲಿ ಪ್ರಚಾರ ಕಾರ್ಯ ನಡೆಸುತ್ತ ಕುಳಾಯಿಯಲ್ಲಿ ಬ್ರಾಹ್ಮೀ ಸಂಘಟನೆಯ ಸದಸ್ಯರೊಡನೆ ಸಂವಾದದಲ್ಲಿ ಭಾಗವಹಿಸಿದರು. ವಿದ್ಯಾನಗರ ಕೃಷಿ ಭಜನಾ ಮಂದಿರ, ಉರುಂದಾಡಿ ಗೋಪಾಲಕೃಷ್ಣ ಭಜನಾ ಮಂದಿರ, ಪಂಜಿಮೊಗರು ಮಹಾಂಕಾಳಿ ದೈವಸ್ಥಾನ, ಗುಡ್ಡೆಯಂಗಡಿಯ ಕಲ್ಲೂರ್ಟಿ ಸಾನ, ಆತ್ರಬೈಲು ಕೋಡ್ದಬ್ಬು ದೈವಸ್ಥಾನ, ಕೂಳೂರು ಪಯ್ಯರ ಗುಡ್ಡೆಯ ಬಂಡಿ ಮುಂತಾದ ಕಡೆಗಳಿಗೆ ಭೇಟಿ ನೀಡಿ ಮತ ನೀಡುವಂತೆ ವಿನಂತಿ ಮಾಡಿಕೊಂಡರು.

‘ಮತಯಾಚನೆ ಸಂದರ್ಭದಲ್ಲಿ ಯುವಜನತೆಯ ಹುಮ್ಮಸ್ಸು ಕಂಡು ನನ್ನಲ್ಲಿ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ. ಕಾಂಗ್ರೆಸ್‌ ಸರ್ಕಾರ ಹಿಂದೂಗಳ ಭಾವನೆಗೆ ಧಕ್ಕೆ ತರುವ ಹಲವಾರು ಕೆಲಸಗಳನ್ನು ಮಾಡಿದ್ದು, ಯುವಜನತೆಯಲ್ಲಿ ಕಾಂಗ್ರೆಸ್‌ ಕಡೆಗೆ ಅಸಮಾಧಾನ, ತಾರತಮ್ಯದ ವಿರುದ್ಧ ಆಕ್ರೋಶ ಮನೆ ಮಾಡಿದೆ. ಹಿಂದೂ ಸೋದರ ಸೋದರಿಯರಲ್ಲಿ ಸುರಕ್ಷತೆಯ ಭಾವ ಮೂಡಿಸುವ ದೃಷ್ಟಿಯಿಂದ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಬೇಕಾಗಿದೆ’ ಎಂದು ಕೋಡಿಕಲ್‌ನ ಗಣಪತಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಅವರು ಹೇಳಿದರು. ಶುಕ್ರವಾರ ರಾತ್ರಿ ಕುಳಾಯಿಯಲ್ಲಿ ಬ್ರಾಹ್ಮಣರ ಸಂಘಟನೆ ಭರತ್‌ಶೆಟ್ಟಿ ಅವರಿಗೆ ಬೆಂಬಲ ಘೋಷಿಸಿತು.

ವೈದ್ಯಕೀಯ ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಸಂಘಟನೆ, ಆರ್‌ಎಸ್‌ಎಸ್‌ನತ್ತ ಒಲವು ಡಾ. ಭರತ್‌ ಶೆಟ್ಟಿ ಅವರನ್ನು ಬಿಜೆಪಿಯ ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರನ್ನಾಗಿ ಬೆಳೆಯುವಂತೆ ಮಾಡಿತು. ಯಕ್ಷಗಾನ ಪ್ರಸಂಗಕರ್ತ ಡಾ. ಚಂದ್ರಶೇಖರ ಶೆಟ್ಟಿ ವೈ. ಮತ್ತು ಚಂದ್ರಲೇಖಾ ದಂಪತಿಯ ಪುತ್ರ ಭರತ್‌ ಅವರು ಎ.ಬಿ. ಶೆಟ್ಟಿ ದಂತ ವಿಜ್ಞಾನ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದರು. ಸ್ನಾತಕೋತ್ತರ ಪದವಿ (ಎಂಡಿಎಸ್‌)ಪಡೆದಿರುವ ಅವರು ಸಂಶೋಧನಾ ಬರಹಗಳನ್ನು ಮಂಡಿಸಿದ್ದಾರೆ. ಪ್ರಸ್ತುತ ಎ.ಬಿ. ಶೆಟ್ಟಿ ದಂತ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ. ಇಂಡಿಯನ್‌ ಡೆಂಟಲ್‌ ಅಸೋಸಿಯೇಶನ್‌ನ ಚುನಾಯಿತ ಅಧ್ಯಕ್ಷರಾಗಿ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಚುನಾಯಿತ ಸೆನೆಟ್‌ ಸದಸ್ಯರಾಗಿ, ಎಂ.ಎಸ್‌. ರಾಮಯ್ಯ ಆನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದ ಅಕಾಡೆಮಿಕ್‌ ಕೌನ್ಸಿಲ್‌ ಸದಸ್ಯರಾಗಿ ಸಂಘಟನಾತ್ಮಕ ಕೆಲಸಗಳನ್ನು ಮಾಡಿದ ಅನುಭವ ಅವರ ಬೆನ್ನಿಗಿದೆ. ಪತ್ನಿ ಡಾ.ಅಸಾವರಿ ಶೆಟ್ಟಿ ಅವರು ಮಣಿಪಾಲ ದಂತ ವಿಜ್ಞಾನ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕಿ ಮತ್ತು ಎರಡು ವರ್ಷದ ಪುಟಾಣಿ ಕನಿಷ್ಕ್‌ ಶೆಟ್ಟಿಯ ಬೆಚ್ಚನೆಯ ಕುಟುಂಬ ಅವರದು.

ಸಂಘ ಶಿಕ್ಷಣ ಪೂರೈಸಿದ್ದ ಅವರು ಬಿಜೆಪಿ ಯುವಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಸರ್ದಾರ್‌ ವಲ್ಲಭ ಬಾಯಿ ಪಟೇಲ್‌ ಏಕತಾ ಪ್ರತಿಮೆಗಾಗಿ ಲೋಹ ಸಂಗ್ರಹಣಾ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಮತಗಳ ಸೆಳೆಯುವ ಗುರಿ

ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ತಂದುಕೊಟ್ಟಿದ್ದ ಕೃಷ್ಣ ಜೆ. ಪಾಲೇಮಾರ್‌ ಅವರು 2013ರ ಚುನಾವಣೆಯಲ್ಲಿ 5,373 ಮತಗಳ ಅಂತರದಿಂದ ಸೋತಿದ್ದರು. ಈ ಅಂತರವನ್ನು ತುಂಬುವ ಮೂಲಕ ಬಹುಮತ ಸಾಧಿಸಬೇಕಾದ ಟಾರ್ಗೆಟ್‌ ಡಾ. ಭರತ್‌ ಅವರ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT