ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್ ಸಿಟಿ ಕಾಮಗಾರಿ ಚುರುಕು

ರಾಜ್ಯದ ಏಳು ಮಹಾನಗರಗಳಲ್ಲಿ ₹5,200 ಕೋಟಿ ಮೊತ್ತದಲ್ಲಿ ಅಭಿವೃದ್ಧಿ
Last Updated 31 ಜನವರಿ 2019, 20:23 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ರಾಜ್ಯದ ಏಳು ಮಹಾನಗರಗಳಲ್ಲಿ ಒಟ್ಟು ₹ 5,200 ಕೋಟಿ ಮೊತ್ತದ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ತಿಳಿಸಿದರು.

ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ–ಧಾರವಾಡ, ಶಿವಮೊಗ್ಗ, ಮಂಗಳೂರು, ತುಮಕೂರು, ಬೆಂಗಳೂರು ನಗರವನ್ನು ಈ ಯೋಜನೆಯಡಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಆಯ್ಕೆ ಮಾಡಿತ್ತು. 2016ರ ಜನವರಿಯಲ್ಲಿ ಆರಂಭಗೊಂಡ ಈ ಯೋಜನೆಗೆ ಮೊದಲ ಹಂತದಲ್ಲಿ ಬೆಳಗಾವಿ ಮತ್ತು ದಾವಣಗೆರೆ ಮಹಾನಗರಗಳು ಆಯ್ಕೆಯಾಗಿದ್ದವು.

ಯೋಜನೆಯಡಿ ಆಯ್ಕೆಯಾದ ನಗರಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿ ವರ್ಷ ತಲಾ ₹ 100 ಕೋಟಿ ಒದಗಿಸಬೇಕಾಗಿದೆ. ಐದು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಬೇಕು. ಸಮ್ಮಿಶ್ರ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಏಳು ತಿಂಗಳ ಅವಧಿಯಲ್ಲಿ ಯೋಜನೆಗಳಿಗೆ ವೇಗ ನೀಡಲಾಗಿದೆ.

‘ಎಲ್ಲ ಏಳು ನಗರಗಳಲ್ಲಿ ₹1,499 ಕೋಟಿ ಮೊತ್ತದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ₹1,407 ಕೋಟಿ ಮೊತ್ತದ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ. ₹ 2,728 ಕೋಟಿ ಮೊತ್ತದ ಕಾಮಗಾರಿ ಡಿಪಿಆರ್‌ (ಸಮಗ್ರ ಯೋಜನಾ ವರದಿ) ಹಂತದಲ್ಲಿದೆ. ಈ ಕಾಮಗಾರಿಗಳಿಗೆ ಫೆಬ್ರುವರಿ ಅಂತ್ಯದೊಳಗೆ ಕಾರ್ಯಾದೇಶ ನೀಡಲಾಗುವುದು’ ಎಂದು ಸಚಿವರು ತಿಳಿಸಿದರು.

‘ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಈವರೆಗೆ ಒಟ್ಟು ₹ 7,000 ಕೋಟಿ ಬಿಡುಗಡೆ ಮಾಡಿದೆ. ವಿಶೇಷ ಉದ್ದೇಶಿತ ಘಟಕ (ಎಸ್‌ಪಿವಿ) ಕಾಮಗಾರಿ ಅನುಷ್ಠಾನದ ಮೇಲೆ ನಿಗಾ ವಹಿಸಿದೆ. ಯೋಜನೆಯ ಅನುಷ್ಠಾನ ವಿಚಾರದಲ್ಲಿ ಸದ್ಯ ರಾಜ್ಯ ಒಂಬತ್ತನೇ ಸ್ಥಾನದಲ್ಲಿದೆ’ ಎಂದು ವಿವರಿಸಿದರು.

ಸೌರ ಶಕ್ತಿಗೆ ಪ್ರೋತ್ಸಾಹ: ಮಹಾನಗರಗಳಲ್ಲಿ ಸೌರ ಶಕ್ತಿ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಿಯಮದಲ್ಲಿ ಬದಲಾವಣೆ ತರಲು ಉದ್ದೇಶಿಸಲಾಗಿದೆ ಎಂದು ಖಾದರ್‌ ಹೇಳಿದರು.

‘ಸೌರ ಫಲಕಗಳನ್ನು ಅಳವಡಿಸುವ ಸಂದರ್ಭದಲ್ಲಿ ಈವರೆಗೆ ಕಟ್ಟಡಗಳ ಎಫ್‌ಎಆರ್‌ (ಫ್ಲೋರ್‌ ಏರಿಯಾ ರೇಶಿಯೊ) ಪರಿಗಣಿಸಿ ಅನುಮತಿ ನೀಡಲಾಗುತ್ತಿತ್ತು. ಆ ಷರತ್ತು ರದ್ದುಪಡಿಸಲಾಗಿದೆ’ ಎಂದರು.

ಕಟ್ಟಡ ಬೈ–ಲಾ: ‘ಈಗಾಗಲೇ ನಗರ ಪ್ರದೇಶಗಳಿಗೆ ಏಕರೂಪದ ಕಟ್ಟಡ ಬೈ–ಲಾ (ಉಪ ನಿಯಮ) ಜಾರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT