ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಮೊತ್ತ ವಿದ್ಯಾರ್ಥಿಗಳಿಗೆ, ಗುಡಿಸಲ ವಾಸ: ಇದು ಗಾಯನ ಯೋಗಿಯ ಸಮಾಜ ಸೇವೆ

ಚಿನ್ನಮಾದುವಿನ ‘ಚಿನ್ನ’ದಂಥ ಸೇವೆ
Last Updated 26 ಡಿಸೆಂಬರ್ 2018, 19:59 IST
ಅಕ್ಷರ ಗಾತ್ರ

ಹಂಪಾಪುರ: ಎಚ್‌.ಡಿ.ಕೋಟೆ ತಾಲ್ಲೂಕು ಮಲಾರ ಗ್ರಾಮದ ಜಾನಪದ ಗಾಯಕ ಚಿನ್ನಮಾದು ಅವರು ಪ್ರಶಸ್ತಿ, ಹಾಡುಗಾರಿಕೆಯಿಂದ ತಮಗೆ ಬಂದ ಹಣವನ್ನೆಲ್ಲಾ ಬಡ ವಿದ್ಯಾರ್ಥಿಗಳಿಗೆ ನೀಡಿ ಅಪರೂಪದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕನ್ನಡ ಜಾನಪದ ಪರಿಷತ್ತು 2017ರಲ್ಲಿ ವಿಜಯಪುರದಲ್ಲಿ ಚಿನ್ನಮಾದು ಅವರಿಗೆ ‘ಜಾನಪದ ಪ್ರಪಂಚ’ ಪ್ರಶಸ್ತಿ ನೀಡಿ ₹ 1 ಲಕ್ಷ ನೀಡಿತ್ತು. ಈ ಹಣವನ್ನು ಮಹಾರಾಣಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೀಡಿದ್ದರು.

‘9 ಗ್ರಾಮಗಳ 45 ಸದಸ್ಯರು ಸೇರಿ ಮಹದೇಶ್ವರರ ಕಲಾ ಸಂಘ ರಚಿಸಿಕೊಂಡಿದ್ದೇವೆ. ಕಲಾ ಕಾರ್ಯಕ್ರಮಗಳಿಂದ ಬರುವ ಹಣವನ್ನು ಸಂಘದಿಂದ ಕೈಗೊಳ್ಳುವ ಸೇವೆಗಳಿಗೆ ಬಳಸುತ್ತೇವೆ. ₹ 2 ಲಕ್ಷದವರೆಗೆ ಉಳಿಸಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದೇವೆ. ಜತೆಗೆ ಎಂಟು ಯುವಕರಿಗೆ ವಿವಿಧ ಕಲೆಗಳ ಬಗ್ಗೆ ತರಬೇತಿ ನೀಡುತ್ತಿದ್ದೇವೆ’ ಎಂದು ಚಿನ್ನಮಾದು ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಲ್ಯದಲ್ಲಿ ಹಾಡುವುದನ್ನು ಅಭ್ಯಾಸ ಮಾಡಿಕೊಂಡ ಅವರು ಇಂದು ಗ್ರಾಮದ ಜನರಿಗೆ ಮಾದರಿ ವ್ಯಕ್ತಿಯಾಗಿದ್ದಾರೆ. ಐದು ದಶಕಗಳಿಂದ ತಮ್ಮ ಗಾಯನದ ಔತಣ ಉಣಬಡಿಸುತ್ತಿದ್ದಾರೆ. ಗಳಿಸಿದ ಹಣವನ್ನೆಲ್ಲಾ ಸ್ವಂತಕ್ಕೆ ಬಳಕೆ ಮಾಡದೆ ಬಡವರ ಏಳಿಗೆಗೆ ಮೀಸಲಿಟ್ಟಿದ್ದಾರೆ.ಗುಡಿಸಲಿನಲ್ಲಿ ವಾಸವಿರುವ ಅವರು ತಮ್ಮ ಜೀವನೋಪಾಯಕ್ಕೆ ವ್ಯವಸಾಯ ಅವಲಂಬಿಸಿದ್ದಾರೆ.

ಚಿನ್ನಮಾದು ಅವರ ವಾಸದ ಮನೆ
ಚಿನ್ನಮಾದು ಅವರ ವಾಸದ ಮನೆ

ಐದು ಮಂದಿಯ ಒಂದು ಕಲಾ ತಂಡವನ್ನು ಕಟ್ಟಿಕೊಂಡಿದ್ದಾರೆ. ಭಕ್ತಿಗೀತೆ, ಜಾನಪದ ಗೀತೆ, ಶೋಕಗೀತೆಗಳು (ಸಾವಿನ ಅಥವಾ ತಿಥಿಯ ಮನೆಗಳಲ್ಲಿ ಹಾಡುವ ಗೀತೆ), ಮಹದೇಶ್ವರ ಮಹಿಮೆ, ಮಂಟೇಸ್ವಾಮಿ, ಸಿದ್ದಪ್ಪಾಜಿ ಕಥೆ, ಅಲಂಬಾಡಿ ಗುಜ್ಜೇಗೌಡ, ಶ್ರವಣ ಸಂಹಾರ, ಬೇವಿನಟ್ಟಿ ಕಾಳಮ್ಮ, ಶರಣೆ ಶಂಕಮ್ಮ, ಮೈಲಾಳ ರಾಮ, ಬಿಳಿಗಿರಿ ರಂಗನಾಥಸ್ವಾಮಿ, ದಕ್ಷಯಜ್ಞ, ನಿಂಗರಾಜಮ್ಮನ ಕಥೆ ಸೇರಿದಂತೆ 15ಕ್ಕೂ ಹೆಚ್ಚು ಕತೆಗಳು ಇವರ ಬಾಯಲ್ಲಿ ಗೀತೆಗಳಾಗಿ ಹೊರಹೊಮ್ಮುತ್ತವೆ. ಆಕಾಶವಾಣಿ, ದೂರದರ್ಶನದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ತೋರಿಸಿದ್ದಾರೆ, ಕಲೆಗೆ ಮೆರುಗು ನೀಡಿದ್ದಾರೆ.

‘ಚಿಕ್ಕಂದಿನಲ್ಲಿ ನಾಗಮ್ಮ ಎಂಬ ಪಾತ್ರ ಮಾಡಿದ್ದೆ. ಅಂದಿನಿಂದ ಕಲೆಯ ಆರಾಧಕನಾಗಿದ್ದೇನೆ. ನಾಟಕಗಳಲ್ಲೂ ಆಸಕ್ತಿ ಬೆಳೆಸಿಕೊಂಡು ರಾಜಾವಿಕ್ರಮನ ಪಾತ್ರ ನಿರ್ವಹಿಸಿದ್ದೇನೆ. ಬಸವಣ್ಣನ ನಾಟಕದಲ್ಲಿ ಬಿಜ್ಜಳನ ಪಾತ್ರ ನಿರ್ವಹಿಸಿ ಗ್ರಾಮದವರಿಂದ ಮೆಚ್ಚುಗೆ ಪಡೆದಿದ್ದೆ’ ಎನ್ನುತ್ತಾರೆ ಚಿನ್ನಮಾದು. ಚಿನ್ನಮಾದು ಸಂಪರ್ಕ ಸಂಖ್ಯೆ: 7090448426

ಚಿನ್ನಮಾದು
ಚಿನ್ನಮಾದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT