ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಶಾಸಕರು ಅನರ್ಹ; 2023ರವರೆಗೆ ಚುನಾವಣಾ ಸ್ಪರ್ಧೆಗೆ ನಿರ್ಬಂಧ

ಸ್ಪೀಕರ್‌ ರಮೇಶ್‌ ಕುಮಾರ್‌ ಐತಿಹಾಸಿಕ ತೀರ್ಪು
Last Updated 25 ಜುಲೈ 2019, 20:14 IST
ಅಕ್ಷರ ಗಾತ್ರ

ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಮೂವರು ಶಾಸಕರನ್ನು 15 ನೇ ವಿಧಾನಸಭೆ ಅವಧಿ (2023) ಮುಗಿಯುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರಿ ಅನರ್ಹಗೊಳಿಸುವ ಐತಿಹಾಸಿಕ ತೀರ್ಪನ್ನು ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್ ನೀಡಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌–ಕಾಂಗ್ರೆಸ್‌ ಸರ್ಕಾರದಲ್ಲಿ ಭಿನ್ನಮತದ ಕಿಡಿ ಹೊತ್ತಿಸಿ, ಅನೇಕ ಬಾರಿ ಸರ್ಕಾರವನ್ನು ಇಕ್ಕಟ್ಟಿಗೆ ದೂಡಿ ಕೊನೆಗೂ ಪತನಕ್ಕೆ ಕಾರಣವಾದ 15 ಶಾಸಕರ ಪೈಕಿ ಕಾಂಗ್ರೆಸ್‌ನ ರಮೇಶ ಜಾರಕಿಹೊಳಿ (ಗೋಕಾಕ), ಮಹೇಶ ಕುಮಠಳ್ಳಿ (ಅಥಣಿ) ಹಾಗೂ ಆರ್. ಶಂಕರ್‌ (ರಾಣೆಬೆನ್ನೂರು) ಅನರ್ಹಗೊಂಡಿದ್ದಾರೆ.

ರಾಜೀನಾಮೆ ಕೊಟ್ಟ 13 ಶಾಸಕರು ಹಾಗೂ ಸದನಕ್ಕೆ ಹಾಜರಾಗದ ಶ್ರೀಮಂತ ಪಾಟೀಲ (ಇವರನ್ನು ಅನರ್ಹಗೊಳಿಸುವಂತೆ ಇರುವ ದೂರು ಸಭಾಧ್ಯಕ್ಷರ ಮುಂದಿದೆ) ಅವರ ಪ್ರಕರಣಗಳನ್ನು ಇತ್ಯರ್ಥ ಮಾಡಿಲ್ಲ.

ಗುರುವಾರ ರಾತ್ರಿ ಮಾಧ್ಯಮಗೋಷ್ಠಿ ನಡೆಸಿದ ರಮೇಶ್‌ ಕುಮಾರ್‌, ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಮಹತ್ವದ ತೀರ್ಪನ್ನು ಪ್ರಕಟಿಸಿದರು. ಅನರ್ಹತೆಗೊಳಿಸಬೇಕು ಎಂಬ ಅನೇಕ ಮನವಿಗಳು ಹಿಂದಿನ ಸಭಾಧ್ಯಕ್ಷರ ಮುಂದೆ ಬಂದಿದ್ದರೂ ಅವು ಯಾವವೂ ಇತ್ಯರ್ಥವಾಗಿರಲಿಲ್ಲ.

‘ಕೆಪಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದ ಆರ್. ಶಂಕರ್ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವುದಾಗಿ ಪತ್ರ ನೀಡಿದ್ದರು. ಅದರಂತೆ, ಅವರಿಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಲಿನಲ್ಲಿ ಆಸನವನ್ನೂ ನಿಗದಿ ಮಾಡಲಾಗಿತ್ತು. ಏತನ್ಮಧ್ಯೆ, ರಾಜ್ಯಪಾಲರನ್ನು ಭೇಟಿಯಾದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದಾಗಿ ಪತ್ರ ನೀಡುವುದರ ಜತೆಗೆ, ಬಿಜೆಪಿಗೆ ಬೆಂಬಲ ಸೂಚಿಸುವುದಾಗಿಯೂ ಪ್ರತಿಪಾದಿಸಿದ್ದರು. ಪಕ್ಷಾಂತರ ನಿಷೇಧ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಇದಾಗಿರುವುದರಿಂದಾಗಿ ಅವರನ್ನು ಅನರ್ಹಗೊಳಿಸಲಾಗಿದೆ’ ಎಂದು ಅವರು ಹೇಳಿದರು.

‘ರಮೇಶ ಜಾರಕಿಹೊಳಿ ಹಾಗೂ ಮಹೇಶ ಕುಮಠಳ್ಳಿ ಅವರನ್ನು ಅನರ್ಹಗೊಳಿಸುವಂತೆ ಫೆಬ್ರುವರಿಯಲ್ಲೇ ಕಾಂಗ್ರೆಸ್‌ ನಾಯಕರು ಮನವಿ ಸಲ್ಲಿಸಿದ್ದರು. ಜುಲೈನಲ್ಲಿ ಇವರಿಬ್ಬರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅನರ್ಹಗೊಳಿಸುವ ಅರ್ಜಿ ಮೊದಲು ಸಲ್ಲಿಕೆಯಾಗಿದ್ದರಿಂದಾಗಿ ಅದನ್ನು ಕೈಗೆತ್ತಿಕೊಂಡು ಅವರನ್ನು ವಿಚಾರಣೆಗೆ ಕರೆಯಲಾಯಿತು. ಅವರು ಹಾಜರಾಗಲಿಲ್ಲ. ಅವರ ನಡವಳಿಕೆ, ಬೇರೆ ಪಕ್ಷದ ಜತೆಗೆ ಗುರುತಿಸಿಕೊಂಡಿರುವುದು ಮತ್ತು ಹೇಳಿಕೆಗಳನ್ನು ಆಧರಿಸಿ ಅವರನ್ನು ಅನರ್ಹಗೊಳಿಸಲಾಗಿದೆ’ ಎಂದು ರಮೇಶ್‌ ಕುಮಾರ್ ವಿವರಿಸಿದರು.

‘ಉಳಿದ 14 ಸದಸ್ಯರ ವಿಚಾರಣೆ ಮಾಡಬೇಕಿದೆ. ಅದಕ್ಕಾಗಿ 15 ದಿನ, ತಿಂಗಳು ಅಥವಾ ವರ್ಷ ತೆಗೆದುಕೊಳ್ಳುವುದಿಲ್ಲ. ಸಾಧ್ಯವಾದಷ್ಟೂ ಬೇಗ ನಿರ್ಣಯ ಕೈಗೊಳ್ಳುವೆ’ ಎಂದು ಅವರು ಹೇಳಿದರು

‘ಹೊಸ ಸರ್ಕಾರ ರಚನೆಯಾಗಿ ನನ್ನ ವಿರುದ್ಧ ಅವಿಶ್ವಾಸ ಮಂಡಿಸಿದರೆ ಮಾತ್ರ ಸಭಾಧ್ಯಕ್ಷರು ಬದಲಾಗಬಹುದು. ಅಲ್ಲಿಯವರೆಗೂ ನಾನೇ ಸಭಾಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುತ್ತೇನೆ. ಆತ್ಮಸಾಕ್ಷಿಗೆ ದ್ರೋಹ ಮಾಡದೇ ನನ್ನ ಹೆಜ್ಜೆ ಮುಂದಿಡುತ್ತೇನೆ’ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ಹೊಸ ಸರ್ಕಾರವೋ, ರಾಷ್ಟ್ರಪತಿ ಆಳ್ವಿಕೆಯೋ?

14 ಶಾಸಕರ ಕುರಿತಾದ ತಕರಾರುಗಳನ್ನು ಸಭಾಧ್ಯಕ್ಷರು ಸದ್ಯಕ್ಕೆ ಇತ್ಯರ್ಥಪಡಿಸದೇ ಇರುವುದರಿಂದ ತಕ್ಷಣಕ್ಕೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಕ್ಷೀಣವಾಗಿದೆ.

ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ರಾಜ್ಯಪಾಲರು ನೀಡುವ ವರದಿ ಆಧರಿಸಿ ಕೇಂದ್ರ ಸರ್ಕಾರವು ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು, ರಾಷ್ಟ್ರಪತಿ ಆಳ್ವಿಕೆ ಹೇರುವ ಸಂಭವ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಮೂವರು ಶಾಸಕರನ್ನು ಅನರ್ಹಗೊಳಿಸಿರುವುದರಿಂದಾಗಿ ವಿಧಾನಸಭೆಯ ಸದಸ್ಯ ಬಲ 224ರಿಂದ 221ಕ್ಕೆ ಕುಸಿದಿದೆ. ಸರ್ಕಾರ ರಚನೆಯ ಹಕ್ಕನ್ನು ಬಿಜೆಪಿ ಮಂಡಿಸಬೇಕಾದರೆ ಈಗಿನ ಸದಸ್ಯರ ಬಲದ ಮೇಲೆ 111 ಸದಸ್ಯರ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಬೇಕು. ರಾಜೀನಾಮೆ ಕೊಟ್ಟ 13 ಶಾಸಕರು ಹಾಗೂ ಸದನಕ್ಕೆ ಹಾಜರಾಗದ ಶ್ರೀಮಂತ ಪಾಟೀಲ ಸೇರಿದಂತೆ 14 ಜನರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್‌–ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕರು ಸಭಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ. ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ವಿಷಯ ಇತ್ಯರ್ಥವಾಗುವವರೆಗೆ ಅವರೆಲ್ಲರೂ ತಾಂತ್ರಿಕವಾಗಿ ಆಯಾ ಪಕ್ಷದ ಸದಸ್ಯರೇ ಆಗಿರುತ್ತಾರೆ.

ಈ ಲೆಕ್ಕಾಚಾರದಲ್ಲಿ ಒಬ್ಬ ಪಕ್ಷೇತರ ಸೇರಿ ಬಿಜೆಪಿಯ ಬಲ 106 ಮಾತ್ರ ಇದೆ. ಬಿಎಸ್‌ಪಿ ಸದಸ್ಯ ತಟಸ್ಥ ಧೋರಣೆ ಅನುಸರಿಸಿದ್ದಾರೆ. ಸಭಾಧ್ಯಕ್ಷರ ಮತ ಬಿಟ್ಟರೂ ರಾಜೀನಾಮೆ ಕೊಟ್ಟವರು ಹಾಗೂ ವಿಚಾರಣೆಗೆ ಬಾಕಿ ಇರುವ ಓರ್ವ ಸದಸ್ಯರನ್ನು ಕಾಂಗ್ರೆಸ್–ಜೆಡಿಎಸ್‌ ಸದಸ್ಯರು ಎಂದುಕೊಂಡರೆ ಇವರ ಬಲ 113ರಷ್ಟಿದೆ. ಅಲ್ಲಿಗೆ ಸರಳ ಬಹುಮತವನ್ನು ಮೈತ್ರಿಕೂಟವೇ ಹೊಂದಿದೆ.

ಇಂತಹ ಹೊತ್ತಿನಲ್ಲಿ ಬಹುಮತ ಸಾಬೀತುಪಡಿಸಲು ಬಿಜೆಪಿಯ ಸಂಭಾವ್ಯ ಮುಖ್ಯಮಂತ್ರಿ ಮುಂದಾದರೆ, ರಾಜೀನಾಮೆ ಕೊಟ್ಟವರು ಭಿನ್ನ ದಾರಿ ತುಳಿದರೆ ಬಹುಮತ ಸಾಬೀತಿನಲ್ಲಿ ಸೋಲಾಗುವುದು ಖಚಿತ.

ಹೀಗಾಗಿ, ಶಾಸಕರ ರಾಜೀನಾಮೆ ಇತ್ಯರ್ಥವಾಗುವವರೆಗೆ ಸರ್ಕಾರ ರಚನೆಗೆ ಅವಸರ ಮಾಡಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ಪಕ್ಷದ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಈ ಲೆಕ್ಕದಲ್ಲಿ ಸದ್ಯಕ್ಕೆ ಹೊಸ ಸರ್ಕಾರ ರಚನೆ ಆಗುವುದು ಅನುಮಾನ ಎನ್ನಲಾಗುತ್ತಿದೆ.

*ರಾಜೀನಾಮೆ ಗೌರವ ಸೂಚಕವಾದುದು. ಅನರ್ಹತೆ ಎಂದರೆ ಛೀಮಾರಿ. ರಾಜೀನಾಮೆ ಅಂಗೀಕಾರಗೊಂಡವರು ಮಾತ್ರ ಚುನಾವಣೆಗೆ ಸ್ಪರ್ಧಿಸಬಹುದು

- ಕೆ.ಆರ್‌. ರಮೇಶ್‌ ಕುಮಾರ್‌, ಸಭಾಧ್ಯಕ್ಷರು, ಕರ್ನಾಟಕ ವಿಧಾನಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT