ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿ ತಿರುಚಿದ ವಿಶೇಷ ಜಿಲ್ಲಾಧಿಕಾರಿ

ಹೈಕೋರ್ಟ್‌ಗೆ ಮೇಲ್ಮನವಿ: ಭೂದಾಖಲೆಗಳ ಜಂಟಿ ನಿರ್ದೇಶಕರಿಂದ ನಗರ ಜಿಲ್ಲಾಧಿಕಾರಿಗೆ ವರದಿ
Last Updated 13 ಡಿಸೆಂಬರ್ 2018, 20:11 IST
ಅಕ್ಷರ ಗಾತ್ರ

ಬೆಳಗಾವಿ: ಬೆಂಗಳೂರು ದಕ್ಷಿಣ ತಾಲ್ಲೂಕಿನ ಬಿ.ಎಂ.ಕಾವಲಿನ 288 ಎಕರೆ ಜಮೀನು ಪರಭಾರೆ ವಿಚಾರದಲ್ಲಿ ತಮ್ಮ ವರದಿಯನ್ನು ವಿಶೇಷ ಜಿಲ್ಲಾಧಿಕಾರಿ ಅವರು ತಪ್ಪಾಗಿ ಉಲ್ಲೇಖಿಸಿ ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಸಿ ಭೂದಾಖಲೆಗಳ ಜಂಟಿ ನಿರ್ದೇಶಕರು ನಗರ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.

ಗ್ರಾಮದ ಸರ್ವೆ ಸಂಖ್ಯೆ 137ರಲ್ಲಿ 310 ಎಕರೆ 18 ಗುಂಟೆ ಇದೆ. ಕಾನೂನು ಪ್ರಕಾರ ಕೈಗೊಳ್ಳುವಂತೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಈ ವಿಷಯದ ಬಗ್ಗೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು. ಇದು ಸರ್ಕಾರಿ ಜಮೀನೇ ಅಥವಾ ಹಿಡುವಳಿ ಜಮೀನೇ ಎಂದು ಅಭಿಪ್ರಾಯ ನೀಡುವಂತೆ ಭೂ ದಾಖಲೆಗಳ ಜಂಟಿ ನಿರ್ದೇಶಕರಿಗೆ ವಿಶೇಷ ಜಿಲ್ಲಾಧಿಕಾರಿ ಕೋರಿದ್ದರು. ಇದು ಹಿಡುವಳಿ ಜಮೀನು ಎಂದು ಭೂದಾಖಲೆಗಳ ಜಂಟಿ ನಿರ್ದೇಶಕರು ವರದಿ ಸಲ್ಲಿಸಿದ್ದಾರೆ ಎಂದು ಉಲ್ಲೇಖಿಸಿ ವಿಶೇಷ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಮೋಟಮ್ಮ ಹಾಗೂ ನಾಗಮ್ಮ ಎಂಬುವರ ಹೆಸರಿಗೆ ಕ್ರಯಪತ್ರ ಮಾಡಿಕೊಡುವಂತೆ ಆದೇಶದಲ್ಲಿ ತಿಳಿಸಿದ್ದರು. ಇದನ್ನು ಆಕ್ಷೇಪಿಸಿ ಜಂಟಿ ನಿರ್ದೇಶಕರು ಇದೇ 7ರಂದು ವರದಿ ಸಲ್ಲಿಸಿದ್ದಾರೆ.

‘ಇದು ಸರ್ಕಾರಿ ಜಮೀನೇ ಅಥವಾ ಹಿಡುವಳಿ ಜಮೀನೇ ಎಂಬ ಕುರಿತು ಅಗತ್ಯ ಕಂದಾಯ ದಾಖಲೆಗಳ ಪರಿಶೀಲನೆಯಿಂದ ಖಾತ್ರಿಪಡಿಸಿಕೊಳ್ಳಬೇಕಾಗಿದೆ ಎಂದು ನಮೂದಿಸಿ ವಿಶೇಷ ಜಿಲ್ಲಾಧಿಕಾರಿ ಅವರಿಗೆ ವರದಿ ಸಲ್ಲಿಸಲಾಗಿತ್ತು. ಹಿಂದೆ ಪೋಡಿಯಾದ ಬಳಿಕ ಉಳಿದ ಜಮೀನು ಸರ್ಕಾರಿ ಖರಾಬು ಎಂದು ದಾಖಲಾಗಿದೆ. ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಪತ್ರದಲ್ಲಿನ ಅಂಶಗಳನ್ನು ವಿಶೇಷ ಜಿಲ್ಲಾಧಿಕಾರಿ ನ್ಯಾಯಾಲಯ ಪೂರ್ಣ ಪ್ರಮಾಣದಲ್ಲಿ ಗಮನಿಸದೆ ಆದೇಶ ಹೊರಡಿಸಿದೆ‘ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಹಿತದೃಷ್ಟಿಯಿಂದ ಪರಿಗಣಿಸದೆ ಇರುವುದು ಸ್ಪಷ್ಟವಾಗಿ ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ.

ಸರ್ಕಾರಿ ಜಮೀನು ಹಿತರಕ್ಷಣೆ ಮಾಡುವ ದೃಷ್ಟಿಯಿಂದ ಹೈಕೋರ್ಟ್‌ಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಮೂಲಕ ಮೇಲ್ಮನವಿ ಸಲ್ಲಿಸಬೇಕು ಎಂದು ಅವರು ನಿವೇದಿಸಿದ್ದಾರೆ.

ಕ್ರಮಕ್ಕೆ ಶಿಫಾರಸು ಮಾಡಿದ್ದ ಸಮಿತಿ: ಬಿ.ಎಂ.ಕಾವಲ್‌ನಲ್ಲಿ ಭೂಕಬಳಿಕೆಗೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳು ವಿಶ್ವಾಸದ್ರೋಹ ಎಸಗಿದ್ದಾರೆ. ಸುಳ್ಳು ದಾಖಲೆ ಸೃಷ್ಟಿಸಲು ನೆರವಾದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕ್ರಯಪತ್ರ ಮಾಡಿಕೊಟ್ಟ ಸಬ್‌ ರಿಜಿಸ್ಟ್ರಾರ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎ.ಟಿ.ರಾಮಸ್ವಾಮಿ ನೇತೃತ್ವದ ಸದನ ಸಮಿತಿ ಶಿಫಾರಸು ಮಾಡಿತ್ತು.

’1941ರ ಪೂರ್ವದಲ್ಲಿ 310 ಎಕರೆ 18 ಗುಂಟೆಯನ್ನು ಗ್ರಾಮಸ್ಥರಾದ ದೊಡ್ಡ ಹನುಮಯ್ಯ ಹಾಗೂ ಇತರರು ಸಾಗುವಳಿ ಮಾಡುತ್ತಿದ್ದರು. 1941ರಲ್ಲಿ ಕಂದಾಯ ಬಾಕಿಗಾಗಿ ಸರ್ಕಾರ ವಶಪಡಿಸಿಕೊಂಡು ಭೂದಾಖಲೆಗಳಲ್ಲಿ ಸರ್ಕಾರಿ ಪಡ ಎಂದು ನಮೂದಿಸಲಾಗಿತ್ತು. ಹೆಚ್ಚು ಧಾನ್ಯ ಬೆಳೆಯಿರಿ ಆಂದೋಲನದ ಅಡಿಯಲ್ಲಿ 1942ರಲ್ಲಿ 11 ಜನರಿಗೆ ತಲಾ 6 ಎಕರೆಗಳಂತೆ 66 ಎಕರೆಗಳ (ಹಂಗಾಮಿ) ಸಾಗುವಳಿಗೆ ಅವಕಾಶ ಮಾಡಿಕೊಟ್ಟಿತ್ತು. 1953–54ರಲ್ಲಿ ಇದೇ 66 ಎಕರೆಗಳನ್ನು 11 ಜನರಿಗೆ ಮುಫತ್ತಾಗಿ ಕೊಟ್ಟು ಕಾಯಂ ಮಾಡಿಕೊಟ್ಟಿರುವುದು ಕಂಡುಬಂದಿದೆ. ಬಳಿಕ ಪಹಣಿ ಪತ್ರಗಳಲ್ಲಿ ತಿದ್ದುಪಡಿ ಮಾಡಿ 11 ಜನರ ಬದಲು 18 ಜನರಿಗೆ ತಲಾ 16 ಎಕರೆಗಳನ್ನು ಮಂಜೂರು ಮಾಡಿದಂತೆ ದಾಖಲೆ ಸೃಷ್ಟಿಸಲಾಗಿದೆ’ ಎಂಬ ಅಂಶ ಸಮಿತಿ ವರದಿಯಲ್ಲಿದೆ.

ವಿಶೇಷ ಜಿಲ್ಲಾಧಿಕಾರಿ ಅಮಾನತು?

288 ಎಕರೆಯನ್ನು ಖಾಸಗಿಯವರಿಗೆ ಪರಭಾರೆ ಮಾಡಿರುವ ವಿಶೇಷ ಜಿಲ್ಲಾಧಿಕಾರಿ ಎಸ್‌.ರಂಗಪ್ಪ ಅವರು ಲೋಪ ಎಸಗಿದ್ದಾರೆ. ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

ವಿಧಾನಸಭೆಯಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಜೆಡಿಎಸ್‌ ಸದಸ್ಯ ಎ.ಟಿ.ರಾಮಸ್ವಾಮಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ’ಪ್ರಜಾವಾಣಿ‘ಯ ವರದಿಯನ್ನು ಸದನದಲ್ಲಿ ಪ್ರದರ್ಶಿಸಿದರು.

’ಈ ವಿಷಯ ಕೇಳಿ ಬಹಳ ನೋವಾಗಿದೆ. ಇದನ್ನೆಲ್ಲ ನೋಡಿಕೊಂಡು ಸದನದಲ್ಲಿ ಇರಬೇಕಾ ಬೇಡವೇ‘ ಎಂದು ಪ್ರಶ್ನಿಸಿದರು. ‘2006ರಲ್ಲಿ ಸದನ ಸಮಿತಿ ಈ ಪ್ರದೇಶವನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಿತ್ತು. ನಾವು ನಮ್ಮ ಭವಿಷ್ಯವನ್ನು ಪಣಕ್ಕೆ ಇಟ್ಟು ವರದಿ ಸಿದ್ಧಪಡಿದ್ದೆವು. 310 ಎಕರೆ ಜಾಗದ ಮೌಲ್ಯ ₹3 ಸಾವಿರ ಕೋಟಿ ಆಗುತ್ತದೆ. ನಕಲಿ ದಾಖಲೆ ಸೃಷ್ಟಿಸಿ ಮಂಜೂರಾತಿ ಮಾಡಲಾಗಿದೆ’ ಎಂದರು.

ಈ ಜಾಗವನ್ನು ಯಾರ ಹೆಸರಿಗೆ ಮಾಡಿಕೊಡಲಾಗಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಪ್ರಶ್ನಿಸಿದರು. ’ಬಡವರಿಗೆ ಮಾಡಿಕೊಟ್ಟಿದ್ದರೆ ಹೋಗಲಿ ಎಂದು ಸುಮ್ಮನಾಗುತ್ತಿದ್ದೆ. ದುರಾಸೆ ಜನ ಹಾಗೂ ಹಣಕ್ಕೆ ಆಸೆ ಪಡುವವರ ಹೆಸರಿಗೆ ಮಾಡಿಕೊಡಲಾಗಿದೆ‘ ಎಂದು ರಾಮಸ್ವಾಮಿ ಹೇಳಿದರು.

ವಿಶೇಷ ಜಿಲ್ಲಾಧಿಕಾರಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತಿದ್ದೇವೆ ಎಂದು ದೇಶಪಾಂಡೆ ತಿಳಿಸಿದರು. ’ಅಧಿಕಾರಿಯನ್ನು ವರ್ಗಾವಣೆ ಮಾಡಿದರೆ ಸಾಲದು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂಜೆಯೊಳಗೆ ಆ ಅಧಿಕಾರಿಯನ್ನು ಅಮಾನತು ಮಾಡಿ‘ ಎಂದು ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.

‘ಅಧಿಕಾರಿಯ ಅಮಾನತು ಮಾಡಿ ಎಂದು ನೀವು ಆದೇಶ ಹೊರಡಿಸಿರುವುದು ಸರಿಯಲ್ಲ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಗಾದೆ ಎತ್ತಿದರು. ‘ನಾನು ಆದೇಶ ಮಾಡಿಲಪ್ಪ, ವಿನಮ್ರವಾಗಿ ಮನವಿ ಮಾಡಿದ್ದೇನೆ’ ಎಂದು ರಮೇಶ್‌ ಕುಮಾರ್‌ ಸ್ಪ‍ಷ್ಟಪಡಿಸಿದರು. ಈ ವಿಷಯದ ಬಗ್ಗೆ ಸೋಮವಾರ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ರಾಮಸ್ವಾಮಿ ಅವರಿಗೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT