ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೋನಿ’ ಚಂಡಮಾರುತ: ಒಡಿಸ್ಸಾ ವಿದ್ಯುತ್‌ ಜಾಲ ಸರಿಪಡಿಸಲು ತೆರಳಿದ ರಾಜ್ಯದ ತಂಡ

Last Updated 17 ಮೇ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ‘ಪೋನಿ’ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಸಂಪೂರ್ಣವಾಗಿ ನಾಶವಾಗಿರುವ ಒಡಿಸ್ಸಾದ ವಿದ್ಯುತ್‌ ಸಂಪರ್ಕ ಜಾಲವನ್ನು ಸರಿಪಡಿಸಲು ರಾಜ್ಯದ ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳ 762 ಸಿಬ್ಬಂದಿ ಶುಕ್ರವಾರ ಭುವನೇಶ್ವರಿಗೆ ಪ್ರಯಾಣ ಬೆಳೆಸಿದ್ದಾರೆ. 15 ದಿನಗಳ ಕಾಲ ಅಲ್ಲಿದ್ದು, ವ್ಯವಸ್ಥೆಯನ್ನು ಸರಿಪಡಿಸಲಿದ್ದಾರೆ.

ಇತ್ತೀಚೆಗೆ ಬೀಸಿದ ಚಂಡಮಾರುತಕ್ಕೆ ಸಿಕ್ಕ ಒಡಿಸ್ಸಾ ಸಂಪೂರ್ಣವಾಗಿ ನಲುಗಿಹೋಗಿತ್ತು. ಜನಜೀವನ ಅಸ್ತವ್ಯಸ್ಥವಾಗಿ ಹೋಗಿತ್ತು. ವಿದ್ಯುತ್‌ ಸಂಪರ್ಕ ಜಾಲ ಸಂಪೂರ್ಣವಾಗಿ ನೆಲಕಚ್ಚಿಹೋಗಿತ್ತು. ವಿದ್ಯುತ್‌ ಸಂಪರ್ಕ ಇಲ್ಲದ್ದರಿಂದ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ತೊಂದರೆಯಾಗಿದ್ದು, ದುರಸ್ತಿಪಡಿಸಲು ಹೆಚ್ಚುವರಿ ಸಿಬ್ಬಂದಿಯ ಅವಶ್ಯಕತೆ ಇದೆ ಎಂದು ಒಡಿಸ್ಸಾ ಕರ್ನಾಟಕ ಸರ್ಕಾರವನ್ನು ಕೋರಿಕೊಂಡಿತ್ತು. ಅವರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಿಬ್ಬಂದಿ ಕಳುಹಿಸಿಕೊಡಲು ತೀರ್ಮಾನಿಸಿದರು.

ಇದರ ಪರಿಣಾಮವಾಗಿ, ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿಯಿಂದ 72, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿಯಿಂದ 204, ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ 64, ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿಯಿಂದ 105 ಹಾಗೂ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯಿಂದ 317 ಸಿಬ್ಬಂದಿಗಳನ್ನು ಕಳುಹಿಸಿಕೊಡಲಾಗಿದೆ.

15 ದಿನಗಳ ವಾಸ್ತವ್ಯ:

‘ಬೆಂಗಳೂರಿನಿಂದ ಶುಕ್ರವಾರ ಸಂಜೆ 4 ಗಂಟೆಗೆ ಭುವನೇಶ್ವರಕ್ಕೆ ರೈಲು ಪ್ರಯಾಣ ಬೆಳೆಸಿದೆ. 30 ಗಂಟೆಗಳ ಪ್ರಯಾಣದ ನಂತರ ನಮ್ಮ ಸಿಬ್ಬಂದಿ ಅಲ್ಲಿಗೆ ತಲುಪುತ್ತಾರೆ. ಅಲ್ಲಿನ ಸರ್ಕಾರವೇ ಸಿಬ್ಬಂದಿಗೆ ವಸತಿ ವ್ಯವಸ್ಥೆ ಮಾಡಿದೆ. 15 ದಿನಗಳವರೆಗೆ ಅಲ್ಲಿದ್ದು, ಇಡೀ ರಾಜ್ಯದ ವಿದ್ಯುತ್‌ ಸಂಪರ್ಕ ವ್ಯವಸ್ಥೆಯನ್ನು ಸರಿ ಮಾಡಿ, ಮರಳಿ ಬರಲಿದ್ದಾರೆ’ ಎಂದು ಹೆಸ್ಕಾಂನ ಸಹಾಯಕ ಎಕ್ಸಿಕ್ಯುಟಿವ್‌ ಎಂಜಿನಿಯರ್‌ ಸೋಮಶೇಖರ ‘ಪ್ರಜಾವಾಣಿ’ಗೆ ತಿಳಿಸಿದರು.

‘12 ಜನಗಳ ಒಂದೊಂದು ತಂಡವನ್ನು ರೂಪಿಸಲಾಗಿದೆ. 11 ಜನ ಲೈನ್‌ಮನ್‌ಗಳು ಹಾಗೂ ಒಬ್ಬ ಕಿರಿಯ ಶ್ರೇಣಿಯ ಎಂಜಿನಿಯರ್‌ ಇರುತ್ತಾರೆ. ಇವರಿಗೆ ಟಿ.ಎ– ಡಿ.ಎ ಕಂಪನಿ ವತಿಯಿಂದ ನೀಡಲಾಗುವುದು. ಇವರೆಲ್ಲರೂ ಅಲ್ಲಿನ ಸಿಬ್ಬಂದಿಗಳ ಜೊತೆಗೂಡಿ ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ಬೆಳಗಾವಿ ಹೆಸ್ಕಾಂನ ಸಹಾಯಕ ಎಕ್ಸಿಕ್ಯುಟಿವ್‌ ಎಂಜಿನಿಯರ್‌ ಅಶ್ವಿನ್‌ ಶಿಂಧೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT