ಐ.ಟಿ ದಾಳಿ: ನಾಲ್ವರ ವಿರುದ್ಧದ ತಡೆ ತೆರವು

7

ಐ.ಟಿ ದಾಳಿ: ನಾಲ್ವರ ವಿರುದ್ಧದ ತಡೆ ತೆರವು

Published:
Updated:

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿಯಲ್ಲಿ ವಶಪಡಿಸಿಕೊಂಡಿರುವ ₹ 8.60 ಕೋಟಿ ಲೆಕ್ಕ ಕೊಡದ ಹಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿ ನಾಲ್ವರು ಆರೋಪಿಗಳ ವಿರುದ್ಧದ ವಿಚಾರಣೆಗೆ ಇದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ ತೆರವುಗೊಳಿಸಿದೆ.

ಈ ಕುರಿತಂತೆ ಆರೋಪಿ ಸಚಿನ್‌ ನಾರಾಯಣ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಪ್ರಭುಲಿಂಗ ನಾವದಗಿ ಅವರು, ‘ಅರ್ಜಿದಾರರು ವಾಸ್ತವಾಂಶ ಮುಚ್ಚಿಟ್ಟು ತಡೆ ಆದೇಶ ಪಡೆದಿದ್ದಾರೆ. ಆದ್ದರಿಂದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು’ ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ತಡೆ ಆದೇಶ ಸಚಿನ್‌ ನಾರಾಯಣ್‌ಗೆ ಮಾತ್ರವೇ ಅನ್ವಯವಾಗುತ್ತದೆ. ಉಳಿದ ಆರೋಪಿಗಳಾದ ಡಿ.ಕೆ.ಶಿವಕುಮಾರ್, ಶರ್ಮಾ ಟ್ರಾನ್ಸ್‌ಪೋರ್ಟ್‌ನ ಸುನಿಲ್‌ ಕುಮಾರ್ ಶರ್ಮಾ, ದೆಹಲಿ ಕರ್ನಾಟಕ ಭವನದ ನೌಕರ ಆಂಜನೇಯ, ಸುಖದೇವ್‌ ವಿಹಾರ ನಿವಾಸಿ ರಾಜೇಂದ್ರ ಇವರಿಗೆ ಅನ್ವಯವಾಗುವುದಿಲ್ಲ’ ಎಂದು ಆದೇಶಿಸಿದೆ.

‘ಆರ್ಥಿಕ ಅಪರಾಧಗಳ ವಿಚಾರಣಾ ನ್ಯಾಯಾಲಯದಲ್ಲಿ ನನ್ನ ವಿರುದ್ಧ ಮೊಕದ್ದಮೆ ದಾಖಲಿಸುವ ಮೊದಲು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದಿಲ್ಲ. ಇದು ಐ.ಟಿ ಕಾಯ್ದೆಯ ಕಲಂ 279ಕ್ಕೆ ವಿರುದ್ಧವಾಗಿದೆ’ ಎಂಬುದು ಅರ್ಜಿದಾರರ ಆಕ್ಷೇಪ.

ಅರ್ಜಿದಾರರ ಪರ ಸಂದೀಪ್‌ ಎಸ್‌.ಪಾಟೀಲ ಹಾಜರಿದ್ದರು. ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !