ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದಲ್ಲಿ ಸುಮಲತಾ ‘ರೆಬೆಲ್‌ ಸ್ಟಾರ್’ ಅಭ್ಯರ್ಥಿ

Last Updated 18 ಮಾರ್ಚ್ 2019, 20:19 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ನಟಿ ಸುಮಲತಾ ಅಂಬರೀಷ್‌ ನಿರ್ಧರಿಸಿದ್ದಾರೆ. ಈ ಮೂಲಕ ಸುಮಲತಾ– ನಿಖಿಲ್‌ ಕುಮಾರಸ್ವಾಮಿ ನೇರ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ, ‘ಇದೇ 20ರಂದು ಬೆಳಿಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಸುತ್ತೇನೆ. ಮತ ಪ್ರಚಾರದ ವೇಳೆ ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡುವುದಿಲ್ಲ’ ಎಂದು ಪ್ರಕಟಿಸಿದರು. ಅವರಿಗೆ ಬಿಜೆಪಿ ಬೆಂಬಲ ನೀಡುವ ಸಾಧ್ಯತೆ ಇದೆ. ನೆಪಮಾತ್ರಕ್ಕೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಪಕ್ಷ ಚಿಂತನೆ ನಡೆಸಿದೆ. ಈ ಬಗ್ಗೆ ಮಂಗಳವಾರ ನಡೆಯುವ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಸುಮಲತಾ ಮಾತನಾಡಿ, ‘ಅಂಬರೀಷ್‌ ಇದ್ದಾಗ 24 ಗಂಟೆ ಮನೆ ತುಂಬಾ ಸ್ನೇಹಿತರು ಇದ್ದರು. ಅವರು ಹೋದ ಮೇಲೆ ಸ್ವಲ್ಪ ಜನರು ಮನೆಗೆ ಬರುವುದನ್ನು ನಿಲ್ಲಿಸಿದರು. ಆ ಸಮಯದಲ್ಲಿ ಧೈರ್ಯ ತುಂಬಿದವರು ಮಂಡ್ಯದ ಅಭಿಮಾನಿಗಳು. ನೀವು ಏಕಾಂಗಿಯಲ್ಲ ಎಂದು ನಮ್ಮ ಬೆಂಬಲಕ್ಕೆ ನಿಂತರು’ ಎಂದು ನೆನಪಿಸಿಕೊಂಡರು.

‘ನಾನು ರಾಜಕಾರಣಿ ಅಲ್ಲ. ನನಗೆ ರಾಜಕಾರಣದ ಬಗ್ಗೆ ಏನೂ ಗೊತ್ತಿಲ್ಲ. ಅಂಬರೀಷ್‌ ತೀರಿಕೊಂಡ ನಂತರ ಎರಡು ದಾರಿ ಕಾಣಿಸಿತು. ಒಂದು ಸುಲಭದ ಹಾಗೂ ಶಾಂತಿಯುತವಾದ ದಾರಿ. ಅದು ನಮ್ಮಷ್ಟಕ್ಕೆ ನಾವು ಇರುವುದು. ಇನ್ನೊಂದು ಮುಳ್ಳಿನ ದಾರಿ. ಅವಮಾನ, ಟೀಕೆ ಎಲ್ಲವನ್ನೂ ಎದುರಿಸಬೇಕಿದೆ. ಅದಕ್ಕಾಗಿ ಜನರ ಮನ ಅರಿಯಲು 2–3 ವಾರಗಳಿಂದ ಸಾವಿರಾರು ಜನರ ಭೇಟಿ ಮಾಡಿದೆ. ಕ್ಲಿಷ್ಟಕರ ಹಾದಿಯಲ್ಲಿ ಹೆಜ್ಜೆ ಇಡಲು ಜನರು ಧೈರ್ಯ ನೀಡಿದ್ದಾರೆ. ಈ ವೇಳೆ, ನನ್ನಿಂದ ಯಾರಿಗಾದರೂ ನೋವು ಆಗಿದ್ದರೆ ಕ್ಷಮೆ ಕೋರುತ್ತೇನೆ’ ಎಂದರು.

‘ನನ್ನ ಪತಿ 20 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದರು. ಹಾಗಾಗಿ, ಕಾಂಗ್ರೆಸ್‌ನಲ್ಲಿ ಟಿಕೆಟ್‌ ಕೇಳಿದೆ. ಮೈತ್ರಿ ಧರ್ಮದ ಪ್ರಕಾರ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದೇವೆ ಎಂದು ಕಾಂಗ್ರೆಸ್‌ ನಾಯಕರು ಅಸಹಾಯಕತೆ ವ್ಯಕ್ತಪಡಿಸಿದರು. ಅವರ ಸಮಸ್ಯೆ ನನಗೂ ಅರಿವಾಗಿದೆ. ನನ್ನ ಹೋರಾಟ ಯಾರ ವಿರುದ್ಧವೂ ಅಲ್ಲ. ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರಿಂದ ಕಾಂಗ್ರೆಸ್‌ ಕಾರ್ಯಕರ್ತರು ಅತೃಪ್ತರಾಗಿದ್ದಾರೆ. ಅವರ ಬೆಂಬಲ ನನಗೆ ಸಿಗಲಿದೆ. ರೈತ ಸಂಘದವರು ಸಹ ಬೆಂಬಲ ನೀಡುತ್ತೇವೆ ಎಂದಿದ್ದಾರೆ’ ಎಂದರು.

‘ನನ್ನಲ್ಲಿ ಹಣದ ಶಕ್ತಿ ಇಲ್ಲ. ಇರುವುದು ಜನ ಶಕ್ತಿ ಮಾತ್ರ. ಮಂಡ್ಯದ ಜನರು ಆಸೆ ಪಟ್ಟ ಕಾರಣಕ್ಕೆ ರಾಜಕೀಯಕ್ಕೆ ಬಂದಿದ್ದೇನೆ. ಮಂಡ್ಯದಲ್ಲಿ ನಡೆದ ಅಂಬರೀಷ್‌ ಶ್ರದ್ಧಾಂಜಲಿ ಸಭೆಗೆ ಜೆಡಿಎಸ್‌ ನಾಯಕರು ಬಹಿಷ್ಕಾರ ಹಾಕಿದರು. ನಾವು ಏನು ತಪ್ಪು ಮಾಡದಿದ್ದರೂ ಹೀಗೆ ಮಾಡಿದರು ಎಂದು ಬೇಸರವಾಗಿತ್ತು. ಬಳಿಕ ಕಾರಣ ಗೊತ್ತಾಯಿತು’ ಎಂದು ಮಾರ್ಮಿಕವಾಗಿ ನುಡಿದರು.

ಪುತ್ರ ಅಭಿಷೇಕ್ ಅಂಬರೀಷ್‌, ‘ನಮ್ಮ ಕುಟುಂಬದವರನ್ನು ಮಂಡ್ಯದಿಂದ ದೂರ ಇಡಲು ಕೆಲವರು ಪ್ರಯತ್ನಿಸಿದರು. ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.

ಮಂಡ್ಯದಲ್ಲಿ ಸುಮಲತಾ, ಹಾಸನದಲ್ಲಿ ಪ್ರಜ್ವಲ್‌ ಪರ ದರ್ಶನ್‌ ಪ್ರಚಾರ!

‘ಮಂಡ್ಯದಲ್ಲಿ ಸುಮಲತಾ ಪರ ನಿರಂತರ ಪ್ರಚಾರ ನಡೆಸುತ್ತೇನೆ. ಒಂದೇ ಕ್ಷೇತ್ರದಲ್ಲಿ ಇಬ್ಬರ ಪರ ಪ್ರಚಾರ ಮಾಡಲು ಸಾಧ್ಯವಾಗದೇ ಇರುವುದರಿಂದ ನಿಖಿಲ್‌ ಪರ ಪ್ರಚಾರ ಮಾಡುವುದಿಲ್ಲ. ಆಹ್ವಾನ ನೀಡಿದರೆ ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಪರ ಪ್ರಚಾರದಲ್ಲಿ ತೊಡಗುತ್ತೇನೆ’ ಎಂದು ನಟ ದರ್ಶನ್‌ ಹೇಳಿದರು.

‘ಈ ಹಿಂದೆ ಅಂಬರೀಷ್‌ ಪರವಾಗಿ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಹಾಗೂ ಒಂದು ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದೆ. ಅಂಬರೀಷ್‌ ಸೂಚನೆ ಮೇರೆಗೆ ಹಲವು ಅಭ್ಯರ್ಥಿಗಳ ಪರ ಮತ ಯಾಚಿಸಿದ್ದೆ. ಇಲ್ಲಿ ಸ್ಟಾರ್‌ ಆಗಿ ಬಂದಿಲ್ಲ. ಮನೆ ಮಗನಾಗಿ ಬಂದಿದ್ದೇನೆ’ ಎಂದರು.

ಹೊಸ ವಿಷಯ ಅಲ್ಲ: ಕುಮಾರಸ್ವಾಮಿ

‘ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಕಣಕ್ಕಿಳಿಯಲು ಮುಂಚೆಯೇ ನಿರ್ಧರಿಸಿದ್ದಾರೆ. ಅದೇನು ಹೊಸ ವಿಷಯವಲ್ಲ. ನಿಖಿಲ್‌ ಮತ್ತು ಸುಮಲತಾ ನಡುವೆ ಹಣಾಹಣಿಯಾಗುವುದರಲ್ಲಿ ಅಚ್ಚರಿ ಏನು ಇಲ್ಲ. ಚುನಾವಣೆ ಎದುರಿಸುತ್ತೇವೆ’ ಎಂದು ಉತ್ತರಿಸಿದರು.

‘ನಮ್ಮ ಕುಟುಂಬದ ನಂಬಿಕೆಯಂತೆ ಶಾರದಾಂಬೆ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ. ಚುನಾವಣೆ ಎಂಬ ಯುದ್ಧದಲ್ಲಿ ಹೋರಾಟ ಮಾಡಬೇಕಿದೆ. ನಿಖಿಲ್‌ ಮಾತ್ರವಲ್ಲ. ರಾಜ್ಯದ 28 ಕ್ಷೇತ್ರಗಳಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯುವರು. ಈ ಎಲ್ಲ ಕ್ಷೇತ್ರಗಳ ಹೋರಾಟಕ್ಕೆ ದೇವಿ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸಿದ್ದೇವೆ’ ಎಂದು ತಿಳಿಸಿದರು.

* ಬೆಂಗಳೂರು ಉತ್ತರ ಅಥವಾ ಬೆಂಗಳೂರು ದಕ್ಷಿಣದಲ್ಲಿ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್ ನಾಯಕರು ಕೋರಿದರು. ವಿಧಾನ ಪರಿಷತ್‌ ಸದಸ್ಯೆಯನ್ನಾಗಿ ಮಾಡುತ್ತೇವೆ ಎಂಬ ಭರವಸೆಯನ್ನೂ ನೀಡಿದರು. ಅದಕ್ಕೆ ಒಪ್ಪಲಿಲ್ಲ. ಸೋಲು–ಗೆಲುವು ದೇವರ ಇಚ್ಛೆ

-ಸುಮಲತಾ ಅಂಬರೀಷ್‌

* ಸುಮಲತಾ ಅವರಿಗೆ ಚುನಾವಣೆಯಲ್ಲಿ ಬೆಂಬಲ ನೀಡುವ ಬಗ್ಗೆ ಕೇಂದ್ರ ಚುನಾವಣಾ ಸಮಿತಿ ಹಾಗೂ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ.

-ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT