ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಶಿಕ್ಷಕರ ಹುದ್ದೆ ರದ್ದತಿಗೆ ವಿರೋಧ

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅವೈಜ್ಞಾನಿಕ ನಿಯಮಗಳ ಪಾಲನೆ: ಆರೋಪ
Last Updated 2 ಸೆಪ್ಟೆಂಬರ್ 2018, 19:10 IST
ಅಕ್ಷರ ಗಾತ್ರ

ಬಳ್ಳಾರಿ: ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂಬ ಕೂಗಿನ ನಡುವೆಯೇ ಸಾರ್ವಜನಿಕ ಶಿಕ್ಷಣ ಇಲಾಖೆಯು, ಹೆಚ್ಚುವರಿ ಶಿಕ್ಷಕರ ಹುದ್ದೆಗಳನ್ನು ಗುರುತಿಸಿ ರದ್ದುಪಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲೇ ನಡೆಯುತ್ತಿರುವ ಈ ಪ್ರಯತ್ನಕ್ಕೆ ಶಿಕ್ಷಕರಿಂದ ವಿರೋಧ ವ್ಯಕ್ತವಾಗಿದೆ.

‘ಈ ಕ್ರಮ ಅವೈಜ್ಞಾನಿಕವಾಗಿದೆ. ಪ್ರಸಕ್ತ ವರ್ಷದ ವಿದ್ಯಾರ್ಥಿಗಳ ದಾಖಲಾತಿಯ ಅಂಕಿ ಅಂಶ ಪರಿಗಣಿಸದೇ, ಹಿಂದಿನ ವರ್ಷದ್ದನ್ನು ಪರಿಗಣಿಸಲಾಗಿದೆ’ ಎಂಬುದು ಅವರ ದೂರು.

ಶಿಕ್ಷಕರ ಹುದ್ದೆ ರದ್ದಾದ ಶಾಲೆಗಳಲ್ಲಿ, ಒಂದು ವೇಳೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಹುದ್ದೆಯ ಮರುಸೃಷ್ಟಿ ಬಗ್ಗೆ ಇಲಾಖೆಯು ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ ಎಂಬ ತಕರಾರೂ ಎದ್ದಿದೆ.

ಹೆಚ್ಚುವರಿಯಾಗುವುದರಿಂದ ತಮಗೆ ವರ್ಗಾವಣೆಯಾಗಬಹುದು ಎಂದು ಆತಂಕಪಟ್ಟು, ಜಿಲ್ಲೆಯ ಶಿಕ್ಷಕರೊಬ್ಬರು ಸ್ವಯಂ ನಿವೃತ್ತಿಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ.

ಮಕ್ಕಳ ದಾಖಲಾತಿಯನ್ನು ಹೆಚ್ಚಿಸಲು ಇಲಾಖೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ದಾಖಲಾತಿ ಆಂದೋಲನ, 1ರಿಂದ 14 ವರ್ಷದವರೆಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಸೇರಿಸುವುದು, ಬಾಲ ಕಾರ್ಮಿಕರನ್ನು ಗುರುತಿಸಿ ಶಾಲೆಗೆ ಕರೆತರುವುದು, ಗುಡಾರ ಶಾಲೆಗಳನ್ನು ತೆರೆಯುವುದು, ಅಂಗವಿಕಲ ಮಕ್ಕಳ ಮನೆಗೇ ತೆರಳಿ ಬೋಧಿಸುವುದು (ಸಮನ್ವಯ ಶಿಕ್ಷಣ) –ಈ ಕೆಲಸಗಳನ್ನು ಶಿಕ್ಷಕರೇ ಮಾಡುತ್ತಿದ್ದಾರೆ.

ಇಂಥ ಸನ್ನಿವೇಶದಲ್ಲೇ, ಇಲಾಖೆ 70:1 (ಎಪ್ಪತ್ತು ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ) ಅನುಪಾತವನ್ನು ಅನುಸರಿಸಿ ಸರ್ಕಾರಿ ಪ್ರೌಢಶಾಲೆಗಳ ಹೆಚ್ಚುವರಿ ಶಿಕ್ಷಕರ ಹುದ್ದೆಗಳನ್ನು ಗುರುತಿಸಿ ಪಟ್ಟಿಯನ್ನು ಪ್ರಕಟಿಸಿದೆ. ಸೆ.6 ಮತ್ತು 7ರಂದು ಜಿಲ್ಲಾ ಕೇಂದ್ರಗಳಲ್ಲಿ ಕೌನ್ಸೆಲಿಂಗ್‌ ಕೂಡ ನಿಗದಿಯಾಗಿದೆ.

ಆದರೆ, ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯ ಮಾನದಂಡಗಳ ಪ್ರಕಾರ 40:1 (ನಲವತ್ತು ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ) ಅನುಪಾತವನ್ನು ಅನುಸರಿಸಬೇಕು ಎಂಬುದು ಶಿಕ್ಷಕರ ಆಗ್ರಹ.

‘ರಾಜ್ಯದ ಪಠ್ಯಕ್ರಮವು ಕೇಂದ್ರದ ಎನ್‌ಸಿಇಆರ್‌ಟಿ (ನ್ಯಾಷನಲ್‌ ಕೌನ್ಸಿಲ್‌ ಫಾರ್‌ ಎಜುಕೇಶನ್‌ ಅಂಡ್‌ ರಿಸರ್ಚ್‌ ಟ್ರೈನಿಂಗ್‌) ಪಠ್ಯಕ್ರಮಕ್ಕೆ ಅನುಗುಣವಾಗಿದೆ. ಅದನ್ನೇ ನಾವು ಬೋಧಿಸುತ್ತಿದ್ದೇವೆ. ಹೀಗಾಗಿ ಶಿಕ್ಷಕ–ವಿದ್ಯಾರ್ಥಿಗಳ ಅನುಪಾತವನ್ನೂ ಕೇಂದ್ರಕ್ಕೆ ಅನುಗುಣವಾಗಿಯೇ ಪರಿಗಣಿಸಬೇಕು. ಆಗ ಮಾತ್ರ ಬೋಧನೆ ಮತ್ತು ಕಲಿಕೆಯ ಗುಣಮಟ್ಟ ಪರಿಣಾಮಕಾರಿಯಾಗಿರುತ್ತದೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಶಿಕ್ಷಕರೊಬ್ಬರು.

**

ಶಿಕ್ಷಕರ ದಿನಾಚರಣೆಗೆ ‘ಹೆಚ್ಚುವರಿ’ ಬರೆ!

ಬಳ್ಳಾರಿ: ‘ಶಿಕ್ಷಕರ ದಿನಾಚರಣೆ ಸಂದರ್ಭದಲ್ಲೆ ಸರ್ಕಾರವು ಶಾಲೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೇಲೆ ಬರೆ ಎಳೆಯಲು ಹೊರಟಿದೆ’ ಎಂದು ನಗರದ ಶಿಕ್ಷಕರೊಬ್ಬರು ಅಭಿಪ್ರಾಯಪಟ್ಟರು.

ಇನ್ನಷ್ಟು ಸರ್ಕಾರಿ ಶಾಲೆಗಳನ್ನು ಮುಚ್ಚಬೇಕಾದ ಪರಿಸ್ಥಿತಿಯೂ ಉಂಟಾಗಬಹುದು ಎಂಬುದು ಅವರ ಅನಿಸಿಕೆ.

ಹಿರಿಯ ಶಿಕ್ಷಕರಿಗೂ ತೊಂದರೆ!

ಇಂಗ್ಲಿಷ್‌, ಕನ್ನಡ ಮತ್ತು ಸಮಾಜ ವಿಜ್ಞಾನ ಬೋಧಿಸುವ ಕಲಾ ಕನ್ನಡ ಶಿಕ್ಷಕರ ಹುದ್ದೆಗಳನ್ನು ಇಂಗ್ಲಿಷ್‌, ಕನ್ನಡ ಭಾಷಾ ವಿಷಯಕ್ಕೆ ಪರಿವರ್ತಿಸಿ, ಹೊಸಬರನ್ನು ವರ್ಗಾಯಿಸುವ ಪ್ರಕ್ರಿಯೆಯೂ ನಡೆದಿದೆ.

ಅದೇ ವಿಷಯಗಳನ್ನು ಬೋಧಿಸುತ್ತಿರುವ ಹಿರಿಯ ಶಿಕ್ಷಕರು ಹೆಚ್ಚುವರಿ ಎಂದು ಪರಿಗಣಿಸಲ್ಪಟ್ಟು ವರ್ಗಾವಣೆಯಾಗಲಿದ್ದಾರೆ.

‘ಇಲಾಖೆಯ ನಿಯಮದಂತೆ, ಶಿಕ್ಷಕರು ತಾವಾಗಿಯೇ ವರ್ಗಾವಣೆ ಬಯಸಿದರೆ, ಮುಂಬಡ್ತಿ ಹೊಂದಿದರೆ ಅಥವಾ ನಿವೃತ್ತಿಯಾದರೆ ತೆರವಾಗುವ ಹುದ್ದೆಯನ್ನು ಮಾತ್ರ ಪರಿವರ್ತನೆ ಮಾಡಬೇಕು’ ಎಂದು ಹಿರಿಯ ಶಿಕ್ಷಕರು ಇಲಾಖೆಯ ಗಮನ ಸೆಳೆಯಲು ನಿರ್ಧರಿಸಿದ್ದಾರೆ.

**

ಶಿಕ್ಷಕರ ಹುದ್ದೆ ರದ್ದಾಗುವುದಿಲ್ಲ. ಅಗತ್ಯಕ್ಕಿಂತ ಹೆಚ್ಚು ಶಿಕ್ಷಕರಿರುವ ಶಾಲೆಗಳಿಂದ ಅಗತ್ಯವಿರುವ ಶಾಲೆಗಳಿಗೆ ವರ್ಗಾವಣೆ ಮಾಡಲಾಗುವುದು.

-ಎ.ಶ್ರೀಧರನ್‌, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT