ಮಕ್ಕಳಲ್ಲ; ಶಿಕ್ಷಕರೇ ಶಾಲೆಗೆ ಚಕ್ಕರ್‌!

7
ಎ.ಎಸ್‌.ಆರ್‌. ಸಂಸ್ಥೆ ನಡೆಸಿದ ಸಮೀಕ್ಷೆ : ಶೇ 33ರಷ್ಟು ಶಿಕ್ಷಕರು ಪಾಠ ಮಾಡಲ್ಲ

ಮಕ್ಕಳಲ್ಲ; ಶಿಕ್ಷಕರೇ ಶಾಲೆಗೆ ಚಕ್ಕರ್‌!

Published:
Updated:

ಬೆಂಗಳೂರು: ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಶೇ 33ರಷ್ಟು ಶಿಕ್ಷಕರು ಪಾಠ ಮಾಡುವ ಕೆಲಸಕ್ಕೆ ಚಕ್ಕರ್‌ ಹೊಡೆಯುತ್ತಿರುವ ಅಂಶ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಎ.ಎಸ್‌.ಆರ್‌. ಸಂಸ್ಥೆ ನಡೆಸಿದ ಸಮೀಕ್ಷೆ ಹೇಳಿದೆ.

ಈ ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಇಲಾಖೆಯ ಕೆಳಹಂತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಶಿಕ್ಷಕರ ಗೈರುಹಾಜರಿಯಿಂದ ಶಾಲಾ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಶೈಕ್ಷಣಿಕ ಗುಣಮಟ್ಟವೂ ಕುಸಿಯುತ್ತಿದೆ. ಹಾಜರಾತಿ ಮೇಲೆ ನಿಗಾವಹಿಸಿ. ಅನಗತ್ಯವಾಗಿ ಗೈರಾಗುವ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಜರುಗಿಸಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (ಬಿಇಒ) ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ದೀರ್ಘಕಾಲದಿಂದ ಗೈರು ಹಾಜರಾಗಿರುವ ಅಥವಾ ಆಗಿಂದಾಗ್ಗೆ ಗೈರು ಹಾಜರಾಗುತ್ತಿರುವ ಪ್ರಕರಣಗಳು ಇದ್ದಲ್ಲಿ, ಶೈಕ್ಷಣಿಕ ಪ್ರಗತಿಗೆ ಧಕ್ಕೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿ. ಅನಗತ್ಯ ಗೈರು ಹಾಜರಿ ಮತ್ತು ಶೈಕ್ಷಣಿಕ ಪ್ರಗತಿಯ ಕುರಿತು ಪ್ರತಿ ತಿಂಗಳು ವರದಿ ತಯಾರಿಸಿ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ (ಡಿಡಿಪಿಐ) ಸಲ್ಲಿಸುವಂತೆ ಬಿಇಒಗಳಿಗೆ ಸೂಚಿಸಿದ್ದಾರೆ. 

ಶಿಕ್ಷಕರ ವೃತ್ತಿ ನಿರಾಸಕ್ತಿಯಿಂದ ಮಕ್ಕಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದರೆ, ಶಿಕ್ಷಕರಲ್ಲಿನ ಕರ್ತವ್ಯಪ್ರಜ್ಞೆಯನ್ನು ಜಾಗೃತಗೊಳಿಸಿಲು ವಿಶೇಷ ತರಬೇತಿಯ ಅಗತ್ಯವಿದೆ ಎನ್ನುತ್ತಾರೆ ತಜ್ಞರು. 

‘ಈಗಾಗಲೇ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಕೆಲವೆಡೆ ಇನ್ನೂ ಏಕೋಪಾಧ್ಯಾಯ ಶಾಲೆಗಳಿವೆ. ಇಂಥಸ್ಥಿತಿಯಲ್ಲಿ ಶಿಕ್ಷಕರು ನಿರಾಸಕ್ತಿ ತೋರಿದರೆ, ಶಿಕ್ಷಣ ವ್ಯವಸ್ಥೆ ಮತ್ತಷ್ಟು ಕುಸಿಯುತ್ತದೆ. ಶಿಕ್ಷಕ ವೃತ್ತಿಯ ಮಹತ್ವವನ್ನು ಮನವರಿಕೆ ಮಾಡಿಕೊಡುವ, ಬೋಧಕರಿಗೆ ಮನಪರಿವರ್ತನೆ ಮಾಡುವ ತರಬೇತಿಯ ಅಗತ್ಯವಿದೆ’ ಎಂದು ಆರ್‌ಟಿಇ ಕಾರ್ಯಪಡೆಯ ಸಂಚಾಲಕ ಜಿ.ನಾಗಸಿಂಹ ರಾವ್ ಅಭಿಪ್ರಾಯಪಡುತ್ತಾರೆ.

‘ಪಠ್ಯ ಬೋಧನೆಯೊಂದಿಗೆ ಮಕ್ಕಳ ಕಲಿಕಾ ಪ್ರಗತಿಯ ವರದಿಗಳನ್ನು ಸಿದ್ಧಪಡಿಸುವುದು, ಬಿಸಿಯೂಟ, ಹಾಲು, ಸಮವಸ್ತ್ರ, ಶೂ, ಸೈಕಲ್‌ ವಿತರಣೆ, ಪಠ್ಯೇತರ ಚಟುವಟಿಕೆಗಳು, ಚುನಾವಣಾ ಕೆಲಸ, ಎಸ್‌ಡಿಎಂಸಿಗಳ ನಿರ್ವಹಣೆಯ ಹೊರೆಯಲ್ಲಿ ಶಿಕ್ಷಕರು ಸುಸ್ತಾಗುತ್ತಿದ್ದಾರೆ. ವಿಶ್ರಾಂತಿಗಾಗಿ ಗೈರು ಹಾಜರು ಆಗುತ್ತಿರಬಹುದು’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

* ಗೈರು ಹಾಜರಿಯ ದೂರುಗಳು ಬರುತ್ತಿವೆ. ಅದು ಶೇ 3 ಇರಲಿ, ಶೇ 33 ಇರಲಿ. ಮುಲಾಜಿಲ್ಲದೆ ಕ್ರಮ ಜರುಗಿಸಲು ಸೂಚಿಸಿದ್ದೇನೆ

- ಎಸ್‌.ಆರ್‌.ಉಮಾಶಂಕರ್‌, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

* ಎ.ಎಸ್‌.ಆರ್‌ ವರದಿ ನಂಬಲು ಅರ್ಹವಲ್ಲ. ಸರ್ಕಾರಿ ಶಾಲೆಗಳನ್ನು ಸರ್ವನಾಶ ಮಾಡುವ ಇರಾದೆಯಿಂದ ಇಂತಹ ಅಂಕಿ–ಅಂಶ ಸೃಷ್ಠಿಸುತ್ತದೆ

- ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !