ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಓದಿದವರೇ ಇಂಗ್ಲಿಷ್‌ ಶಿಕ್ಷಕರಾಗಲು ಆಗಲ್ಲ!

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ನಿಯಮಗಳಲ್ಲಿನ ಎಡವಟ್ಟು
Last Updated 3 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಇಂಗ್ಲಿಷ್‌– ಸಮಾಜಶಾಸ್ತ್ರ– ಶಿಕ್ಷಣಶಾಸ್ತ್ರ ಸಂಯೋಜನೆಯನ್ನು ಐಚ್ಛಿಕ ವಿಷಯಗಳನ್ನಾಗಿ ಕಲಿತ ಅಭ್ಯರ್ಥಿಗಳಿಗೆ ಅವಕಾಶ ನೀಡದಿರುವುದರಿಂದ, ಸಾವಿರಾರು ಪದವೀಧರರು ಉದ್ಯೋಗದ ಅವಕಾಶದಿಂದ ವಂಚಿತರಾಗಿದ್ದಾರೆ.

10,116 ಪದವೀಧರ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಪೈಕಿ ಇಂಗ್ಲಿಷ್‌ ವಿಷಯ ಶಿಕ್ಷಕರಾಗಲು (6ರಿಂದ 8ನೇ ತರಗತಿ ಶಿಕ್ಷಕರ ನೇಮಕಾತಿಗೆ) ಪದವಿಯಲ್ಲಿ ಇತಿಹಾಸ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ವಿಷಯಗಳಲ್ಲಿ ಒಂದು ವಿಷಯವನ್ನು ಮೂರು ವರ್ಷ ಅಧ್ಯಯನ ಮಾಡಿರಬೇಕು ಎಂದಿದೆ. ಇದರಿಂದಾಗಿ, ಪದವಿಯಲ್ಲಿ ಐಚ್ಛಿಕ ಇಂಗ್ಲಿಷ್‌ ಜೊತೆಗೆ ಸಮಾಜಶಾಸ್ತ್ರ, ಶಿಕ್ಷಣ ಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದವರು ನೇಮಕಾತಿ ಪ್ರಕ್ರಿಯೆಯಿಂದ ಹೊರಗುಳಿಯಲಿದ್ದಾರೆ.

ಇತರ ಎಲ್ಲ ಅರ್ಹತೆಗಳಿದ್ದರೂ, ಇಂಗ್ಲಿಷ್‌ ಜೊತೆಗೆ ಸಮಾಜಶಾಸ್ತ್ರ ಹಾಗೂ ಶಿಕ್ಷಣಶಾಸ್ತ್ರವನ್ನು ಐಚ್ಛಿಕವಾಗಿ ಕಲಿತಿರುವುದರಿಂದಾಗಿ ಉದ್ಯೋಗದಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. 2017ರಲ್ಲಿ ನಿಯಮಗಳಿಗೆ ತಿದ್ದುಪಡಿ ತಂದಿದ್ದರಿಂದ ಉಂಟಾಗಿರುವ ಈ ಬಿಕ್ಕಟ್ಟಿನಿಂದಾಗಿ, ಅಭ್ಯರ್ಥಿಗಳು ಕಂಗಾಲಾಗಿದ್ದಾರೆ. ಕಾನೂನು ಹೋರಾಟ ನಡೆಸುವುದಕ್ಕೆ ಸಜ್ಜಾಗುತ್ತಿದ್ದಾರೆ.

‘ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ತಂದು, ಅವೈಜ್ಞಾನಿಕ ಅಂಶಗಳನ್ನು ಸೇರಿಸಿರುವುದರಿಂದ ಈ ಬಿಕ್ಕಟ್ಟು ಸೃಷ್ಟಿಯಾಗಿದೆ. ಐಚ್ಛಿಕವಾಗಿ ಇಂಗ್ಲಿಷ್‌ ಕಲಿತಿರುವ ನಮಗೆ ಇಂಗ್ಲಿಷ್‌ ಶಿಕ್ಷಕರಾಗಲು ಅವಕಾಶ ದೊರೆಯದಿರುವ ನಿಯಮಗಳಿಂದಾಗಿ ಕಂಗಾಲಾಗಿದ್ದೇವೆ. ಹೀಗಾದಲ್ಲಿ, ಪದವಿಯಲ್ಲಿ ಸಮಾಜಶಾಸ್ತ್ರ ಹಾಗೂ ಶಿಕ್ಷಣಶಾಸ್ತ್ರ ವಿಷಯಗಳನ್ನು ಕಲಿಸುವುದೇಕೆ? ಈ ವಿಷಯಗಳಲ್ಲಿ ಪದವಿ ಪಡೆದವರಿಗೆ ಡಿ.ಇಡಿ ತರಬೇತಿ ಪಡೆಯಲು, ಟಿಇಟಿ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದೇಕೆ’ ಎಂದು ಉದ್ಯೋಗ ಆಕಾಂಕ್ಷಿಗಳು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘2010ರ ಮುಂಚೆ ನಾವು ಪದವಿ ಪಡೆದಿದ್ದೆವು. ಈ ಹಿಂದೆ ನಡೆದಿರುವ ನೇಮಕಾತಿ ಪ್ರಕ್ರಿಯೆಗಳಲ್ಲಿ ನಮಗೆ ಅರ್ಹತೆ ಇತ್ತು. ಆದರೆ, ಈಗ ಹೊಸ ನಿಯಮಗಳಿಂದ ಗೊಂದಲ ಸೃಷ್ಟಿಸಲಾಗಿದೆ. ಸಮಾಜಶಾಸ್ತ್ರ, ಇಂಗ್ಲಿಷ್ ವಿಷಯಗಳನ್ನು ತೆಗೆದುಕೊಂಡು ಕಲಿತವರಿಗೆ ನೇಮಕಾತಿಯಲ್ಲಿ ಅವಕಾಶ ಕೊಡಬೇಕು’ ಎಂದು ಉದ್ಯೋಗಾಕಾಂಕ್ಷಿಗಳಾದ ರಮೇಶ ಈಶ್ವರ ಕಾಂಬಳೆ, ಶ್ರೀನಾಥ ಎಸ್., ಕುಮಾರ ಹುಲೆನ್ನವರ, ಈಶ್ವರ ಒತ್ತಾಯಿಸಿದರು.

ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ಅಭ್ಯರ್ಥಿಗಳಿಗೂ ಈ ಬಾರಿಯ ನೇಮಕಾತಿಯಲ್ಲಿ ಮುಕ್ತ ಅವಕಾಶ ಕಲ್ಪಿಸಿಲ್ಲ. ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಪದವಿಯಲ್ಲಿ ಯಾವುದೇ ವಿಷಯ ಓದಿದ್ದರೂ ಅವಕಾಶ ಕಲ್ಪಿಸಬೇಕು. ಪದವಿಯಲ್ಲಿ 3 ವರ್ಷದ ವಿಷಯಗಳ ಸಂಯೋಜಿತ ಒಟ್ಟು ಸರಾಸರಿ (ಪರಿಶಿಷ್ಟ ಜಾತಿ ಹಾಗೂ ಪಂಗಡ, ಪ್ರವರ್ಗ–1ರವರಿಗೆ ಶೇ 45 ಹಾಗೂ ಇತರರಿಗೆ ಶೇ 50ರಷ್ಟು) ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಅರ್ಹತೆ ನೀಡಬೇಕು ಎನ್ನುವುದು ಅಭ್ಯರ್ಥಿಗಳ ಒತ್ತಾಯವಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವರು ಮನವಿ ಸಲ್ಲಿಸಿದ್ದರು. ಮುಂದಿನ ಕ್ರಮಕ್ಕಾಗಿ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಕಳುಹಿಸಲಾಗಿದೆ.
–ಮೇಜರ್ ಸಿದ್ದಲಿಂಗಯ್ಯ ಹಿರೇಮಠ,ಹೆಚ್ಚುವರಿ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT