ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಜಯಂತಿ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ

Last Updated 30 ಜುಲೈ 2019, 17:34 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸುತ್ತಿದ್ದ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿಯನ್ನು ತಕ್ಷಣದಿಂದಲೇ ಜಾರಿ ಬರುವಂತೆ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶವನ್ನು ಕಾಂಗ್ರೆಸ್‌ ನಾಯಕರು ಮತ್ತು ಪ್ರಗತಿಪರರು ಕಟುವಾಗಿ ಟೀಕಿಸಿದ್ದಾರೆ. ‘ಈ ಮೂಲಕ ಬಿಜೆಪಿ ಸರ್ಕಾರ ದ್ವೇಷ ಸಾಧನೆಗೆ ಮುಂದಾಗಿದೆ’ ಎಂದು ಕಾಂಗ್ರೆಸ್‌ ಕಟುವಾಗಿ ಪ್ರತಿಕ್ರಿಯಿಸಿದೆ. ರದ್ದತಿ ಕ್ರಮವನ್ನು ಬಿಜೆಪಿ ಸ್ವಾಗತಿಸಿದೆ.

ವಿರಾಜಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಮತ್ತು ಇತರ ಶಾಸಕರು ಸಲ್ಲಿಸಿರುವ ಮನವಿ ಆಧಾರದ ಮೇರೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಮಂಗಳವಾರ ಬೆಳಿಗ್ಗೆ ಈ ಸಂಬಂಧ ಆದೇಶ ಹೊರಬಿದ್ದಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 2016 ರಲ್ಲಿ ಟಿಪ್ಪು ಜಯಂತಿ ಆಚರಿಸುವ ತೀರ್ಮಾನ ತೆಗೆದುಕೊಂಡಿದ್ದರು. ‘ಮೈಸೂರು ಹುಲಿ ಎಂದೇ ಹೆಸರಾಗಿದ್ದ ಟಿಪ್ಪು ಸುಲ್ತಾನ್‌, ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಎಂಬ ಕಾರಣಕ್ಕೆ ಜಯಂತಿ ಆಚರಣೆಗೆ ನಿರ್ಧರಿಸಲಾಗಿತ್ತು. ಮುಸ್ಲಿಮರನ್ನು ಓಲೈಸಲು ಜಯಂತಿ ಆರಂಭಿಸಿದ್ದಲ್ಲ. ಆತ ಒಂದು ಧರ್ಮ ಸೇರಿದವನಲ್ಲ. ನಮ್ಮ ರಾಜ್ಯ ಮಾತ್ರವಲ್ಲ, ಇಡೀ ದೇಶಕ್ಕೆ ಸೇರಿದ ಆಸ್ತಿ’ ಎಂದು ಕಾಂಗ್ರೆಸ್‌ ಪ್ರತಿಪಾದಿಸಿದೆ.

ಆದರೆ, ಟಿಪ್ಪು ಜಯಂತಿಯನ್ನು ಬಿಜೆಪಿ ಆರಂಭದಿಂದಲೂ ವಿರೋಧಿಸುತ್ತಲೇ ಬಂದಿದೆ. ಮೊದಲ ವರ್ಷ ಟಿ‍ಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಗಲಭೆ ನಡೆದು, ಒಬ್ಬರು ಮೃತಪಟ್ಟಿದ್ದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ರದ್ದಪಡಿಸುವುದಾಗಿ ವಿಧಾನಸಭೆ ಚುನಾವಣೆ ವೇಳೆ ಯಡಿಯೂರಪ್ಪ ಘೋಷಿಸಿದ್ದರು.

*ಟಿಪ್ಪು ಜಯಂತಿಯಿಂದ ಗಲಾಟೆ, ಗೊಂದಲಗಳಿಗೆ ಕಾರಣವಾಗಿತ್ತು. ಇದು ಪುನರಾವರ್ತನೆ ಆಗದಿರಲು ಟಿಪ್ಪು ಜಯಂತಿ ರದ್ದು ಮಾಡುವಂತೆ ಶಾಸಕರು ಪತ್ರ ಬರೆದಿದ್ದರು

-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

*ಟಿಪ್ಪು ಜಯಂತಿ ರದ್ದು ಮಾಡಿ ಬಿಜೆಪಿ ಸರ್ಕಾರ ದೊಡ್ಡ ಅಪರಾಧ ಮಾಡಿದೆ. ಸ್ವಾತಂತ್ರ್ಯ ಹೋರಾಟಗಾರ ಎಂಬ ಕಾರಣಕ್ಕೆ ಜಯಂತಿ ಆರಂಭಿಸಿದ್ದೆವು. ಸರ್ಕಾರದ ನಿರ್ಧಾರವನ್ನು ಖಂಡಿಸುತ್ತೇನೆ

-ಸಿದ್ದರಾಮಯ್ಯ, ಕಾಂಗ್ರೆಸ್‌ ನಾಯಕ

*ದೇಶವನ್ನು ಕೇಸರೀಕರಣ ಮಾಡುವ ಪ್ರಯತ್ನ ನಡೆಯುತ್ತಿರುವ ಈ ಸಂದರ್ಭ ದೇಶಭಕ್ತ ಟಿಪ್ಪುಸುಲ್ತಾನರ ಜಯಂತಿಯನ್ನು ಸರ್ಕಾರ ರದ್ದುಪಡಿಸಿರುವುದು ಖಂಡನೀಯ

-ವೈ. ಎಸ್. ವಿ. ದತ್ತ, ಜೆಡಿಎಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT