ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2000–19 ಹಿನ್ನೋಟ | ಚಲಿಸಿದ್ದಂತೂ ನಿಜ ಮುಂದಕ್ಕೋ? ಹಿಂದಕ್ಕೋ?

Last Updated 29 ಡಿಸೆಂಬರ್ 2019, 7:37 IST
ಅಕ್ಷರ ಗಾತ್ರ

‘ನ ನಗೆ ಮದುವೆಯಾದ ಮಾರನೇ ದಿನವೂ ಬೆಳಗಾಗಿತ್ತು. ಸೂರ್ಯ ಪೂರ್ವದಲ್ಲಿಯೇ ಹುಟ್ಟಿದ್ದ, ಜೇನು ಸಿಹಿಯಾಗಿಯೂ, ಹಾಗಲಕಾಯಿ ಕಹಿಯಾಗಿಯೂ ಇತ್ತು. ಯಾವುದೂ, ಏನೂ ಬದಲಾಗಿರಲಿಲ್ಲ… !’

- ಒಂದು ನಿರ್ದಿಷ್ಟ ದಿನ, ಮುಹೂರ್ತ ಅಥವಾ ಘಟನೆಯ ನಂತರ ಬದುಕು ಇಡಿಯಾಗಿ ಬದಲಾಗಿಬಿಡುತ್ತೆ ಎಂದುಕೊಳ್ಳುವವರನ್ನು ನೋಡಿದಾಗ ಸಾದತ್ ಹಸನ್ ಮಂಟೊ ಕಥೆಯೊಂದರಲ್ಲಿ ಬರುವ ಈ ಮಾತು ನೆನಪಾಗುತ್ತೆ. ಬಹುಕಾಲದಿಂದ ನಿರೀಕ್ಷಿಸುತ್ತಿರುವ ಅಂಥದ್ದೊಂದು ಸಂದರ್ಭವೋ, ಘಟನೆಯೋ, ದಿನಾಂಕವೋ ಹೀಗೆ ಬಂದು ಹಾಗೆ ಹೊರಟು ಹೋಗಿರುತ್ತೆ. ಆದರೆ ಬದಲಾವಣೆ ಎಂಬುದು ಮಾತ್ರ ಹುಲ್ಲು ಬೆಳೆದಂತೆ. ಬೆಳೆದಿದ್ದು ಗೊತ್ತಾಗುತ್ತೆ, ಕಾಣಿಸಲ್ಲ.

ಈಗ ಉದಾಹರಣೆಗೆ ನಾಡಿದ್ದು ಆರಂಭವಾಗುವ 2020ನೇ ಇಸವಿಯನ್ನೇ ತೆಗೆದುಕೊಳ್ಳಿ.

ಎಷ್ಟೋ ಕ್ರಿಯಾಯೋಜನೆಗಳು, ಕನಸುಗಳು, ಕಾಲಮಿತಿ ಯೋಜನೆಗಳಿಗೆ ‘ವಿಷನ್ 2020’ ಎಂಬ ಹೆಸರಿತ್ತು. ಜನವರಿ 1, 2020ಕ್ಕೆ ನಿಮ್ಮ ಬದುಕನ್ನು ಹಾಗೆ ಬದಲಿಸಿಬಿಡುತ್ತೇವೆ, ಹೀಗೆ ಮಾಡಿಬಿಡುತ್ತೇವೆ ಎಂದೆಲ್ಲಾ ನಮ್ಮನ್ನಾಳುವ ದಣಿಗಳು ಪುಂಖಾನುಪುಂಖವಾಗಿ ಅಣಿಮುತ್ತುಗಳನ್ನು ಉದುರಿಸಿದ್ದರು. ಈಗ ನೋಡಿ ಅಂಥದ್ದೊಂದು 2020 ಬಂದೇ ಬಿಟ್ಟಿದೆ. ನಮ್ಮ ಬದುಕು ಏನಾದರೂ ಬದಲಾಗಿದೆ ಎಂದು ನಿಮಗೆ ಅನ್ನಿಸುತ್ತಿದೆಯೇ?

ಹಾಗಾದರೆ ಏನೂ ಬದಲಾಗಿಯೇ ಇಲ್ಲವೇ?

ಈ ಪ್ರಶ್ನೆಗೆ ಉತ್ತರ ಸಿಗಲು ತುಸು ಹಿಂದಿರುಗಿ ನೋಡಬೇಕು. ಹಾಗೆ ತಿಟ್ಹತ್ತಿ ತಿರುಗಿ ರಿವೈಂಡ್ ಮಾಡಿ ನೋಡಿದರೆ ಮಾತ್ರ 21ನೇ ಶತಮಾನದ ಇದುವರೆಗಿನ ವರ್ಷಗಳಲ್ಲಿ ಬದುಕು ಎಷ್ಟೆಲ್ಲಾ ಬದಲಾಗಿದೆ ಮತ್ತು ಎಷ್ಟೆಲ್ಲಾ ಬದಲಾದ ಮೇಲೆಯೂ ನಮಗೆ ಏಕೆ ನಮ್ಮ ಬದುಕು ನಿಂತಲ್ಲಿಯೇ ನಿಂತಂತೆ ಅನ್ನಿಸುತ್ತಿದೆ ಎನ್ನುವುದು ಅರ್ಥವಾದೀತು.

ಭಾರತದ ಪಾಲಿಗೆ ಖುಷಿಪಡಬೇಕೋ? ದುಃಖಪಡಬೇಕೋ ಎಂಬ ಗೊಂದಲದಲ್ಲಿಯೇ ಆರಂಭವಾದ ಶತಮಾನವಿದು.

ಕಠ್ಮಂಡುವಿನಿಂದ ಹೊರಟಿದ್ದ ಏರ್‌ ಇಂಡಿಯಾ ವಿಮಾನವನ್ನು 1999ರ ಡಿಸೆಂಬರ್‌ 24 ರಂದು ಕಂದಹಾರ್‌ಗೆ ಅಪಹರಿಸಿ ಕೊಂಡೊಯ್ದ ಭಯೋತ್ಪಾದಕರು ಪ್ರಯಾಣಿಕರ ಜೀವ ಬೇಕು ಅಂದ್ರೆ ಉಗ್ರರ ನಾಯಕ ಮಸೂದ್ ಅಜರ್‌ನನ್ನು ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಉಗ್ರ ನಾಯಕನನ್ನು ಬಿಡುಗಡೆ ಮಾಡಿದ ಸರ್ಕಾರ, ಪ್ರಯಾಣಿಕರನ್ನು ಜೀವಂತ ವಾಪಸ್ ಕರೆತಂದಿತ್ತು. ಉಗ್ರರ ಕಪಿಮುಷ್ಟಿಯಿಂದ ಪಾರಾಗಿ ಬಂದ ಪ್ರಯಾಣಿಕರ ಬಗ್ಗೆ ಖುಷಿಪಡಬೇಕೋ? ಕೈಗೆ ಸಿಕ್ಕಿದ್ದ ಕಟ್ಟರ್‌ ಉಗ್ರಗಾಮಿಯನ್ನು ಬಿಡುಗಡೆ ಮಾಡುವಂಥಾಗಿದ್ದಕ್ಕೆ ದುಃಖ ಪಡಬೇಕೋ ಎಂಬ ಗೊಂದಲದಲ್ಲಿ ಭಾರತೀಯರು ಮುಳುಗಿದ್ದಾಗಲೇ 2000ನೇ ಇಸವಿಯ ಮೊದಲ ಸೂರ್ಯರಶ್ಮಿ ಭಾರತದ ನೆಲವನ್ನು ಚುಂಬಿಸಿತ್ತು.

ಇದಾದ ಮೇಲೆ ಸಂಸತ್ ಮೇಲಿನ ದಾಳಿ, ಮುಂಬೈ ದಾಳಿ, ಪಠಾಣ್‌ಕೋಟ್ ವಾಯುನೆಲೆಯ ಮೇಲಿನ ದಾಳಿ, ಉರಿ ಸೇನಾ ಶಿಬಿರದ ಮೇಲಿನ ದಾಳಿ, ಪುಲ್ವಾಮಾ ಸ್ಫೋಟ... ಹೀಗೆ ಸಾಲುಸಾಲು ಭಯೋತ್ಪಾದನಾದಾಳಿಗಳು ಸುದ್ದಿಯಾದವು. ಆದರೆ ಬಾಲಾಕೋಟ್‌ ಉಗ್ರರ ಶಿಬಿರದ ಮೇಲೆ ವಾಯುಸೇನೆ ನಡೆಸಿದ ನಿರ್ಣಾಯಕ ಪ್ರತಿದಾಳಿ ಮತ್ತು ಅದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ದಕ್ಕಿಸಿಕೊಂಡ ಭಾರತದ ವಿದೇಶಾಂಗ ನೀತಿ 19 ವರ್ಷಗಳಲ್ಲಿ ಭಾರತ ಪ್ರಬಲ ಸೇನಾಶಕ್ತಿಯಾಗಿ, ಜಗತ್ತು ಹಗುರವಾಗಿ ಪರಿಗಣಿಸದಂಥ ಬಲವಾಗಿ ಎಷ್ಟರಮಟ್ಟಿಗೆ ಬೆಳೆದಿದೆ ಎಂಬುದನ್ನು ಸಾಬೀತುಪಡಿಸುವಂತೆ ಇತ್ತು.

ನಗರಗಳು ಕೊಬ್ಬುತ್ತಿವೆ, ಹಳ್ಳಿಗಳು ಬಡಕಲಾಗುತ್ತಿವೆ ಎಂಬುದು ಲಾಗಾಯ್ತಿನಿಂದಲೂ ಕೇಳಿ ಬರುತ್ತಿದ್ದ ಮಾತು. ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದಾಗ ಇದಕ್ಕೆ ತಡೆಯೊಡ್ಡುವ ಪ್ರಯತ್ನವೆಂಬಂತೆ ‘ಪುರ’ (PURA- Providing Urban amnesties in Rural Areas) ಪರಿಕಲ್ಪನೆಯನ್ನು ದೇಶದ ಮುಂದಿಟ್ಟರು (2003). ನಾಲ್ಕೈದು ಹಳ್ಳಿಗಳನ್ನು ಒಂದು ಗುಚ್ಛವಾಗಿಸುವುದು, ಉತ್ತಮ ರಸ್ತೆ, ಸಾರಿಗೆ ಸೌಲಭ್ಯ, ಬ್ರಾಡ್‌ಬ್ಯಾಂಡ್ ಸಂಪರ್ಕ, ಶಿಕ್ಷಣ ಸೌಲಭ್ಯ, ಮನರಂಜನೆ, ಕೌಶಲ ಕೇಂದ್ರಗಳು... ಹೀಗೆ ಹತ್ತಾರು ವಿಚಾರಗಳು ಕಲಾಂ ರೂಪಿಸಿಕೊಟ್ಟ ಪ್ರಣಾಳಿಕೆಯಲ್ಲಿತ್ತು.

ಕಳೆದ 20 ವರ್ಷಗಳಲ್ಲಿ ನಮ್ಮ ಹಳ್ಳಿಗಳು ಸಾಕಷ್ಟು ಬದಲಾಗಿದ್ದಂತೂ ಸತ್ಯ, ಸಾಕಷ್ಟು ಸೌಲಭ್ಯಗಳು ತಲುಪಿದ್ದೂ ನಿಜ. ಆದರೆ ನಗರಮೋಹ, ವಲಸೆ ಹೆಚ್ಚಾಗಿದ್ದೂ ಸತ್ಯತಾನೆ? ಈಗ ಹಳ್ಳಿಗಳಲ್ಲಿ ಬೇಸಾಯ ಮಾಡೋಕೆ ಜನ ಸಿಗುತ್ತಿಲ್ಲ. ಆದರೆ, ವಾರಕ್ಕೊಮ್ಮೆ ಹಳ್ಳಿಗಳಿಗೆ ಹೋಗಿ ಅಪ್ಪ–ಅಮ್ಮನಿಗೆ ಕೃಷಿಯಲ್ಲಿ ನೆರವಾಗುವ, ಕೆಲವೊಮ್ಮೆ ಹೊಸದಾಗಿ ಕೃಷಿ ಆರಂಭಿಸುವ ‘ವೀಕೆಂಡ್ ಕೃಷಿ’ಯ ಪರಿಕಲ್ಪನೆ ಪ್ರವರ್ಧಮಾನಕ್ಕೆ ಬಂದಿದೆ.

ಆರ್ಥಿಕ ಸೇರ್ಪಡೆಯಡಿ ಹಳ್ಳಿಗಳಿಗೆ ಬ್ಯಾಂಕ್‌ ಶಾಖೆಗಳೇನೋ ಬಂದವು. ಆದರೆ ಪಾಸ್‌ಬುಕ್ ಎಂಟ್ರಿ ಮಾಡಿಸಲು ಕರೆಂಟ್ ಇಲ್ಲ, ಪ್ರಿಂಟರ್ ಕೆಟ್ಟಿದೆ, ಸಿಬ್ಬಂದಿ ರಜೆ ಇದ್ದಾರೆ ಎಂಬ ನೆಪಗಳು ಮಾತ್ರ ಇಂದಿಗೂ ಮುಂದುವರಿದಿವೆ. ಗ್ರಾಮೀಣ ಪ್ರದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಈ ಗೊಂದಲ ನಮ್ಮ ಡಿಜಿಟಲ್ ಸಾಧನೆಗೆ ದೊಡ್ಡ ಅಣಕದಂತೆ ಭಾಸವಾಗುತ್ತದೆ.

ಕಳೆದ ಒಂದು ದಶಕದಲ್ಲಿ ದೇಶ ಸಾಕಷ್ಟು ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ಜಾಟರು ಮತ್ತು ಮರಾಠರು ಮೀಸಲಾತಿಗಾಗಿ ನಡೆಸಿದ ಹೋರಾಟ, ರೈತರು ಬೆಂಬಲ ಬೆಲೆಗೆ ಒತ್ತಾಯಿಸಿ ನಡೆಸಿದ ಮುಂಬೈ–ದೆಹಲಿ ಚಲೋ ಚಳವಳಿಗಳನ್ನು ಅಷ್ಟು ಸುಲಭವಾಗಿ ಮರೆಯಲು ಆಗದು. ಆದರೆಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಮಾರಣಾಂತಿಕ ಪೆಟ್ಟು ಕೊಟ್ಟ, ದೇಶದಲ್ಲಿ ಮಡುಗಟ್ಟಿದ್ದ ಭ್ರಷ್ಟಾಚಾರ ವಿರುದ್ಧದ ಅಸಹನೆಯ ಆಸ್ಫೋಟಕ್ಕೆ ದನಿಯಾದ ಅಣ್ಣಾ ಹಜಾರೆ ನಡೆಸಿದ ಉಪವಾಸ ಸತ್ಯಾಗ್ರಹ ಅವೆಲ್ಲದರ ಪೈಕಿ ಮುಂಚೂಣಿಯಲ್ಲಿ ನಿಲ್ಲುವಂಥದ್ದು. ಜನಲೋಕಪಾಲ ಮಸೂದೆ ಜಾರಿಯಾಗಬೇಕು ಎಂದು ಒತ್ತಾಯಿಸಿ ಅಣ್ಣಾ ಹಜಾರೆ ಆರಂಭಿಸಿದ ಸತ್ಯಾಗ್ರಹವು ಅರವಿಂದ್ ಕೇಜ್ರೀವಾಲ್ ಅವರ ರಾಜಕೀಯ ಬದುಕನ್ನು ಅಕ್ಷರಶಃ ರೂಪಿಸಿತು. ಮುಂದಿನ ದಿನಗಳಲ್ಲಿ ಮೋದಿ ಅಧಿಕಾರದ ಗಾದಿಗೇರುವುದಕ್ಕೆ ಬೇಕಾದ ಭೂಮಿಕೆ ಒದಗಿಸಿತು.

21ನೇ ಶತಮಾನದಲ್ಲಿ ಇದುವರೆಗಿನ ರಾಜಕೀಯ ಗಮನಿಸಿದರೆ ಹಲವು ಸಾಮ್ಯತೆಗಳು ಕಾಣಿಸುತ್ತವೆ.ಈ ಶತಮಾನದ ಆರಂಭದಲ್ಲಿ ಬಿಜೆಪಿಯ ಜನಪ್ರಿಯತೆ ಇಳಿಯುತ್ತಿತ್ತು, ಅದರ ನಾಯಕ ವಾಜಪೇಯಿ ಜನಪ್ರಿಯತೆ ಉತ್ತುಂಗದಲ್ಲಿತ್ತು. ಈಗಲೂ ಅಷ್ಟೇ ತಾನೆ? ಮೋದಿ ಜನಪ್ರಿಯತೆ ಕಡಿಮೆಯಾಗಿಲ್ಲ. ಆದರೆ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಒಂದು ವೃತ್ತ ಪೂರ್ಣಗೊಂಡಂತೆ ಭಾಸವಾಯಿತೆ?

‘ಎಲ್ಲವನ್ನೂ ಸರಿ ಮಾಡಿದ್ದೇವೆ. ಭಾರತ ಈಗ ಪ್ರಕಾಶಿಸುತ್ತಿದೆ’ ಎಂದು 2004ರಲ್ಲಿ ಸಾರಿ ಹೇಳಿದ ಬಿಜೆಪಿ ಅಧಿಕಾರ ಕಳೆದುಕೊಂಡಿತು. ‘ವಿದೇಶಿ ಮಹಿಳೆ’ ಚುಕ್ಕಾಣಿ ಹಿಡಿದಿದ್ದ ಪಕ್ಷ ಅಧಿಕಾರಕ್ಕೆ ಬಂದು, ‘ಮೌನ ಬಂಗಾರ’ ಎಂದುಕೊಂಡಿದ್ದ ಮನಮೋಹನ ಸಿಂಗ್ ಪ್ರಧಾನಿಯಾದರು. 10 ವರ್ಷಗಳ ನಂತರ ಮನಮೋಹನರ ಮೌನವನ್ನು ಕೆದಕಿ, ಬೆದಕಿ, ಕಾಡಿದ ನರೇಂದ್ರ ಮೋದಿ ಅಭೂತಪೂರ್ವ ಎಂಬಂತೆ ಬಿಜೆಪಿಗೆ ಅಧಿಕಾರ ತಂದುಕೊಟ್ಟರು. ಆದರೆ ಪ್ರಧಾನಿಯಾಗುವ ಮೊದಲು ಯಾವ ಮೌನವನ್ನು ಟೀಕಿಸುತ್ತಿದ್ದರೋ, ಅವರೇ ಈಗ ಅದೇ ಮೌನವನ್ನು ಸೆಲೆಕ್ಟೀವ್‌ ಆಗಿ ಮುರಿಯುವುದನ್ನೇ ಜಾಣತನ ಎಂದುಕೊಂಡಿದ್ದಾರೆ.

ಇನ್ನು ರಾಜ್ಯದ ವಿಚಾರಕ್ಕೆ ಬಂದರೆ ನೆನಪಿಸಿಕೊಳ್ಳಲು ಸಾಕಷ್ಟಿದೆ.ಪಾಂಚಜನ್ಯ ಮೊಳಗಿಸಿದ್ದ ಎಸ್‌.ಎಂ.ಕೃಷ್ಣ 2004ರವರೆಗೆ ಮುಖ್ಯಮಂತ್ರಿಯಾಗಿದ್ದರು. ಅದಾದ ಮೇಲೆ ಎರಡು ಅವಧಿಗೆ 20:20 ಸರ್ಕಾರಗಳು ಹೀಗೆ ಬಂದು ಹಾಗೆ ಹೋದವು. ಧರಂಸಿಂಗ್, ಎಚ್‌.ಡಿ.ಕುಮಾರಸ್ವಾಮಿ ಅಧಿಕಾರ ಅನುಭವಿಸಿದರು. ಬಿಜೆಪಿಗೆ ಅಧಿಕಾರ ಸವಿ ಸಿಕ್ಕರೂ ಯಡಿಯೂರಪ್ಪಗೆ ಮುಖ್ಯಮಂತ್ರಿ ಗಾದಿ ಒಲಿಯಲಿಲ್ಲ. ಕುಮಾರಸ್ವಾಮಿಗೆ ‘ವಚನಭ್ರಷ್ಟ’ ಹಣೆಪಟ್ಟಿ ಕಟ್ಟಿದ ಬಿಜೆಪಿ, ಅದನ್ನೇ ಚುನಾವಣಾ ವಿಷಯವಾಗಿಸಿ ಗೆಲುವು ದಕ್ಕಿಸಿಕೊಂಡಿತು. ಬಹುಮತದ ದಕ್ಕಿಸಿಕೊಂಡರೂ ಬಿಜೆಪಿ ಸರ್ಕಾರದಲ್ಲಿ ಮೂವರು ಮುಖ್ಯಮಂತ್ರಿಗಳು ಬಂದುಹೋದರು.

ನಂತರದ ಚುನಾವಣೆಯಲ್ಲಿ ‘ನಾನಿಲ್ಲದೇ ಬಿಜೆಪಿಯಿಲ್ಲ’ ಎಂದು ನಿರೂಪಿಸುವ ಹಟದಲ್ಲಿ ಯಡಿಯೂರಪ್ಪ ಕೆಜೆಪಿ ಕಟ್ಟಿಕೊಂಡರು. ಬಿಜೆಪಿಯನ್ನು ಮಣಿಸಿ, ಕಾಂಗ್ರೆಸ್‌ನ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಆದರೆ 2019ರಲ್ಲಿ ಗೆಲುವಿನ ವಿಶ್ವಾಸದಲ್ಲಿದ್ದ ಸಿದ್ದರಾಮಯ್ಯ ಎಡವಿದರು. ಮತ್ತೆ ಬಂದುದು ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ. ಮುಖ್ಯಮಂತ್ರಿಯಾಗಿದ್ದು ಕುಮಾರಸ್ವಾಮಿ. ಅತೃಪ್ತ ಶಾಸಕರ ರಾಜೀನಾಮೆ. ಯಡಿಯೂರಪ್ಪಗೆ ಅಧಿಕಾರ.

ರಾಜಕಾರಣದ ಗೊಂದಲ, ಹಗರಗಣಗಳ ನಡುವೆಯೂ ನಮ್ಮ ದೇಶ ಸಾಧಿಸಿದ್ದು ಕಡಿಮೆಯಲ್ಲ.20 ವರ್ಷಗಳಲ್ಲಿ ನಮ್ಮ ಜಿಡಿಪಿ ಶೇ 3.83ರಿಂದ ಶೇ 6.98ಕ್ಕೆ (2018) ಮುಟ್ಟಿದೆ. ಸರಾಸರಿ ಆಯಸ್ಸು 62.5ರಿಂದ 69.7 ವರ್ಷಗಳಿಗೆ ಏರಿದೆ. ಬಡತನದ ಪ್ರಮಾಣ 43 ಕೋಟಿಯಿಂದ 7.3 ಕೋಟಿಗೆ ಇಳಿದಿದೆ. ಬಹುಪಾಲು ಜನರಿಗೆ ಸ್ಮಾರ್ಟ್‌ಫೋನ್‌ಗಳ ಮೂಲಕ ಇಂಟರ್ನೆಟ್ ದಕ್ಕಿದೆ. ಗ್ಯಾಸ್‌ ಕನೆಕ್ಷನ್ ಸುಲಭವಾಗಿ ಸಿಗುತ್ತಿದೆ. ಕರೆಂಟ್ ಬಿಲ್ ತುಂಬುವುದೋ, ರೈಲು–ಬಸ್‌ಗಳ ಟಿಕೆಟ್ ಬುಕ್ ಮಾಡುವುದೋ ಮೊದಲಿನಂತೆ ಪಾಳಿಯಲ್ಲಿ ನಿಂತು ಮಾಡಬೇಕಾದ ಕೆಲಸಗಳಾಗಿ ಉಳಿದಿಲ್ಲ.

ಇಷ್ಟೆಲ್ಲ ಬೆನ್ನು ತಟ್ಟಿಕೊಂಡ ನಂತರವೂ 20 ವರ್ಷಗಳ ಹಿಂದೆನಮ್ಮ ಸಮಾಜದಲ್ಲಿ ಕಂಡು ಬರುತ್ತಿದ್ದಷ್ಟು ಜೀವನಪ್ರೀತಿ, ಸಹಾನುಭೂತಿ ಈಗ ಉಳಿದಿದೆ ಎಂದು ಹೇಳಲು ಧೈರ್ಯ ಸಾಲದು.

ಆರ್ಥಿಕ ಹಿಂಜರಿತ, ಡಾಟ್‌ ಕಾಂ ನೀರ್ಗುಳ್ಳೆ ಒಡೆದ ವಿದ್ಯಮಾನಗಳನ್ನು ಸಮರ್ಥವಾಗಿ ಎದುರಿಸಿದ್ದ ದೇಶವಿದು. ಆದರೆ ಈಗೇಕೆ ನೋಟು ಅಮಾನ್ಯೀಕರಣ ವಿದ್ಯಮಾನವನ್ನು ಎರಡು ವರ್ಷಗಳ ನಂತರವೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಆರ್ಥಿಕ ಹಿಂಜರಿತದಿಂದ ಕಂಗಾಲಾದವರಿಗೆ ಸಾಂತ್ವನ ಬೇಕಿದೆ ಎಂಬುದನ್ನು ಒಪ್ಪಲೂ ಅಧಿಕಾರದಲ್ಲಿರುವವರು ತಯಾರಿಲ್ಲ. ಪ್ರತಿಭಟನೆಗಳನ್ನು ಹತ್ತಿಕ್ಕುವ ಅತ್ಯುತ್ಸಾಹವೇ ಎಲ್ಲೆಲ್ಲೂ ಕಂಡುಬರುತ್ತಿದೆ. ಕುಸಿಯುತ್ತಿರುವ ಆರ್ಥಿಕತೆಯ ಪುನಶ್ಚೇತನಕ್ಕೆ ಏನಾದರೂ ಮಾಡಬೇಕು ಎಂಬ ಧಾವಂತ–ತುಡಿತ ಕಾಣುತ್ತಿಲ್ಲ.

ಬದುಕು ಇರುವುದು ಹಾಗೆಯೇ ಅಲ್ಲವೇ? ಅಂಕಿಅಂಶಗಳಿಂದಾಚೆಗೆ ಅದನ್ನು ಅನುಭವಿಸಬೇಕು. ಅದು ಅಂದಿಗೂ ಇಂದಿಗೂ ಎಂದೆಂದಿಗೂ ಒಂದು ಮಾನವೀಯ ಸ್ಪರ್ಶಕ್ಕೆ ಕಾಯುತ್ತಲೇ ಇರುತ್ತೆ. ರಾಜಕೀಯ, ಆರ್ಥಿಕತೆ, ಸಾಮಾಜಿಕ ಬದುಕು...

-ಹೀಗೆ ಹಲವು ಭೌತಿಕ ವಿಚಾರಗಳಲ್ಲಿ 21ನೇ ಶತಮಾನದ ಮೊದಲ ಎರಡು ದಶಕಗಳಲ್ಲಿ ದೇಶ ಸಾಕಷ್ಟು ಸುಧಾರಿಸಿದೆ. ಆದರೆ ಮಾನವೀಯತೆಯ ವಿಚಾರದಲ್ಲಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT