ಬುಧವಾರ, ಏಪ್ರಿಲ್ 21, 2021
32 °C
ಜಾಗೃತಿ, ಕಣ್ಣಿನ ‘ರೆಟಿನಾ’ ಬೇರ್ಪಡಿಸಿ ಪೂರೈಸುವ ಕಾರ್ಯದಲ್ಲೂ ಸೈ

ಮಹಿಳೆಯರಿಬ್ಬರ ‘ನೇತ್ರ ದಾನ’ ರಾಯಭಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಈ ಇಬ್ಬರೂ ವನಿತೆಯರು ನೇತ್ರ ತಜ್ಞರಲ್ಲ, ನೇತ್ರ ಬ್ಯಾಂಕ್‌ ಮಾಲೀಕರೂ ಅಲ್ಲ. ಆದರೆ, ಹಲವು ದಶಕಗಳಿಂದ ಅಂಧರಿಗೆ ‘ಕಣ್ಣಾಗುವ’ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮಧುಗಿರಿಯ ಈ ಇಬ್ಬರೂ, ಮೃತ ವ್ಯಕ್ತಿಗಳ ಕಣ್ಣಿನ ‘ರೆಟಿನಾ’ ಸ್ವತಃ ಬೇರ್ಪಡಿಸಿ, ನೇತ್ರಾಲಯಗಳಿಗೆ ಪೂರೈಸುತ್ತಿದ್ದಾರೆ. ಒಬ್ಬರು ಸಿ.ಎ.ಗಾಯತ್ರಿ ನಾರಾಯಣ, ಇನ್ನೊಬ್ಬರು ಕೆ.ಎನ್.ಲತಾನಾರಾಯಣ.


ಕೆ.ಎನ್.ಲತಾನಾರಾಯಣ

ಗಾಯತ್ರಿ ನಾರಾಯಣ ಅವರು 3 ದಶಕಗಳಿಂದ ನೇತ್ರದಾನ ಜಾಗೃತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಟಿವಿಯಲ್ಲಿ ನೇತ್ರದಾನ ಕುರಿತು ಪ್ರಸಾರವಾದ ಕಾರ್ಯಕ್ರಮವೇ ‘ಕಣ್ಣಾಗುವ’ ಕಾರ್ಯಕ್ಕೆ ಪ್ರೇರಣೆ.

ಬೆಂಗಳೂರಿನ ನಾರಾಯಣ ನೇತ್ರಾಲಯವು ಇವರಿಗೆ ಕಣ್ಣಿನ ‘ರೆಟಿನಾ’ ಸಾಗಿಸಲು ‘ಕಿಟ್’ ಒದಗಿಸಿದೆ. ಈ ಕಿಟ್‌ನಲ್ಲಿಯೇ  ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಡಾ.ರಾಜಕುಮಾರ್ ನೇತ್ರಾಲಯಕ್ಕೆ ರೆಟಿನಾ ಕಳಿಸುತ್ತಾರೆ. ಬಸ್‌ನಲ್ಲಿ ಕಿಟ್‌ ಇಟ್ಟ ಬಳಿಕ ಆಸ್ಪತ್ರೆಗೆ ನಿರ್ದಿಷ್ಟ ಬಸ್ ಸಂಖ್ಯೆ ಮಾಹಿತಿ ಹೇಳಿದರೆ ಆಸ್ಪತ್ರೆಯ ಸಿಬ್ಬಂದಿ ಕಿಟ್ ಪಡೆದುಕೊಂಡು ಹೋಗುತ್ತಾರಂತೆ.

ಮೃತ ವ್ಯಕ್ತಿಗಳ 250 ರೆಟಿನಾಗಳನ್ನು ತಜ್ಞ ವೈದ್ಯರ ಸಹಾಯದಿಂದ ಸಂಗ್ರಹಿಸಿ ಪೂರೈಸಿದ್ದು, ಸ್ವತಃ ತರಬೇತಿ ಪಡೆದ ಬಳಿಕ 2017ರಿಂದ 37 ರೆಟಿನಾಗಳನ್ನು ಪೂರೈಸಿದ್ದಾರೆ.

ಇನ್ನು ಇದೇ ಊರಿನ ಕೆ.ಎನ್.ಲತಾ ನಾರಾಯಣ 2 ದಶಕಗಳಿಂದ ನೇತ್ರದಾನ ಜಾಗೃತಿ ಮಾಡಿದ್ದಾರೆ. ಇದಕ್ಕೆ ಪ್ರೇರಣೆ ಅವರ ಮಾವ ನಾಗರಾಜ್ ಶೆಟ್ಟಿ. 


ಸಿ.ಎ.ಗಾಯತ್ರಿ ನಾರಾಯಣ

‘ಮಾವನಿಗೆ ನೇತ್ರದಾನ ಮಾಡಬೇಕು ಎಂಬ ಆಶಯವಿತ್ತು. ಆದರೆ, ಮೃತಪಟ್ಟಾಗ ಆಸೆ ಕೈಗೂಡಲಿಲ್ಲ. ಅವರ ಸಾಮಾಜಿಕ ಕಳಕಳಿಯ ಸಾಕಾರಕ್ಕಾಗಿ ನಾನು ಮುಂದಾದೆ’ ಎಂದು ಲತಾ ಹೇಳುತ್ತಾರೆ.

ಲಯನ್ಸ್‌ ಆಸ್ಪತ್ರೆ ಮತ್ತು ನಾರಾಯಣ ನೇತ್ರಾಲಯಕ್ಕೆ ಕಿಟ್‌ನಲ್ಲಿ ಇವರೂ ಕಣ್ಣಿನ ರೆಟಿನಾ ಪೂರೈಸುತ್ತಿದ್ದಾರೆ.

1990ರಿಂದ ಈವರೆಗೂ 584 ರೆಟಿನಾಗಳನ್ನು ತಾವೇ ತೆಗೆದು ಪೂರೈಸಿದ್ದಾರೆ. ಅವರ ಮಗ ವರುಣ್ ಅವರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

**

ಅಯ್ಯೊ ಎಷ್ಟೇ ಕಷ್ಟವಾದರೂ ಈ ಕಾರ್ಯ ಮಾಡುತ್ತೇನೆ. ಅಮಾವಾಸ್ಯೆ ದಿನ, ಮಳೆ ಬರುವಾಗ ಕುಗ್ರಾಮಗಳಿಗೆ ಹೋಗಿ ನೇತ್ರಗಳನ್ನು ತೆಗೆದುಕೊಂಡು ಬಂದಿದ್ದೇನೆ.

-ಸಿ.ಎ.ಗಾಯತ್ರಿ ನಾರಾಯಣ

**

ನಾವು ಮತ್ತೊಬ್ಬರ ಬಾಳಿಗೆ ಬೆಳಕಾಗಬೇಕು. ಸಮಾಜದಲ್ಲಿ ಸಾಕಷ್ಟು ಟೀಕೆಗೂ ಗುರಿಯಾಗಿದ್ದಿದೆ. ಏನೇನೊ ಮಾತಾಡ್ತಾರೆ. ಆದರೆ, ನಮ್ಮ ಕಾರ್ಯ ಬಿಟ್ಟಿಲ್ಲ.

-ಕೆ.ಎನ್. ಲತಾ ನಾರಾಯಣ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು