ಯುಜಿಸಿ ಪಟ್ಟಿ: ಕನ್ನಡ ಜರ್ನಲ್‌ಗಳಿಗೆ ಕೊಕ್‌

7
4,305 ಜರ್ನಲ್‌ಗಳ ಮಾನ್ಯತೆ ರದ್ದು: ಕಂಗಾಲಾದ ಕನ್ನಡ ಸಂಶೋಧನಾ ವಿದ್ಯಾರ್ಥಿಗಳು

ಯುಜಿಸಿ ಪಟ್ಟಿ: ಕನ್ನಡ ಜರ್ನಲ್‌ಗಳಿಗೆ ಕೊಕ್‌

Published:
Updated:
Deccan Herald

ಮಂಗಳೂರು: ಜರ್ನಲ್‌ಗಳ ಗುಣಮಟ್ಟ ಕುಸಿದಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬಂದ ಮೇರೆಗೆ 4,305 ಜರ್ನಲ್‌ಗಳ ಮಾನ್ಯತೆಯನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ ರದ್ದುಪಡಿಸಿದೆ.

ಇದರಲ್ಲಿ ಕನ್ನಡ ಭಾಷೆಯ ಎಲ್ಲ 11 ಜರ್ನಲ್‌ಗಳ ಮಾನ್ಯತೆ ರದ್ದಾಗಿದ್ದು, ರಾಜ್ಯದಲ್ಲಿರುವ ಕನ್ನಡದ ಸಂಶೋಧನಾ ಅಭ್ಯರ್ಥಿಗಳಿಗೆ ಸಂಶೋಧನಾ ಲೇಖನಗಳ ಪ್ರಕಟಣೆಗೆ  ವೇದಿಕೆ ಇಲ್ಲದಂತಾಗಿದೆ. ಹೆಚ್ಚಿನ ಪತ್ರಿಕೆಗಳಿಗೆ ಸ್ವತಂತ್ರ ವೆಬ್‌ಸೈಟ್‌ ಇಲ್ಲ ಎಂಬ ಪ್ರಾಥಮಿಕ ಕಾರಣ ನೀಡಲಾಗಿದೆ. ಇದರಿಂದ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿದೆ. 

ಕಳಪೆ ಗುಣಮಟ್ಟ, ತಪ್ಪು ಮಾಹಿತಿ, ಮಾಹಿತಿಯ ಕೊರತೆ ಮತ್ತು ಸುಳ್ಳು ದಾಖಲೆಗಳಿರುವ ಲೇಖನಗಳಿವೆ ಎಂಬ ಆರೋಪಗಳ ಬಗ್ಗೆ ಈ ಲೇಖನಗಳ ಮೌಲ್ಯಮಾಪನ ಸ್ಥಾಯಿ ಸಮಿತಿ ತೀವ್ರವಾಗಿ ತಲೆಕೆಡಿಸಿಕೊಂಡಿದ್ದು ಮಾನ್ಯತೆ ರದ್ದತಿಗಾಗಿ ಮರುಮೌಲ್ಯಮಾಪನ ನಡೆಸಿತ್ತು.  ಇಂಡಿಯನ್‌ ಸೈಟೇಷನ್‌ ಇಂಡೆಕ್ಸ್‌ನ ಇನ್ನೂ 191 ಲೇಖನಗಳನ್ನು ಸದ್ಯವೇ ಮರುಮೌಲ್ಯಮಾಪನ ಮಾಡಲಿದ್ದು, ಅವುಗಳ ಪಟ್ಟಿಯನ್ನೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ವಿಜ್ಞಾನ ವಿಭಾಗದ ಭಾರಿ ಸಂಖ್ಯೆಯ ಜರ್ನಲ್‌ಗಳು ಮಾನ್ಯತೆ ಕಳೆದುಕೊಂಡಿವೆ. 

ಕನ್ನಡದ ಹೊಸತು, ಅಚಲ, ಸಂವಾದ, ಚಿಂತನ ಬಯಲು, ಲೋಕಜ್ಞಾನ, ಬಸವ ತತ್ವ, ಅರುಹು ಕುರುಹು ಸೇರಿದಂತೆ 11 ಜರ್ನಲ್‌ಗಳಿಗೆ ಯುಜಿಸಿ ಈ ಹಿಂದೆ ಮಾನ್ಯತೆ ನೀಡಿತ್ತು. ಇವುಗಳಲ್ಲಿ ಪ್ರಕಟವಾದ ಬರಹಗಳನ್ನು ಪರಿಗಣಿಸಿ ಪರೀಕ್ಷೆ, ಸಂದರ್ಶನ ಸಂದರ್ಭಗಳಲ್ಲಿ ಅಂಕಗಳನ್ನು ನೀಡಲಾಗುತ್ತಿತ್ತು. ಸಂಶೋಧನಾ ವಿದ್ಯಾರ್ಥಿಯ ಲೇಖನ ಪ್ರಕಟವಾದ ಪತ್ರಿಕೆಯ ಹೆಸರು ಮತ್ತು ಐಎಸ್‌ಎಸ್‌ಎನ್‌ (ಇಂಟರ್‌ನ್ಯಾಷನಲ್‌ ಸ್ಟಾಂಡರ್ಡ್‌ ಸೀರಿಯಲ್‌ ನಂಬರ್‌) ಸಂಖ್ಯೆ ಯುಜಿಸಿ ಪಟ್ಟಿಯಲ್ಲಿದೆಯೇ ಎಂಬುದನ್ನು ಖಾತರಿಪಡಿಸಿಕೊಂಡು ಅಂಕಗಳನ್ನು ನೀಡಲಾಗುತ್ತಿತ್ತು. ಆದರೆ ಈಗ ಯುಜಿಸಿ ಪಟ್ಟಿಯಲ್ಲಿ ಈ ಪತ್ರಿಕೆಗಳ ಹೆಸರು ಇಲ್ಲ ಎಂದು ಸಂಶೋಧನಾ ವಿದ್ಯಾರ್ಥಿಗಳು ವಿವರಿಸಿದ್ದಾರೆ. ಸಹಾಯಕ ಪ್ರಾಧ್ಯಾಪಕ ಹುದ್ದೆ, ಬಡ್ತಿ ಸಂದರ್ಭದಲ್ಲಿಯೂ ಈ ಸಂಶೋಧನಾ ಬರಹಗಳನ್ನು ಪರಿಗಣಿಸಿ 5 ಅಂಕಗಳನ್ನು ನೀಡಲಾಗುತ್ತಿತ್ತು. 

‘ಅಂತರರಾಷ್ಟ್ರೀಯ ಗುಣಮಟ್ಟವನ್ನು ಕಾಪಾಡುವ ಭರಾಟೆಯಲ್ಲಿ ಯುಜಿಸಿ, ಜರ್ನಲ್‌ಗಳನ್ನೇ ಪಟ್ಟಿಯಿಂದ ತೆಗೆದು ಹಾಕುವುದು ಸರಿಯಲ್ಲ. ವೆಬ್‌ಸೈಟ್‌ ಇದ್ದ ಮಾತ್ರಕ್ಕೆ ಗುಣಮಟ್ಟ ಚೆನ್ನಾಗಿರುತ್ತದೆ ಎಂದೇನೂ ಇಲ್ಲ. ಅಲ್ಲದೆ ಪ್ರಾದೇಶಿಕ ಭಾಷೆಗಳಿಗೆ ಪ್ರೋತ್ಸಾಹ ನೀಡುವ ಬಗ್ಗೆಯೂ ಆಯೋಗ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು’ ಎಂದು ‘ಚಿಂತನ ಬಯಲು’ ಪತ್ರಿಕೆಯ ಸಲಹಾ ಸಂಪಾದಕ ಡಾ.ಅಜಕ್ಕಳ ಗಿರೀಶ್‌ ಭಟ್‌ ಅಭಿಪ್ರಾಯಪಟ್ಟರು.

ಸಮಿತಿಯ ಅರ್ಹತೆಯೇ ಪ್ರಶ್ನಾರ್ಹ

ಅರುಹು ಕುರುಹು, ಹೊಸತು ಸೇರಿದಂತೆ ಕನ್ನಡದ ಜರ್ನಲ್‌ಗಳು ದೇಶದಲ್ಲಿಯೇ ಅತ್ಯುತ್ತಮವಾದ ಸಂಶೋಧನಾ ಬರಹಗಳನ್ನು ಪ್ರಕಟಿಸುವ ಪತ್ರಿಕೆಗಳು. ಇವುಗಳ ಮಾನ್ಯತೆ ರದ್ದು ಮಾಡುವ ಯುಜಿಸಿ ಸ್ಥಾಯಿ ಸಮಿತಿಯ ಬಗ್ಗೆಯೇ ಸಂಶಯ ಮೂಡುತ್ತದೆ. ಸಮಿತಿಯಲ್ಲಿ ಕನ್ನಡ ಪ್ರಾಜ್ಞರು ಇದ್ದಾರೆಯೇ ಎಂಬುದನ್ನು ಗಮನಿಸಬೇಕು. ಮುನ್ಸೂಚನೆ ನೀಡದೇ ಈ ರೀತಿ ಏಕಾಏಕಿ ಭಾಷೆಗಳ ಮೇಲೆ ಹೊಡೆತ ನೀಡುವುದು ಸರಿಯಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

* ಯುಜಿಸಿ ಇದ್ದಕ್ಕಿದ್ದಂತೆಯೇ ಕನ್ನಡ ಜರ್ನಲ್‌ಗಳನ್ನು ಪಟ್ಟಿಯಿಂದ ಕೈ ಬಿಟ್ಟಿರುವುದು ಸರಿಯಲ್ಲ. ವೆಬ್‌ಸೈಟ್‌ ರೂಪಿಸಲು ಸಮಯಾವಕಾಶ ನೀಡಬಹುದಿತ್ತು

-ಡಾ.ಧನಂಜಯ್‌ ಕುಂಬ್ಳೆ, ಮಂಗಳೂರು ವಿವಿ ಸಹಾಯಕ, ಪ್ರಾಧ್ಯಾಪಕ

Tags: 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !