‘ರಾಜಕಾರಣಕ್ಕಿಂತ ರಾಜ್ಯಧರ್ಮಕ್ಕೆ ಒತ್ತು ನೀಡಿದ್ದರು ವಾಜಪೇಯಿ’

7
ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ;

‘ರಾಜಕಾರಣಕ್ಕಿಂತ ರಾಜ್ಯಧರ್ಮಕ್ಕೆ ಒತ್ತು ನೀಡಿದ್ದರು ವಾಜಪೇಯಿ’

Published:
Updated:
Deccan Herald

ಬೆಳಗಾವಿ: ‘ಅಧಿಕಾರಕ್ಕಾಗಿ ಹಂಬಲಿಸುವ ರಾಜಕಾರಣವನ್ನು ಅಟಲ್‌ ಬಿಹಾರಿ ವಾಜಪೇಯಿ ಯಾವತ್ತೂ ಮಾಡಲಿಲ್ಲ. ರಾಜ್ಯಧರ್ಮ ಪಾಲಿಸುವ ರಾಜಕಾರಣವನ್ನು ಮಾಡಿದರು. ಹೊರತು, ಧರ್ಮ ಇಲ್ಲದಿರುವ ರಾಜಕೀಯಕ್ಕೆ ಯಾವತ್ತೂ ಕೈಹಾಕಲಿಲ್ಲ’ ಎಂದು ರೈತ ಮುಖಂಡ ಬಾಬಾಗೌಡ ಪಾಟೀಲ ಸ್ಮರಿಸಿದರು.

ಜಿಲ್ಲೆಯ ಚಿಕ್ಕಬಾಗೇವಾಡಿಯವರಾದ ಬಾಬಾಗೌಡ ಪಾಟೀಲ ರೈತ ಹೋರಾಟದೊಂದಿಗೆ ಗುರುತಿಸಿಕೊಂಡವರು. ವಾಜಪೇಯಿ ಅವರ ಪ್ರಭಾವದಿಂದಾಗಿ ಬಿಜೆಪಿ ಸೇರಿಕೊಂಡರು. 1998ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ವಾಜಪೇಯಿ ಅವರು ಇತರ ಪಕ್ಷಗಳನ್ನು ಒಗ್ಗೂಡಿಸಿ ರಚಿಸಿದ್ದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು.

ವಾಜಪೇಯಿ ಅವರ ಜೊತೆಗಿನ ಒಡನಾಟವನ್ನು ಬಾಬಾಗೌಡ ಪಾಟೀಲ ‘ಪ್ರಜಾವಾಣಿ’ಯ ಜೊತೆ ಹಂಚಿಕೊಂಡಿದ್ದಾರೆ;

‘ಒಂದು ಸಣ್ಣ ಹಳ್ಳಿಯಿಂದ ಬಂದಿದ್ದ ನನಗೆ ಸಚಿವ ಸ್ಥಾನ ನೀಡಿರುವುದು ಅವರ ದೂರದೃಷ್ಟಿಗೆ ಉದಾಹರಣೆಯಾಗಿದೆ. ವ್ಯಕ್ತಿಗಳ ಸಾಮರ್ಥ್ಯವನ್ನು ನೋಡಿ ಜವಾಬ್ದಾರಿ ಹಂಚಿಕೆ ಮಾಡುತ್ತಿದ್ದರು. ನಾನು ಹಳ್ಳಿಯಲ್ಲಿ ಬೆಳೆದವ, ಒಕ್ಕಲುತನ ಮಾಡಿದವ, ರೈತರ ಸಮಸ್ಯೆಗಳನ್ನು ಅರಿತುಕೊಂಡಿರುವುದನ್ನು ನೋಡಿ ನನ್ನ ಹೆಗಲ ಮೇಲೆ ಗ್ರಾಮೀಣಾಭಿವೃದ್ಧಿಯಂತಹ ದೊಡ್ಡ ಖಾತೆಯ ರಾಜ್ಯಸಚಿವ ಸ್ಥಾನವನ್ನು ನೀಡಿದ್ದರು’.

ಈ ಖಾತೆಯನ್ನು ನಿಭಾಯಿಸಲು ನಾನು ಸಮರ್ಥನೆ? ಎಂದು ಕೇಳಿದ್ದಕ್ಕೆ, ‘ನೀನೇ ಇದಕ್ಕೆ ಸೂಕ್ತ ವ್ಯಕ್ತಿ ಎಂದು ಬೆನ್ನು ತಟ್ಟಿ ಪ್ರೋತ್ಸಾಹ ಮಾಡಿದ್ದರು. ದೇಶದ ಉದ್ದಗಲಕ್ಕೂ ನನ್ನನ್ನು ಕರೆದುಕೊಂಡು ಸುತ್ತಿದರು. ಅವರಲ್ಲಿರುವ ಜ್ಞಾನ, ವಿಭಿನ್ನ ದೃಷ್ಟಿಕೋನ, ಆತ್ಮೀಯತೆ, ಹೃದಯ ವಿಶಾಲತೆಯ ಗುಣ ಕಂಡು ಬೆರಗಾಗಿದ್ದೆ. ಅವರು ನಂಬಿಕೊಂಡಿದ್ದ ಸಿದ್ಧಾಂತವನ್ನು ಬದುಕಿನ ಉದ್ದಕ್ಕೂ ಪಾಲಿಸಿಕೊಂಡು ಬಂದಿದ್ದರು. ಅವರು ಬದುಕಿದ ರೀತಿಯನ್ನು ಇಂದಿನ ರಾಜಕಾರಣಿಗಳಿಗೆ ಪಾಠ ಮಾಡಬೇಕು’.

‘ಮಾತುಗಳು ಸೌಮ್ಯವಾಗಿದ್ದರೂ ಅವರ ನಿರ್ಧಾರಗಳು ಅತ್ಯಂತ ದಿಟ್ಟತನದಿಂದ ಕೂಡಿರುತ್ತಿದ್ದವು. ಪೋಖ್ರಾನ್‌ನಲ್ಲಿ ನಡೆಸಿದ ಪರಮಾಣು ಪರೀಕ್ಷೆ, ಕಾರ್ಗಿಲ್‌ ಯುದ್ಧ ಇದಕ್ಕೆ ಉದಾಹರಣೆ. ರಕ್ಷಣಾ ವಲಯದಲ್ಲಿ ದೇಶ ಸ್ವಾವಲಂಬಿಯಾಗಿರಬೇಕು ಎಂದು ನಂಬಿದ್ದರು. ಅದರಂತೆ ರೈತರ ಬಗ್ಗೆಯೂ ಅಪಾರ ಕಾಳಜಿ ಇತ್ತು. ರೈತರು ಹಾಗೂ ಗ್ರಾಮಗಳ ಅಭಿವೃದ್ಧಿ ಕುರಿತು ನನ್ನ ಜೊತೆ ಗಂಟೆಗಟ್ಟಲೆ ಚರ್ಚಿಸುತ್ತಿದ್ದರು’.

‘ನಮ್ಮ ಈ ಚರ್ಚೆಗಳ ಫಲವಾಗಿಯೇ ಗ್ರಾಮ ಸಡಕ್‌ ಯೋಜನೆ ಅನುಷ್ಠಾನಕ್ಕೆ ಬಂದಿತು. ಸ್ವ ಸಹಾಯ ಸಂಘಗಳಿಗೆ ಶಕ್ತಿ ತುಂಬುವಂತಹ ಕೆಲಸಗಳಾದವು. ದೇಶದ ಉದ್ದಗಲಕ್ಕೆ ಸಂಪರ್ಕ ಕಲ್ಪಿಸುವ ಸುವರ್ಣ ಚತುಷ್ಪಥ ಹೆದ್ದಾರಿ ನಿರ್ಮಿಸಿದ್ದರು. ಅವರು ಘೋಷಣೆಗಳನ್ನು ಕೂಗುವ ನಾಯಕರಾಗಿರಲಿಲ್ಲ; ಸಂಕಲ್ಪ ಮಾಡುವ ಹಾಗೂ ಅವುಗಳನ್ನು ಜಾರಿಗೊಳಿಸುವ ನಾಯಕರಾಗಿದ್ದರು’.

‘13 ತಿಂಗಳ ಸರ್ಕಾರ ಪತನವಾಗುವ ಸಂದರ್ಭದಲ್ಲಿ ವಾಜಪೇಯಿ ಅವರು ಮನಸ್ಸು ಮಾಡಿದ್ದರೆ ಜಯಲಲಿತಾ ಅವರನ್ನು ಮನವೊಲಿಸಬಹುದಿತ್ತು. ಇದಕ್ಕಾಗಿ ಪರ್ಯಾಯ ಮಾರ್ಗಗಳನ್ನು ಸರಿಸಬಹುದಾಗಿತ್ತು. ಆದರೆ ಅವರು, ಧರ್ಮ ಇರದ ರಾಜಕಾರಣ ಮಾಡುವುದಿಲ್ಲ. ರಾಜ್ಯಧರ್ಮವನ್ನು ಪಾಲಿಸುತ್ತೇನೆ ಎಂದು ದೃಢ ಸಂಕಲ್ಪ ಮಾಡಿದರು. ಪ್ರಧಾನಿಯಂತಹ ಮಹತ್ತರ ಹುದ್ದೆಗೆ ರಾಜೀನಾಮೆ ನೀಡಿ, ಕೆಳಗಿಳಿದಿದ್ದರು’.

‘ಅವರೊಂದಿಗೆ ಕಳೆದ ಸಮಯ ಮರೆಯಲಾರದಂಥಹದ್ದು. ಅಂತಹ ನಾಯಕರು ಸಿಗುವುದು ದುರ್ಲಭ. ಇಂದಿನ ರಾಜಕಾರಣವು ಚಾಣಕ್ಯ ನೀತಿಯನ್ನು ಆಧರಿಸಿದ್ದು. ಮೋಸ, ವಂಚನೆ ಏನಾದರೂ ಸರಿ ಅಧಿಕಾರ ಹಿಡಿಯಬೇಕೆನ್ನುವ ನೀತಿಯನ್ನು ರಾಜಕಾರಣಗಳು ಅನುಸರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯಧರ್ಮಕ್ಕಾಗಿ ಅಧಿಕಾರ ತ್ಯಜಿಸಿದ ನಾಯಕರನ್ನು ಕಾಣಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !