ಬುಧವಾರ, ಸೆಪ್ಟೆಂಬರ್ 22, 2021
25 °C

ಆಹಾರ ನೀರಿಲ್ಲದೆ ಬದುಕುತ್ತಿರುವ ವಿಕ್ಟರ್‌ ಟ್ರುವಿಯಾನೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಕ್ಟರ್‌ ಟ್ರುವಿಯಾನೋ

ದಾವಣಗೆರೆ: 13 ವರ್ಷಗಳಿಂದ ಆಹಾರ, ನೀರು ಸೇವಿಸದೆ ಗಾಳಿ ಮಾತ್ರ ಸೇವಿಸಿ ಬದುಕುತ್ತಿರುವ ರಷ್ಯಾದ ಯೋಗಿ ವಿಕ್ಟರ್‌ ಟ್ರುವಿಯಾನೋ ಸೋಮವಾರ ದಾವಣಗೆರೆಯಲ್ಲಿ ಕೇಂದ್ರಬಿಂದುವಾಗಿ ಆಕರ್ಷಣೆಗೆ ಒಳಗಾದರು.

ಅಂತ‌ರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಪ್ರಯುಕ್ತ ಮಾದಕವಸ್ತು ವ್ಯಸನ ತಡೆಗಟ್ಟುವ ಕುರಿತು ದೊಡ್ಡಬಾತಿ ತಪೋವನದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಅವರು ಸಂವಾದ ನಡೆಸಿದರು.

‘ಪುಟ್ಟ ಮಕ್ಕಳನ್ನು ನೋಡಿ ಅವರು ಬಯಲಲ್ಲಿ ಆಡವಾಡುತ್ತಲೇ ಇರುತ್ತಾರೆ. ಊಟ ಬೇಕು ಎಂದು ಅವರಿಗೆ ಅನ್ನಿಸುವುದಿಲ್ಲ. ಹೆತ್ತವರೇ ಒತ್ತಾಯದಿಂದ ಕರೆದುಕೊಂಡು ಹೋಗಿ ಊಟ ಮಾಡಿಸುತ್ತಾರೆ. ನಾನು ಆ ಮಕ್ಕಳ ಹಾಗೆ. ನಂಗೆ ಊಟ ಬೇಡ’ ಎಂದು ಅವರು ಸಂವಾದದಲ್ಲಿ ತಿಳಿಸಿದರು.

‘ಒಮ್ಮೆ ಕಾಯಿಲೆಗಾಗಿ ಪ್ರಾಣಿಕ್‌ ಚಿಕಿತ್ಸೆ ಮಾಡಬೇಕಾಯಿತು. ಈ ಚಿಕಿತ್ಸೆಗೆ ಆಹಾರ ಸೇವಿಸದೆ ಪತ್ಯ ಮಾಡಬೇಕಿತ್ತು. ಅದರಲ್ಲಿ ಏಳು ದಿನ ನೀರು ಕೂಡಾ ಸೇವಿಸಲಿಲ್ಲ. ಮುಂದೆ ಅದೇ ಅಭ್ಯಾಸವಾಯಿತು. ಈಗ ನಿದ್ದೆಯೂ ಕಡಿಮೆಯಾಗಿದೆ. ಶೌಚವೂ ಇಲ್ಲ’ ಎಂದು ವಿವರಣೆ ನೀಡಿದರು.

‘ಆಹಾರ, ನೀರು ಇಲ್ಲದೇ ಬದುಕಲು ನಾನು ಕಠಿಣ ಪ್ರಯತ್ನ ಮಾಡಿಲ್ಲ. ಅದು ನನ್ನ ಜೀವನದಲ್ಲಿ ಸಂಭವಿಸಿದೆ. ಶಕ್ತಿ ಎನ್ನುವುದು ಆಹಾರದಲ್ಲಿ ಮಾತ್ರ ಇರುವುದಲ್ಲ. ಗಾಳಿಯಲ್ಲೂ ಇರುತ್ತದೆ. ಅದನ್ನು ಸೇವಿಸಿ ಬದುಕುತ್ತಿದ್ದೇನೆ. ಆರೋಗ್ಯವಾಗಿದ್ದೇನೆ. ಸಂತೋಷವಾಗಿದ್ದೇನೆ. ಇದಕ್ಕಿಂತ ಹೆಚ್ಚು ಹೇಳಲು ನಾನು ವೈದ್ಯನೂ ಅಲ್ಲ, ವಿಜ್ಞಾನಿಯೂ ಅಲ್ಲ’ ಎಂದು ಹೇಳಿದರು.

‘ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶ ಈ ಪಂಚಭೂತಗಳು ಸೇರಿ ನಾವು ಬದುಕುತ್ತಿದ್ದೇವೆ. ಈ ಐದಕ್ಕೂ ಅದರದ್ದೇ ಆದ ಶಕ್ತಿ ಇದೆ. ಅದರಲ್ಲಿ ಗಾಳಿ ಶಕ್ತಿಯನ್ನು ಹೀರಿ ಯೋಗಿ ವಿಕ್ಟರ್‌ ಬದುಕುತ್ತಿದ್ದಾರೆ’ ಎಂದು ವಚನಾನಂದ ಸ್ವಾಮೀಜಿ ವಿವರಣೆ ನೀಡಿದರು.

‘ನಾವು ಉಪವಾಸ ಇರುತ್ತೇವೆ ಎಂದರೆ ಅವತ್ತು ಉಪವಾಸ ಇಲ್ಲದ ದಿನಕ್ಕಿಂತ ಹೆಚ್ಚು ತಿನ್ನುತ್ತಿದ್ದೇವೆ ಎಂದರ್ಥ. ಉಪವಾಸ ಇಲ್ಲದವನು ತಿಂದು ತನ್ನ ಕಾರ್ಯದಲ್ಲಿ ಮಗ್ನನಾಗುತ್ತಾನೆ. ಆದರೆ ಉಪವಾಸ ಇಲ್ಲದವನ ಮನಸ್ಸು ಊಟ, ತಿಂಡಿ, ಜ್ಯೂಸ್‌ಗಳ ಹಿಂದೆಯೇ ತಿರುಗುತ್ತಿರುತ್ತದೆ. ನಾನು ಉಪವಾಸ ಇದ್ದೀನಿ ಎಂದು ಎಲ್ಲರಿಗೂ ಹೇಳಿಕೊಂಡು ಬರುತ್ತಿರುತ್ತಾನೆ. ಅಂದರೆ ಅವತ್ತು ಆಹಾರ ಹೆಚ್ಚು ಸೇವನೆ ಮಾಡಿದ್ದೇವೆ ಎಂದರ್ಥ. ಅದರಿಂದಲೂ ದೇಹಕ್ಕೆ ಶಕ್ತಿ ದೊರೆಯುತ್ತದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು