ವಿಟ್ಲಪಿಂಡಿ ಉತ್ಸವದಲ್ಲಿ ಭಕ್ತಸಾಗರ

ಉಡುಪಿ: ಕೃಷ್ಣನೂರಿನಲ್ಲಿ ಸೋಮವಾರ ವಿಟ್ಲಪಿಂಡಿ ಉತ್ಸವ ಅದ್ದೂರಿಯಾಗಿ ನೆರವೇರಿತು. ಸಾವಿರಾರು ಭಕ್ತರು ಚಿನ್ನದ ರಥೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಮಧ್ಯಾಹ್ನ ಶ್ರೀಕೃಷ್ಣನ ಮೃಣ್ಮಯ ಉತ್ಸವ ಮೂರ್ತಿಯನ್ನು ಚಿನ್ನದ ರಥದಲ್ಲಿ ಪ್ರತಿಷ್ಠಾಪಿಸಿದರು. ಬಳಿಕ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥಬೀದಿಯ ಒಂದು ಸುತ್ತು ಚಿನ್ನದ ರಥವನ್ನು ಎಳೆದ ಭಕ್ತರು ಶ್ರೀಕೃಷ್ಣನಿಗೆ ಜಯಘೋಷ ಕೂಗಿದರು. ಈ ಅಪೂರ್ವ ದೃಶ್ಯವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಇದೇ ವೇಳೆ ನವರತ್ನ ಹರಳುಗಳಿಂದ ಅಲಂಕೃತವಾಗಿದ್ದ ರಥದಲ್ಲಿ ಅನಂತೇಶ್ವರ ಹಾಗೂ ಚಂದ್ರೇಶ್ವರ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.
ಶ್ರೀಕೃಷ್ಣ ಮಂಟಪದ ಮಂಭಾಗ ಪಲಿಮಾರು ವಿದ್ಯಾಧೀಶ ತೀರ್ಥರು, ಅದಮಾರು ಮಠದ ಈಶಪ್ರಿಯ ಸ್ವಾಮೀಜಿ ಹಾಗೂ ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ ಭಕ್ತರೆಡೆಗೆ ಚಕ್ಕುಲಿ, ಉಂಡೆ ಪ್ರಸಾದ ತೂರಿದರು. ಈ ವೇಳೆ ಭಕ್ತರು ಪ್ರಸಾದಕ್ಕಾಗಿ ಮುಗಿಬಿದ್ದರು.
ಈ ಬಾರಿ ರಥಬೀದಿಯಲ್ಲಿ ಹಾಕಲಾಗಿದ್ದ ವೇದಿಕೆಯಲ್ಲಿ ಹುಲಿ ವೇಷಧಾರಿಗಳ ಕುಣಿತ ಸೊಗಸಾಗಿತ್ತು. ವೇಷಧಾರಿಗಳು ಭಕ್ತರನ್ನು ರಂಜಿಸಿದರು. ಮರಗೋಲು ವೇಷಧಾರಿಗಳು, ಬ್ಯಾಂಡ್ನ ಸದ್ದು ಉತ್ಸವಕ್ಕೆ ಮತ್ತಷ್ಟು ಕಳೆತಂದಿತ್ತು.
ರಥ ಸಾಗಿ ಬರುವ ಹಾದಿಯಲ್ಲಿ ಕಮಾನುಗಳ ಮೇಲೆ ಕಟ್ಟಿದ್ದ ಮೊಸರು ಕುಡಿಕೆಗಳನ್ನು ಗೊಲ್ಲರು ಒಡೆದಾಗ ಭಕ್ತರ ಜೈಕಾರ ಮುಗಿಲುಮುಟ್ಟಿತು. ರಥೋತ್ಸವದ ನಂತರ ಮಧ್ವ ಸರೋವರದಲ್ಲಿ ಕೃಷ್ಣನ ಮೃಣ್ಮಯ ಮೂರ್ತಿಯನ್ನು ವಿಸರ್ಜಿಸಲಾಯಿತು. ಸಾವಿರಾರು ಭಕ್ತರು ಮಠದಲ್ಲಿ ಪ್ರಸಾದ ಸ್ವೀಕರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.