ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಲು ವಾದನ, ಗಾಯನ ಚತುರೆ

Last Updated 6 ಮಾರ್ಚ್ 2019, 12:08 IST
ಅಕ್ಷರ ಗಾತ್ರ

ಊರ ಸೇರಬಹುದೇ ನೀನು ದಾರಿ ಮುಗಿಯದೇ..

ಹೊನ್ನು ದೊರೆಯಬಹುದೇ ಹೇಳು ಮಣ್ಣು ಬಗೆಯದೇ...

ಹಿರಿಯ ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರ ಕವನದ ಈ ಸಾಲುಗಳು ಹಿಂದೂಸ್ತಾನಿ ಸಂಗೀತದ ‘ತೋಡಿ’ ರಾಗದಲ್ಲಿ ಮಧುರಾತಿಮಧುರವಾಗಿ ನಿತ್ಯವೂ ಮನೆ ಮನೆಗಳಲ್ಲಿ ಅನುರಣಿಸುತ್ತಿದೆ. ಗಾಯಕ ವಿಜಯಪ್ರಕಾಶ್‌ ಇಂಪಾದ ದನಿಯ ಜೊತೆಗೆ ಅಲೆಅಲೆಯಾಗಿ ತೇಲಿ ಬರುವ ಮತ್ತೊಂದು ಹೆಣ್ಣು ದನಿ ಕೊಳಲುವಾದಕಿಯೂ ಆಗಿರುವ ಗಾಯಕಿ ವಾರಿಜಾಶ್ರೀ ವೇಣುಗೋಪಾಲ್‌ ಅವರದು. ಕಲರ್ಸ್‌ ಸೂಪರ್‌ ಚಾನೆಲ್‌ನಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ ‘ಮಗಳು ಜಾನಕಿ’ಯ ಟೈಟಲ್‌ ಸಾಂಗ್‌ ಇದು.

ಕಳೆದ ವರ್ಷ (2018) ರಲ್ಲಿ ಬಿಡುಗಡೆಯಾದ ಶಿವರಾಜ್‌ಕುಮಾರ್‌ ಅಭಿನಯದ ‘ಟಗರು’ ಸಿನಿಮಾದಲ್ಲಿರುವ ರಾಗಾಧಾರಿತ ಗೀತೆ ‘ಯಾರೇ ನೀನೆ ಚತುರೆ’ ಹಾಡು ಕೂಡ ಹಾಡಿದ್ದು ವಾರಿಜಾಶ್ರೀ ಅವರೇ.

ವಾರಿಜಾಶ್ರೀ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಕೊಳಲು ವಾದನ ಎರಡರಲ್ಲೂ ವಿದ್ವತ್‌ ಸಾಧಿಸುತ್ತಿರುವ ಕಲಾವಿದೆ. ಶಾಸ್ತ್ರೀಯ ಗಾಯನವನ್ನು ಎಚ್‌. ಗೀತಾ ಹಾಗೂ ವಿದುಷಿ ವಸಂತ ಶ್ರೀನಿವಾಸನ್‌, ಡಿ.ಎಸ್‌. ಶ್ರೀವತ್ಸ ಅವರಲ್ಲಿ ಕಲಿತರು. ಹೆಚ್ಚಿನ ಅಭ್ಯಾಸವನ್ನು ವಿದ್ವಾನ್‌ ಸೇಲಂ ಸುಂದರೇಶನ್‌ ಅವರಲ್ಲಿ ಮಾಡುತ್ತಿದ್ದಾರೆ.

ತಂದೆ ಎಚ್‌.ಎಸ್‌. ವೇಣುಗೋಪಾಲ್‌ ಕೊಳಲು ವಾದಕರು ಹಾಗೂ ತಾಯಿ ಟಿ.ಆರ್‌. ರಮಾ ಸಂಗೀತ ಕಲಾವಿದೆ. ಕೊಳಲು ವಾದನವನ್ನು ತಂದೆಯ ಬಳಿಯೇ ಅಭ್ಯಾಸ ಮಾಡಿದರು. ವೇಣುಗೋಪಾಲ್‌ ಅವರು ಬೆಂಗಳೂರಿನಲ್ಲಿ ಸಂಗೀತ ಶಾಲೆ ನಡೆಸುತ್ತಿದ್ದು, ನೂರಾರು ಮಕ್ಕಳಿಗೆ ಕೊಳಲು ವಾದನವನ್ನು ಕಲಿಸುತ್ತಿದ್ದಾರೆ.

‘ಶಾಸ್ತ್ರೀಯ ಸಂಗೀತವನ್ನು ಆಧಾರವಾಗಿಟ್ಟುಕೊಂಡು ಸಂಗೀತದಲ್ಲಿ ಹೊಸ ಸಾಧ್ಯತೆಗಳನ್ನು ಹುಡುಕುವ ತುಡಿತ ಇಟ್ಟುಕೊಂಡಿದ್ದೇನೆ. ಜಾಸ್‌ ಮುಂತಾದ ವಿಶ್ವ ಸಂಗೀತದ ಜೊತೆಗೆ ಭಾರತೀಯ ಸಂಗೀತವನ್ನು ಎರಡು ಅಥವಾ ಮೂರು ಶೈಲಿಗಳ ಜತೆಗೆ ಮಿಕ್ಸ್‌ ಮಾಡಿ ಪ್ರಯೋಗಗಳನ್ನು ಹೇಗೆ ಮಾಡಬಹುದು ಎಂಬ ಚಿಂತನೆ ನಡೆಸಿದ್ದಲ್ಲದೆ, ವಿಶ್ವಮಟ್ಟದ ಸಂಗೀತಗಾರರ ಜತೆಗೆ ಹಾಡುವ ಮೂಲಕ ವಿಶಿಷ್ಟ ಪ್ರಯೋಗವನ್ನೂ ಮಾಡಿದ್ದೇನೆ. ಕೊಳಲು ವಾದನವನ್ನು ಬರೀ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಮೀಸಲಿಡದೆ, ಅದರಲ್ಲೂ ಪಾಶ್ಚಾತ್ಯ ಸಂಗೀತದ ಘಮಲನ್ನು ಅಳವಡಿಸಿ ಸಾಧ್ಯವಾದಷ್ಟು ಹೆಚ್ಚು ಮಂದಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎನ್ನುತ್ತಾರೆ ವಾರಿಜಾಶ್ರೀ.

ಹುಟ್ಟಿದ್ದು ಮಾರ್ಚ್‌ 6, 1991ರಲ್ಲಿ. ಅತ್ಯಂತ ಎಳೆಯ ವಯಸ್ಸಿನಲ್ಲೇ ಸಂಗೀತ ಜ್ಞಾನವನ್ನು ಪಡೆದಿರುವ ಈಕೆಗೆ ಸಂಗೀತಕಲೆ ಜನ್ಮಜಾತವಾಗಿಯೇ ಒಲಿದಿದೆ. ಒಂದೂವರೆ ವರ್ಷದ ಪುಟಾಣಿ ಇದ್ದಾಗಲೇ 40 ರಾಗಗಳನ್ನು ಗುರುತಿಸುತ್ತಿದ್ದ ವಾರಿಜಾ, ನಾಲ್ಕನೇ ವಯಸ್ಸಿಗೆ ಸುಮಾರು 200 ರಾಗಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದಳು. ಏಳನೇ ವಯಸ್ಸಿಗೇ ಮೊದಲ ಪೂರ್ಣಪ್ರಮಾಣದ ಕಛೇರಿಯನ್ನು ಬೆಂಗಳೂರು ಗಾಯನ ಸಮಾಜದಲ್ಲಿ ನೀಡಿ ಕೇಳುಗರ ಮೆಚ್ಚುಗೆಗೆ ಪಾತ್ರಳಾಗಿದ್ದಳು. ಬೆಂಗಳೂರು ವಿವಿಯಲ್ಲಿ ಮಲ್ಟಿಮೀಡಿಯ ಪದವಿ ಅಧ್ಯಯನದೊಂದಿಗೆ, ಮೈಸೂರು ವಿವಿಯಿಂದ ‘ಬಿ’ ಮ್ಯೂಸಿಕ್‌ ಪದವಿಯನ್ನೂ ಪಡೆದಿದ್ದಾರೆ.

ವಾರಿಜಾಶ್ರೀ ಈಗಾಗಲೇ ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಮಲೇಷ್ಯಾ, ಇಟಲಿ, ಕುವೈತ್‌ಗಳಲ್ಲದೆ ಮುಂಬಯಿ, ಚೆನ್ನೈ, ಹೈದರಾಬಾದ್‌, ಕೊಚ್ಚಿನ್‌, ತಿರುಪತಿಗಳಲ್ಲದೆ ರಾಜ್ಯದ ನಾನಾ ಭಾಗಗಳಲ್ಲಿ ಕೊಳಲು ಹಾಗೂ ಗಾಯನ ಕಛೇರಿ ನೀಡಿದ ಅನುಭವ ಪಡೆದಿದ್ದಾರೆ.

ದೇಸಿ ಹಾಗೂ ಪಾಶ್ಚಾತ್ಯ ಸಂಗೀತದ ಮಿಶ್ರ ಸಂಯೋಜನೆಗಳಲ್ಲೂ ಸಂಗೀತ ನೀಡುವ ವಾರಿಜಾಶ್ರೀ, ಕೊರಿಯಾದ ನೋರೆಮ್‌ ಮಾಚಿ ಎಂಬ ಯುವ ಸಂಗೀತಗಾರರ ತಂಡದೊಂದಿಗೆ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ಜಾಸ್‌ ಉತ್ಸವದಲ್ಲಿ ಹಾಡಿದ್ದಾರೆ. ಟೀವಿ ಚಾನೆಲ್‌ಗಳಲ್ಲೂ ಅವರ ಸಂಗೀತ ಪ್ರಸಾರವಾಗಿವೆ. ಖಾಸಗಿ ಚಾನೆಲ್‌ ಒಂದರಲ್ಲಿ ಪ್ರಸಾರವಾದ ‘ಹೆಳವನಕಟ್ಟಿ ಗಿರಿಯಮ್ಮ’ ಧಾರಾವಾಹಿಯಲ್ಲಿ ಪ್ರವೀಣ್‌ ಡಿ.ರಾವ್‌ ನಿರ್ದೇಶನದಲ್ಲಿ ಸುಮಾರು 300 ದಾಸರಪದಗಳನ್ನು ಹಾಡಿದ್ದು ಕೂಡ ಜನರಿಂದ ಅಪಾರ ಮೆಚ್ಚುಗೆ ಗಳಿಸಿದೆ.

‘ಅರ್ಪಣ ’ ಮತ್ತು ‘ಉಪಾಸನಾ’ ವಾರಿಜಾಶ್ರೀ ಅವರ ಕೊಳಲು ವಾದನದ ಸೀಡಿಗಳು. ‘ಮೇಳ ರಾಗ ಮಾಲಿಕ’ ಮತ್ತು ‘ಬಿದಿರು’ ಎಂಬ ಎರಡು ವಿಭಿನ್ನ ಆಲ್ಬಂಗಳನ್ನೂ ಇವರು ಹೊರತಂದಿದ್ದಾರೆ. ‘ಕಾಯೊ ಎನ್ನ ಗೋಪಾಲ’ ಎಂಬ ಹೊಸ ಆಲ್ಬಂ ಸಂಗೀತವಲಯದಲ್ಲಿ ಜನಪ್ರಿಯತೆ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT