ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ಕಡಿಯಲ್ಲಿ ಬಂದು ವೋಟು ಹಾಕುತ್ತಿದ್ದರು!

ಚಿಕ್ಕೋಡಿ: 1967ರಲ್ಲಿದ್ದ ಚುನಾವಣಾ ಪರಿಸ್ಥಿತಿ ನೆನೆದ ಡಿ.ಟಿ. ಪಾಟೀಲ
Last Updated 5 ಏಪ್ರಿಲ್ 2019, 9:46 IST
ಅಕ್ಷರ ಗಾತ್ರ

ಬೆಳಗಾವಿ: ‘ಆಗ ಜನರು ತಾವಾಗಿಯೇ ಮುಂದೆ ಬಂದು ಮತ ಹಾಕುತ್ತಿದ್ದರು. ನಮ್ಮಲ್ಲಿ ತೋಟದ ವಸತಿಗಳಲ್ಲಿ ಇರುತ್ತಿದ್ದವರು ಚಕ್ಕಡಿಗಳಲ್ಲಿ ಮತಗಟ್ಟೆಗಳ ಬಳಿಗೆ ಬಂದು ಮತ ಚಲಾಯಿಸಿ ಹೋಗುತ್ತಿದ್ದರು. ಈಗಿನಷ್ಟು ಅಕ್ರಮಗಳೂ ಇರುತ್ತಿರಲಿಲ್ಲ; ನಿಗಾ ವಹಿಸಬೇಕಾಗಿಯೂ ಇರಲಿಲ್ಲ’.

– ಹೀಗೆ ನೆನೆದವರು ಹಿರಿಯ ಸಹಕಾರಿ ಧುರೀಣ ಡಿ.ಟಿ. ಪಾಟೀಲ.

ತಾವು 1967ರಲ್ಲಿ ಮೊದಲ ಬಾರಿಗೆ ಮತ ಹಾಕಿದ್ದಾಗ ಇದ್ದ ಪರಿಸ್ಥಿತಿಯನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು. ಅಂದಿಗೂ– ಇಂದಿಗೂ ಇರುವ ವ್ಯತ್ಯಾಸವನ್ನು ತಮ್ಮದೇ ಮಾತುಗಳಲ್ಲಿ ಕಟ್ಟಿಕೊಟ್ಟರು. ‘ಭೂಮಿ–ಆಕಾಶಕ್ಕೂ ಇರುವ ಅಂತರದಷ್ಟು ವ್ಯತ್ಯಾಸವಿದೆ’ ಎಂದು ಅಚ್ಚರಿಯಿಂದ ಹೇಳಿದರು.

‘ನಾನು ಕರಗಾಂವದಲ್ಲಿ ಮೊದಲ ಮತ ಚಲಾಯಿಸಿದ್ದೆ. ಆಗ, ಚಿಕ್ಕೋಡಿ ಮೀಸಲು ಕ್ಷೇತ್ರವಾಗಿತ್ತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿ. ಶಂಕರಾನಂದ ಗೆದ್ದಿದ್ದರು. ಬಹಳ ಮಂದಿ ಸ್ಪರ್ಧಿಸುತ್ತಲೂ ಇರಲಿಲ್ಲ. ಪ‍್ರಚಾರದ ವೇಳೆ ಜನರಿಗೆ ಚುರುಮುರಿ, ಮಿರ್ಚಿ, ಚಹಾ ಕೊಡಿಸಿದರೆ ಅದೇ ಸಾಕಾಗುತ್ತಿತ್ತು. ಜನರು ಬೇರೆನನ್ನು ಅಪೇಕ್ಷಿಸುತ್ತಿರಲೂ ಇರಲಿಲ್ಲ. ಚರಂಡಿ, ರಸ್ತೆ ಮಾಡಿಸಿ ಎಂಬಿತ್ಯಾದಿ ಬೇಡಿಕೆಗಳ ಪಟ್ಟಿಯನ್ನೂ ಇಡುತ್ತಿರಲಿಲ್ಲ’.

‘ಆಸೆ–ಆಮಿಷಗಳಿಗೆ ಒಳಗಾಗದೇ ಮತವನ್ನು ನಿಜವಾಗಿಯೂ ‘ದಾನ’ ಮಾಡುತ್ತಿದ್ದರು. ಇದರಿಂದಾಗಿ, ಅಭ್ಯರ್ಥಿಗಳು ಬಹಳ ಹಣ ಖರ್ಚು ಮಾಡಬೇಕಾದ ಪ್ರಮೇಯವೇ ಇರುತ್ತಿರಲಿಲ್ಲ’ ಎಂದು ವಿಶ್ಲೇಷಿಸಿದರು.

‘ಪ್ರಚಾರದಲ್ಲೂ ಇಂದಿನಷ್ಟು ಅಬ್ಬರ ಇರುತ್ತಿರಲಿಲ್ಲ. ಅಭ್ಯರ್ಥಿಯು ಒಂದೂರಿಗೆ ಒಮ್ಮೆ ಬಂದರೆ ಅದೇ ದೊಡ್ಡದೆನಿಸುತ್ತಿತ್ತು. ಅವರ ಪರವಾಗಿ ಕಾರ್ಯಕರ್ತರು, ಮುಖಂಡರು ಓಡಾಡುತ್ತಿದ್ದರು. ಇಂದಿನಂತೆ ರಾಷ್ಟ್ರಮಟ್ಟದ ನಾಯಕರನ್ನು ಕರೆಸಿ ಭಾಷಣ ಮಾಡಿಸುವುದು, ರೋಡ್ ಶೋ ನಡೆಸುವುದು ಕೂಡ ಇರುತ್ತಿರಲಿಲ್ಲ. ಕಾರುಗಳ ಸಾಲು ಕಂಡು ಬರುತ್ತಿರಲಿಲ್ಲ. ಅಭ್ಯರ್ಥಿಗಳಷ್ಟೇ ಕಾರಲ್ಲಿ ಬರುತ್ತಿದ್ದರು. ಒಂದೂರಲ್ಲಿ ನಾಲ್ಕೈದು ಮುಖಂಡರನ್ನು ಭೇಟಿಯಾಗಿ; ಮನವಿ ಮಾಡಿ ಹೋದರೆ ಸಾಕಾಗುತ್ತಿತ್ತು. ಈಗಿನಂತೆ, ‘ನನ್ನನ್ನು ಮತ ಕೇಳಲೇ ಇಲ್ಲ’ ಎನ್ನುವವರು ಇರುತ್ತಿರಲಿಲ್ಲ. ಈಗ ಮನೆಗೊಬ್ಬರು ನಾಯಕರಾಗಿದ್ದಾರೆ. ಅಭ್ಯರ್ಥಿಗಳೆಲ್ಲರೂ ನನ್ನನ್ನು ಭೇಟಿಯಾಗಬೇಕು ಎಂದು ಬಯಸುತ್ತಾರೆ’ ಎಂದು ತಿಳಿಸಿದರು.

‘ಅಭ್ಯರ್ಥಿ, ಪಕ್ಷ ಹಾಗೂ ಚಿಹ್ನೆಯ ಕುರಿತು ಗೋಡೆಗಳ ಮೇಲೆ ಬರೆಸುತ್ತಿದ್ದ ಕಾಲವನ್ನೂ ನೋಡಿದ್ದೇವೆ. ಕೆಲವು ಕಡೆಗಳಲ್ಲಿ ಲೌಡ್‌ಸ್ಪೀಕರ್ ಹಾಕಿ ಭಾಷಣ ಮಾಡುತ್ತಿದ್ದರು. ನಾನು ಮೊದಲು ಬ್ಯಾಲೆಟ್‌ ಪೇಪರ್‌ನಲ್ಲಿ ಮತ ಚಲಾಯಿಸಿದ್ದೆ. ನಂತರ ವಿದ್ಯುನ್ಮಾನ ಮತಯಂತ್ರ ಬಂದಿತು. ಕ್ರಮೇಣ, ರೊಕ್ಕ ಕೊಟ್ಟರೂ ಮತಗಟ್ಟೆಗಳಿಗೆ ಬಾರದಂತಹ ಮನಸ್ಥಿತಿ ಜನರಲ್ಲಿ ಬಂದಿದೆ’ ಎಂದು ಹೋಲಿಸಿದರು.

‘ಶಂಕರಾನಂದ ಅವರು ಒಮ್ಮೆ ಗೆದ್ದು ಹೋದರೆ, ಮುಂದಿನ ಐದು ವರ್ಷಕ್ಕೆ ಮತ ಕೇಳಲಷ್ಟೇ ಬರುತ್ತಿದ್ದರು! ಜನರು ಪ್ರಶ್ನಿಸುತ್ತಲೂ ಇರಲಿಲ್ಲ. ಹೀಗಾಗಿ, ಅವರು ಸತತ 7 ಬಾರಿ ಗೆದ್ದರು. ಇತ್ತೀಚಿನ ಚುನಾವಣೆಗಳಲ್ಲಿ ವ್ಯಕ್ತಿ, ಹಣ, ಪಕ್ಷ, ಜಾತಿ ಎಲ್ಲವನ್ನೂ ನೋಡಲಾಗುತ್ತಿದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT