ಹಳ್ಳಿಗಳಿಗೆ ನಡೆಯಿರಿ; ಕುಮಾರಸ್ವಾಮಿ ತಾಕೀತು

7
ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒಗಳ ಸಭೆ: ಹಲವು ಸಚಿವರು ಹಾಜರಿ

ಹಳ್ಳಿಗಳಿಗೆ ನಡೆಯಿರಿ; ಕುಮಾರಸ್ವಾಮಿ ತಾಕೀತು

Published:
Updated:

ಬೆಂಗಳೂರು: ‘ತಿಂಗಳಾನುಗಟ್ಟಲೆ ಕಡತಗಳನ್ನು ಗುಡ್ಡೆ ಹಾಕಿಕೊಂಡು ಕೂರುವ ಚಾಳಿ ಬಿಡಿ. ತಳಮಟ್ಟದ ಸಮಸ್ಯೆ ಅರಿಯಲು ತಾಲ್ಲೂಕು ಕೇಂದ್ರ ಹಾಗೂ ಹಳ್ಳಿಗಳಿಗೆ ಹೊರಡಿ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆಗೆ ಸೋಮವಾರ ಇಡೀ ದಿನ ಸಭೆ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮಟ್ಟಿಸುವ ಯತ್ನ ಮಾಡಿದರು.

‘ರಾಜ್ಯದಲ್ಲಿ ಬೆಳೆ ಸಾಲ ಮನ್ನಾ ಮಾಡಿದ ಬಳಿಕವೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಖಾಸಗಿ ಸಾಲಗಾರರ ಕಾಟದಿಂದ ರೈತರು ಸಾಯುತ್ತಿದ್ದಾರಾ, ಸರ್ಕಾರ ಪರಿಹಾರ ಕೊಡುತ್ತದೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರಾ ಅಥವಾ ಬೇರೆ ಸಮಸ್ಯೆಗಳು ಇವೆಯಾ ಎಂಬ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ರೈತರ ಕುಟುಂಬಕ್ಕೆ ಪರಿಹಾರ ನೀಡಲು ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ವಿಳಂಬವಾಗುತ್ತಿದ್ದಲ್ಲಿ ಕೃಷಿ ಇಲಾಖೆಯ ಕಾರ್ಯದರ್ಶಿಗಳ ಮುಖಾಂತರ ಶೀಘ್ರವೇ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಬೇಕು. ರೈತರ ಆತ್ಮಹತ್ಯೆ ಕುರಿತು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ತೀರ್ಮಾನ ಕೈಗೊಂಡು ಪರಿಹಾರ ವಿತರಿಸಬೇಕು’ ಎಂದರು.

‘ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ 67 ಲಕ್ಷಕ್ಕೂ ಹೆಚ್ಚು ಜನರು ಪಿಂಚಣಿ ಪಡೆಯುತ್ತಿದ್ದು, ಈ ಎಲ್ಲ ಪಿಂಚಣಿ ಯೋಜನೆಗಳಡಿ ನೇರವಾಗಿ ಫಲಾನುಭವಿಗಳ ಖಾತೆಗೆ ಪಿಂಚಣಿ ಜಮೆ ಮಾಡಲು ಇರುವ ತಾಂತ್ರಿಕ ಅಡಚಣೆಗಳನ್ನು ಕೂಡಲೇ ನಿವಾರಿಸಿ. ಆಧಾರ್ ಲಿಂಕ್ ಮಾಡಿ, 3 ತಿಂಗಳೊಳಗೆ ಸಮಸ್ಯೆ ಬಗೆಹರಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಪ್ರತಿ ವಾರ ಪ್ರಗತಿ ಪರಿಶೀಲನೆ ನಡೆಸಬೇಕು’ ಎಂದು ನಿರ್ದೇಶನ ನೀಡಿದರು.

ಸಚಿವರಿಗೂ ತರಾಟೆ

ಸಭೆಯಲ್ಲಿ ಆಗಾಗ ಇಲಾಖೆ ಪರ ವಿಚಾರ ಮಂಡಿಸುತ್ತಿದ್ದ ಸಚಿವರಾದ ಕೃಷ್ಣ ಬೈರೇಗೌಡ, ಎಚ್‌.ಡಿ.ರೇವಣ್ಣ ಹಾಗೂ ಜಿ.ಟಿ.ದೇವೇಗೌಡ ಅವರನ್ನೂ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

‘ಆಡಳಿತ ಯಂತ್ರಕ್ಕೆ ಇನ್ನಷ್ಟು ವೇಗ ನೀಡುವ ಉದ್ದೇಶದಿಂದ ಇಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕರೆಸಿದ್ದೇವೆ. ಅವರ ಬದಲು ನೀವೇ ಮಾತನಾಡಿದರೆ ಹೇಗೆ. ಅವರು ಮಾತನಾಡಲಿ ಬಿಡಿ’ ಎಂದರು.

ರಾಯಚೂರು ಡಿ.ಸಿ.ಗೆ ನೀರಿಳಿಸಿದ ದೇಶಪಾಂಡೆ

ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿ ಮಾಡಿಲ್ಲ ಎಂಬ ಕಾರಣಕ್ಕೆ ರಾಯಚೂರು ಜಿಲ್ಲಾಧಿಕಾರಿಯನ್ನು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತರಾಟೆಗೆ ತೆಗೆದುಕೊಂಡರು.

‘ಆಗಸ್ಟ್‌ 8ರಂದು ಜಿಲ್ಲೆಗೆ ಭೇಟಿ ನೀಡುತ್ತೇನೆ. ಅಷ್ಟರೊಳಗೆ ಈ ಸಮಸ್ಯೆ ಬಗೆಹರಿಸಬೇಕು’ ಎಂದು ತಾಕೀತು ಮಾಡಿದರು.

ಬರಹ ಇಷ್ಟವಾಯಿತೆ?

 • 22

  Happy
 • 2

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !