ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೀಗರು ಬರ್ತಾರಂದ್ರ ನೀರಿನ ತ್ರಾಸ್ ಹೆಚ್ಚಾಗುತ್ರೀ’

ನೀರಿನ ಅಭಾವದಿಂದ ಬಯಲು ಶೌಚಕ್ಕೆ ಮೊರೆ
Last Updated 22 ಮೇ 2019, 19:49 IST
ಅಕ್ಷರ ಗಾತ್ರ

ವಿಜಯಪುರ: ಕೃಷ್ಣೆ, ಭೀಮೆ, ಡೋಣಿ ನದಿಗಳು ಮಳೆಗಾಲದಲ್ಲಿ ಮೈದುಂಬಿ ಹರಿದರೂ; ಬೇಸಿಗೆಯಲ್ಲಿ ನೀರಿನ ತ್ರಾಸು ತಪ್ಪದು. ಸತತ ಬರಕ್ಕೆ ತುತ್ತಾಗುವ ಜಿಲ್ಲೆಯ ವಿವಿಧೆಡೆ ಇದೀಗ ಹನಿ ನೀರಿಗೂ ತತ್ವಾರ.

ವಿಜಯಪುರ ನಗರ, ಸಿಂದಗಿ, ಇಂಡಿ, ಆಲಮೇಲ ಪಟ್ಟಣ ಸೇರಿದಂತೆ ಜಿಲ್ಲೆಯ 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ. ದಿನದಿಂದ ದಿನಕ್ಕೆ ಸಮಸ್ಯೆ ಉಲ್ಬಣಿಸುತ್ತಿದ್ದು, ಪರಿಸ್ಥಿತಿ ಕೈ ಮೀರಿದೆ. ಕೆಲ ಹಳ್ಳಿಗಳಲ್ಲಿ ನೀರಿಗಾಗಿ ನಾರಿಯರ ಜಗಳ ತಾರಕಕ್ಕೇರಿದೆ.

‘ಸಿಂದಗಿ ಪಟ್ಟಣ ನೀರಿಲ್ಲದೆ ತಲ್ಲಣಿಸಿದೆ. ಬಾಣಂತನವೂ ಕಷ್ಟವಾಗಿದೆ. ವಿಧಿಯಿಲ್ಲ, ಮಾಡಲೇಬೇಕು. ನಿತ್ಯವೂ ನೀರಿಗಾಗಿ ಒತ್ತುವ ಗಾಡಿಯೊಂದಿಗೆ ಅಲೆಯುತ್ತೇನೆ. ಎಲ್ಲಿಯೂ ಸಿಗದಿದ್ದರೆ, ಅನಿವಾರ್ಯವಾಗಿ ಖಾಸಗಿಯಾಗಿ ಒಂದು ಕೊಡಕ್ಕೆ ಎರಡೂವರೆ ರೂಪಾಯಿ ತೆತ್ತು, ಮನೆಗೆ ನೀರು ಕೊಂಡೊಯ್ಯುತ್ತೇನೆ’ ಎಂದು ಸುರಯ್ಯ ನರಸಲಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ದಿನವೂ ದುಡ್ಕೊಂಡ್‌ ತಿನ್ನೋನು. ಮನೇಲಿ ಬಾಣಂತನ. ಈ ಬ್ಯಾಸಿಗೀಲಿ ನೀರಿನದ್ದೇ ತ್ರಾಸು. ನೀರಿಗಾಗಿಯೇ ₹7000 ಖರ್ಚು ಮಾಡಿರುವೆ. ಉಣ್ಲಿಕ್ಕೆ– ತಿನ್ಲಿಕ್ಕೆ ಸಮಸ್ಯೆಯಿಲ್ಲ. ನೀರಿಂದೇ ಕಿರಿಕಿರಿಯಾಗೈತಿ’ ಎಂದು ವಿಜಯಪುರ ತಾಲ್ಲೂಕಿನ ನಾಗಠಾಣದ ಸಿದ್ದಪ್ಪ ಮೇತ್ರಿ ಹೇಳಿದರು.

‘ನೀರಿನ ಸಮಸ್ಯೆ ಬಿಗಡಾಯಿಸಿದ್ದರೂ ಟ್ಯಾಂಕರ್‌ ಮೂಲಕ ಪುರಸಭೆ ನೀರು ಪೂರೈಸುತ್ತಿಲ್ಲ. ಮನೆಯಲ್ಲೇ ಶೌಚಾಲಯಕ್ಕೆ ಹೋದರೆ ಸಾಕಷ್ಟು ನೀರು ಬೇಕಾಗುತ್ತದೆ ಎಂಬ ಕಾರಣಕ್ಕೆ ಪಟ್ಟಣದಲ್ಲೂ ಬಯಲಿಗೆ ಹೋಗುತ್ತಿದ್ದೇವೆ’ ಎನ್ನುತ್ತಾರೆ ಸಿಂದಗಿಯ ರೂಬಿನಾ ರಫಿಕ್‌ ಅಹ್ಮದ್‌ ಜುಮನಾಳ.

‘ಯಾಡ್‌ ದಿನದ ಹಿಂದೆ ಮನೆಗೆ ಬೀಗರು ಬಂದಿದ್ದರು. ನಮ್ ನೀರಿನ ಸಂಕಟ ಹೇಳತೀರದು. ಈ ಹಿಂದ ಯಾಡ್ ದಿನಕ್ಕೊಮ್ಮೆ 30 ಕೊಡ ನೀರ್ ತರ್ತಿದ್ದೆ. ಈಗ ನಿತ್ಯವೂ ನೀರು ತರಬೇಕಿದೆ. ನಸುಕಿನಲ್ಲೇ ಬೈಸಿಕಲ್‌ಗೆ 8–10 ಕೊಡಗಳನ್ನು ಹಾಕೊಂಡು, ನೀರಿಗಾಗಿ ಅಲೆದಾಡಬೇಕಿದೆ’ ಎನ್ನುತ್ತಾರೆ ನಾಗಠಾಣ ಹೊಸ ಊರಿನ ಬಸವರಾಜ ತಳವಾರ.

‘ಮುಂಜಾನಿ ಎದ್ದ ಕೂಡಲೇ ಬೈಸಿಕಲ್‌, ಬೈಕ್‌ ತಗೊಂಡು ನೀರಿಗೆ ಹೋಗೋದೇ ನಮ್‌ ದಗ್ದ ಆಗೈತ್ರೀ. ನೀರು ಸಿಕ್ಕಿದ್ರೇ ಮುಂದಿನ ಕೆಲಸ. ಇಲ್ಲದಿದ್ರೇ ಸಿಗೋ ತನ್ಕ ಸುತ್ತಬೇಕು. ನೀರಿನ ಹುಡುಕಾಟದಿಂದಲೇ ನಮ್ ದಿನಚರಿ ಆರಂಭವಾಗಕ್ಕತೈತಿ. ಒಂದ್ ಕೊಡ ನೀರಲ್ಲೇ ಝಳಕ– ಬಟ್ಟೆ ತೊಳ್ಕೋಬೇಕಾಗೈತ್ರೀ. ನೀರನ್ನು ತುಪ್ಪ ಬಳಸಿದಂಗ ಬಳಸಕತ್ತೀವ್ರೀ. 30 ಕೊಡ ನೀರಿಗೆ ₹300 ದರವಿದೆ’ ಎಂದು ನೀರಿನ ತ್ರಾಸನ್ನು ಸಾಹೇಬಲಾಲ್‌ ಜಿಡ್ಡಿ, ಮೈಬೂಬ್ ಮುಜಾವರ, ಸುಜಾತಾ ಮಠಪತಿ, ಮಹಾದೇವಿ ಇಂಗಳೆ ಬಿಚ್ಚಿಟ್ಟರು.

ಬ್ಯಾರೆಲ್‌ಗೆ ಬೀಗ!

ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ತಾಂಡಾ ನಂಬರ್‌ 3ರ ಶ್ರೀಪತಿ ತಾಂಡಾದಲ್ಲಿ ನೀರಿನ ಕ್ಷಾಮ ಎಷ್ಟು ತೀವ್ರವಾಗಿದೆಯೆಂದರೆ; ತಾಂಡಾದ ಜನರು ನೀರು ಸಂಗ್ರಹಿಸುವ ಪ್ಲಾಸ್ಟಿಕ್‌ ಬ್ಯಾರೆಲ್‌ (ಸಿಂಟೆಕ್ಸ್‌)ಗಳಿಗೆ ಬೀಗ ಹಾಕಿ ನೀರಿನ ರಕ್ಷಣೆ ಮಾಡಿ
ಕೊಳ್ಳುತ್ತಿದ್ದಾರೆ.

‘ದೂರದ ಪ್ರದೇಶದಿಂದ ನೀರನ್ನು ತರುತ್ತೇವೆ. ನಾವು ತಂದ ನೀರನ್ನು ಬೇರೆಯವರು ಕಳವು ಮಾಡಬಾರದು ಎಂದೇ ಬ್ಯಾರೆಲ್‌ಗಳಿಗೆ ಬೀಗ ಹಾಕುತ್ತೇವೆ’ ಎಂದು ತಾಂಡಾದ ನಿವಾಸಿ ಶಂಕರ ರಾಠೋಡ ತಿಳಿಸಿದರು.

‘ಘೋಣಸಗಿ ತಾಂಡಾದಲ್ಲಿ ನೀರಿನ ಅಭಾವ ಹೆಚ್ಚಿದೆ. ಸಮಸ್ಯೆ ಬಿಗಡಾಯಿಸಿದ್ದರಿಂದಲೇ ಗುಳೆ ಹೋಗಿದ್ದ ನಮ್ಮ ಜನ ಇನ್ನೂ ಮರಳಿಲ್ಲ’ ಎನ್ನುತ್ತಾರೆ ಬಬನ ರಾಠೋಡ.

**

ದನಗಳಿಗೆ ನೀರಿಲ್ಲ. ಅವುಗಳ ಗೋಳು ನೋಡಲಾಗುತ್ತಿಲ್ಲ. ಜಾನುವಾರುಗಳಿಗಾಗಿ ದೂರದ ಬಾವಿಯಿಂದ, ನಿತ್ಯವೂ ಎತ್ತಿನ ಗಾಡಿಯಲ್ಲಿ ನೀರು ತರುವೆ
ಸೋಮಶೇಖರ ಕರೆಪ್ಪ ಯಂಕಂಚಿ, ಸಿಂದಗಿ ಪಟ್ಟಣದ ರೈತ

***

13 ದಿನಕ್ಕೊಮ್ಮೆ ನೀರು ಬಿಡ್ತಾರ. ಸಾಕಾಗಲ್ಲ. ಹೊಲಗಳ ಬಳಿ ನೀರಿಗೆ ಹೋದ್ರೆ ರೈತರು ಕೊಡೋದು ಕಷ್ಟವಾಗ್ತೈತಿ. ನೀರಿನ ತ್ರಾಸ ಕುತ್ತಿಗೆಗೆ ಬಂದೈತ್ರಿ
- ಚಂದ್ರಶೇಖರ ಮಸಳಿ, ನಾಗಠಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT