ಬುಧವಾರ, ಮೇ 12, 2021
27 °C
ಜಾರಿ ಆಗದ ಗಾಡ್ಗೀಳ್‌, ಕಸ್ತೂರಿರಂಗನ್‌ ವರದಿ

ಪಶ್ಚಿಮಘಟ್ಟ: ಸೂಕ್ಷ್ಮ ವಲಯ ಸಂರಕ್ಷಣೆ ಇನ್ನೂ ಮರೀಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಶ್ಚಿಮಘಟ್ಟಗಳಲ್ಲಿ ವಿಕೋಪ ತಡೆಯುವ ಉದ್ದೇಶದಿಂದ ಇಲ್ಲಿ ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸಿ ಸಂರಕ್ಷಿಸಬೇಕು. ವಿಶೇಷವಾಗಿ ಇಲ್ಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಯೋಜಿತ ಅಭಿವೃದ್ಧಿಗೆ ಮಾತ್ರ ಅವಕಾಶ ಕಲ್ಪಿಸಬೇಕು.

ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ಹಾಗೂ ಪ್ರಸಿದ್ಧ ವಿಜ್ಞಾನಿ ಕೆ.ಕಸ್ತೂರಿರಂಗನ್‌ ನೇತೃತ್ವದ ಸಮಿತಿಗಳೆರಡೂ ತಮ್ಮ ಅಧ್ಯಯನ ವರದಿಗಳಲ್ಲಿ ಮಾಡಿದ್ದ ಶಿಫಾರಸುಗಳಲ್ಲಿ ಈ ಅಂಶ ಪ್ರಮುಖವಾದುದು. ದುರದೃಷ್ಟವಶಾತ್‌ ಈ ಸಮಿತಿಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಇನ್ನೂ ಅನುಷ್ಠಾನವಾಗಿಲ್ಲ. ಕೇರಳ ಹಾಗೂ ಕರ್ನಾಟಕ ರಾಜ್ಯಗಳ ರಾಜಕಾರಣಿಗಳು ಈ ವರದಿ ಅನುಷ್ಠಾನಕ್ಕೆ ಒಂದಲ್ಲ ಒಂದು ತಗಾದೆ ತೆಗೆಯುತ್ತಲೇ ಇದ್ದಾರೆ.

ಕರ್ನಾಟಕದಲ್ಲಿ ಇಷ್ಟೊಂದು ಮಳೆ ಆಗಿರುವುದು ಇದೇ ಮೊದಲು. ಇಷ್ಟೊಂದು ಮಳೆ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ, ಉತ್ತರಾಖಂಡದಲ್ಲಿ 2013ರಲ್ಲಿ ವಿಕೋಪ ಉಂಟಾಗಿದ್ದು ಯಾರಿಗೂ ತಿಳಿಯದ ವಿಚಾರವೇನಲ್ಲ. ಆದರೆ, ಕೊಡಗಿನ ದುರಂತ ಮಾನವ ಗೊತ್ತಿದ್ದೂ ತಂದುಕೊಂಡ ಅಪಾಯ. ಅವೈಜ್ಞಾನಿಕ ಯೋಜನೆಗಳಿಗೆ ಒಪ್ಪಿಗೆ ನೀಡಿರುವುದು, ಭ್ರಷ್ಟಾಚಾರಗಳಿಗೆ ಅವಕಾಶ ಕಲ್ಪಿಸಿರುವುದು ಕೂಡಾ ಇದಕ್ಕೆ ಕಾರಣ. ಪಶ್ಚಿಮಘಟ್ಟಗಳಲ್ಲಿ ಭೂಬಳಕೆ ವಿನ್ಯಾಸ ಬದಲಿಸಬಹುದಿತ್ತು. ಬೇರೆ ರಾಜ್ಯಗಳಲ್ಲಿ ನಡೆದ ದುರಂತಗಳ ಬಳಿಕವೂ ರಾಜ್ಯ ಸರ್ಕಾರ ಪಾಠ ಕಲಿತಿಲ್ಲ ಎಂದು ಈ ವಿಜ್ಞಾನಿಗಳಿಬ್ಬರು ಬೇಸರ ವ್ಯಕ್ತಪಡಿಸಿದರು.

‘ಪಶ್ಚಿಮಘಟ್ಟ ಸಂರಕ್ಷಣೆ ಕುರಿತು ನನ್ನ ನೇತೃತ್ವದ ತಂಡ ನೀಡಿದ್ದ ಅಧ್ಯಯನ ವರದಿಯನ್ನು ರಾಜಕೀಯ ಒತ್ತಡಗಳಿಂದಾಗಿ ಮೂಲೆಗುಂಪು ಮಾಡಿದ್ದಾರೆ. ಈ ಸಲ ದಾಖಲೆ ಮಳೆಯಾಗಿದೆ ಎಂಬುದು ನಿಜವಿರಬಹುದು. ಆದರೆ, ಅಭಿವೃದ್ಧಿ ಎಂಬುದು ರಿಯಲ್‌ ಎಸ್ಟೇಟ್‌ ವ್ಯವಹಾರ ಆಗಬಾರದು. ಅಭಿವೃದ್ಧಿಗೆ ವಿವಿಧ ಆಯಾಮಗಳಿರುತ್ತವೆ. ಶುದ್ಧ ನೀರು, ಪರಿಶುದ್ಧ ಗಾಳಿ ಹಾಗೂ ಆರೋಗ್ಯ ಅಭಿವೃದ್ಧಿಯ ಭಾಗಗಳೇ. ಈ ವಿಚಾರ ಕರ್ನಾಟಕ ಹಾಗೂ ಕೇರಳಗಳಲ್ಲಿ ಮಾತ್ರ ಅಸಡ್ಡೆಗೆ ಒಳಗಾಗಿರುವುದಲ್ಲ. ಇಡೀ ರಾಷ್ಟ್ರದಲ್ಲಿ ಇವುಗಳನ್ನು ಕಡೆಗಣಿಸಲಾಗಿದೆ’ ಎಂದು ಗಾಡ್ಗೀಳ್‌ ತಿಳಿಸಿದರು.

‘ನಮ್ಮಲ್ಲಿ ಉತ್ತಮ ಕಾನೂನುಗಳಿವೆ. ಆದರೆ, ಅವು ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ’ ಎಂದು ಕಸ್ತೂರಿರಂಗನ್‌ ಬೇಸರ ವ್ಯಕ್ತಪಡಿಸಿದರು.

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯವು 2010ರಲ್ಲಿ ಗಾಡ್ಗೀಳ್‌ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿಯು 2011ರಲ್ಲಿ ಅಧ್ಯಯನ ವರದಿಯನ್ನು ಸಲ್ಲಿಸಿತ್ತು. ಇದನ್ನು ಯಥಾವತ್ತಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರಗಳು (ಪಶ್ಚಿಮ ಘಟ್ಟಗಳು ಹಾದುಹೋಗುವ ಪ್ರದೇಶಗಳನ್ನು ಹೊಂದಿರುವವು) ಹಿಂದೇಟು ಹಾಕಿದ್ದವು. ಬಳಿಕ, ಈ ವರದಿಯಲ್ಲಿ ಕೆಲವು ಅಂಶಗಳನ್ನು ಮರು‍ಪರಿಶೀಲನೆ ಮಾಡುವ ಕಸ್ತೂರಿರಂಗನ್‌ ನೇತೃತ್ವದ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ 2013ರಲ್ಲಿ ವರದಿ ಸಲ್ಲಿಸಿತ್ತು.

ಪಶ್ಚಿಮ ಘಟ್ಟಗಳು ಹಾದುಹೋಗುವ ಭೂ ಪ್ರದೇಶಗಳ ಸಮಗ್ರ ಅಧ್ಯಯನ ನಡೆಸಿ ಅಲ್ಲಿನ ಅಂಶಗಳ ದಾಖಲೀಕರಣ ಮಾಡಿದ್ದ ಈ ಸಮಿತಿಗಳು ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸಿ ಸಂರಕ್ಷಿಸಬೇಕು ಎಂಬ ಅಂಶವನ್ನು ಬಲವಾಗಿ ಪ್ರತಿಪಾದಿಸಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು