ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮೇಶ ಏಕಾಂಗಿಯೋ, ಅಲ್ಲವೋ? ಮೇ 23ರ ನಂತರ ಗೊತ್ತಾಗುತ್ತೆ – ಬಾಲಚಂದ್ರ ಜಾರಕಿಹೊಳಿ

Last Updated 10 ಮೇ 2019, 12:36 IST
ಅಕ್ಷರ ಗಾತ್ರ

ಬೆಳಗಾವಿ: ‘ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಏಕಾಂಗಿಯೋ, ಅಲ್ಲವೋ? ಅವರೊಂದಿಗೆ ಯಾರಿದ್ದಾರೆ ಎನ್ನುವುದು ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಗೊತ್ತಾಗುತ್ತದೆ’ ಎಂದು ಶಾಸಕ, ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಮಾರ್ಮಿಕವಾಗಿ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮೇ 23ರ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆ ನಿಶ್ವಿತ. ಆಲ್ಲಿವರೆಗೆ ಎಲ್ಲರೂ ಸುಮ್ಮನಿರುವುದು ಒಳ್ಳೆಯದು’ ಎಂದು ಆಪರೇಷನ್‌ ಕಮಲದ ಸುಳಿವು ನೀಡಿದರು.

‘ಸೋದರ ರಮೇಶ ರಾಜೀನಾಮೆ ನೀಡುವ ಬಗ್ಗೆ ನನಗೆ ಹೇಳಿಲ್ಲ. ಮಾಧ್ಯಮಗಳಲ್ಲಿ ಚರ್ಚೆಯಾಗಿದ್ದನ್ನು ಗಮನಿಸಿದ್ದೇನೆ. ಅವರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಖಚಿತವಾಗಿ ಗೊತ್ತಿಲ್ಲ’ ಎಂದೂ ಹೇಳಿದರು.

‘ರಮೇಶ ಜಾರಕಿಹೊಳಿ ಹೇಳಿದಂತೆ ಅವರ ಪುತ್ರ ಅಮರನಾಥನನ್ನು ರಾಜಕೀಯಕ್ಕೆ ತಂದಿದ್ದೇವೆ. ಬೆಮುಲ್‌ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ. ಹೊಂದಾಣಿಕೆ ರಾಜಕಾರಣ ಮೂಲಕ ಒಕ್ಕೂಟ ಬೆಳೆಸುವ ಪ್ರಯತ್ನ ಮಾಡುತ್ತಿದ್ದೇವೆ. ರೈತರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಅಧ್ಯಕ್ಷರನ್ನು (ವಿವೇಕರಾವ ಪಾಟೀಲ) ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ’ ಎಂದು ತಿಳಿಸಿದರು.

‘ಕುಟುಂಬದ ಜಗಳ ಬಗೆಹರಿಸುವುದಕ್ಕೆ ನಾನು ಬದ್ಧವಿದ್ದೇನೆ. ವಿರೋಧಿಗಳು ನಮ್ಮ ಕುಟುಂಬದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಕುಟುಂಬದವರ ಪಾತ್ರವಿಲ್ಲ’ ಎಂದರು.

‘ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಹೆಚ್ಚು ಅನುಕೂಲವಾಗಲಿದೆ. ಆಗ, ಸಹಜವಾಗಿಯೇ ರಾಜಕಾರಣದಲ್ಲಿ ಬದಲಾವಣೆ ಆಗಲಿವೆ’ ಎಂದು ವಿಶ್ಲೇಷಿಸಿದರು.

‘ನಾನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ; ಆಫರ್ ಕೂಡ ಬಂದಿಲ್ಲ. ಈ ಕುರಿತು ಬಂದಿರುವ ವರದಿಗಳು ನಿರಾಧಾರವಾದವು’ ಎಂದು ಪ್ರತಿಕ್ರಿಯಿಸಿದರು.

ಕುಂದಗೋಳ ಉಪಚುನಾವಣೆ ಪ್ರಚಾರ ವೇಳೆ ಸಚಿವ ಡಿ.ಕೆ. ಶಿವಕುಮಾರ ಕಣ್ಣೀರು ಹಾಕಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅವರು ದೊಡ್ಡ ನಾಯಕರು. ನಾನೇನೂ ಹೇಳುವುದಿಲ್ಲ’ ಎಂದರು.

‘ಸಚಿವ ಸಿ.ಎಸ್. ಶಿವಳ್ಳಿ ಸಾವಿಗೆ ಸಮ್ಮಿಶ್ರ ಸರ್ಕಾರ ಕಾರಣ ಎಂದು ಶಾಸಕ ಬಿ.ಶ್ರೀರಾಮುಲು ಹೇಳಬಾರದಿತ್ತು. ಯಾರ ಸಾವಿಗೂ ಯಾವ ಸರ್ಕಾರವೂ ಕಾರಣವಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT