ಶನಿವಾರ, ಫೆಬ್ರವರಿ 27, 2021
19 °C

ಯದುವೀರ್‌ ಒಡೆಯರ್‌ ಮಂಡ್ಯದಿಂದ ಸ್ಪರ್ಧೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.

ಮಾರ್ಚ್‌ ತಿಂಗಳಲ್ಲಿ ಮೈಸೂರಿಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ರಾಜಮಾತೆ ಪ್ರಮೋದಾದೇವಿ ಅವರನ್ನು ಭೇಟಿ ಮಾಡಿ ಬಿಜೆಪಿ ಸೇರುವಂತೆ ಆಹ್ವಾನ ಕೊಟ್ಟಿದ್ದರು. ರಾಜಮಾತೆ ತಮ್ಮ ದತ್ತು ಪುತ್ರ ಬಿಜೆಪಿ ಸೇರಲು ಅನುಮತಿ ಕೊಟ್ಟಿದ್ದಾರೆ. ಬಿಜೆಪಿ ವರಿಷ್ಠರು ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತಿಸಿದ್ದಾರೆ. ಆ ಮೂಲಕ ಜೆಡಿಎಸ್‌ ಭದ್ರಕೋಟೆ ಎನಿಸಿಕೊಂಡಿರುವ ಜೆಡಿಎಸ್‌ಗೆ ಪ್ರಬಲ ಪೈಪೋಟಿ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್‌ ರೇವಣ್ಣ ಅವರಿಗೆ ಬಿಟ್ಟುಕೊಟ್ಟು ಮಂಡ್ಯದಿಂದ ಸ್ಪರ್ಧಿಸುತ್ತಾರೆ ಎಂಬು ಸುದ್ದಿಯೂ ಇದೆ. ಮಾಜಿ ಪ್ರಧಾನಿಗೆ ಪ್ರಬಲ ಸ್ಪರ್ಧೆ ನೀಡುವ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸಿತ್ತು. ಯದುವೀರ್‌ ಒಡೆಯರ್‌ ಬಿಜೆಪಿ ಅಭ್ಯರ್ಥಿಯಾದರೆ ದೇವೇಗೌಡರ ವಿರುದ್ಧ ಪೈಪೋಟಿ ನೀಡಬಹುದು ಎಂಬ ಲೆಕ್ಕಾಚಾರವೂ ಬಿಜೆಪಿಗಿದೆ ಎಂದು ಮೂಲಗಳು ತಿಳಿಸಿವೆ.

‘ಮಂಡ್ಯ ಜಿಲ್ಲೆಯ ಮೇಲೆ ಮೈಸೂರು ರಾಜವಂಶಸ್ಥರ ಋಣವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಭಾವಚಿತ್ರವನ್ನು ಮನೆಮನೆಯಲ್ಲೂ ಪೂಜಿಸುತ್ತಾರೆ. ಆ ವಂಶದ ಕುಡಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದರೆ ಗೆಲುವು ನಿಶ್ಚಿತ. ಯದುವೀರ್‌ ಅವರನ್ನು ಮಂಡ್ಯದಿಂದ ಕಣಕ್ಕಿಳಿಸುವ ತೀರ್ಮಾನವನ್ನು ನಮ್ಮ ಪಕ್ಷದ ವರಿಷ್ಠರೇ ಕೈಗೊಂಡಿದ್ದಾರೆ. ಪಕ್ಷದ ತೀರ್ಮಾನಕ್ಕೆ ಮುಖಂಡರೆಲ್ಲರೂ ಬದ್ಧರಾಗಿದ್ದೇವೆ’ ಎಂದು ಬಿಜೆಪಿ ಮುಖಂಡ ಎಚ್‌.ಆರ್‌.ಅರವಿಂದ್‌ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು