ಬುಧವಾರ, ಜೂನ್ 16, 2021
22 °C

ಚೀನಾಕ್ಕೆ ಪ್ರತಿರೋಧ: ಭಾರತಕ್ಕೆ ಅಮೆರಿಕ ಸಂಸದರ ಬೆಂಬಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಪೂರ್ವ ಲಡಾಖ್‌ನ ಗಡಿಯಲ್ಲಿ ಅತಿಕ್ರಮಿಸಿ, ಸಂಘರ್ಷಕ್ಕಿಳಿದಿದ್ದ ಚೀನಾ ಸೇನೆಗೆ ಪ್ರತಿರೋಧ ಒಡ್ಡಿದ ಭಾರತಕ್ಕೆ ಅಮೆರಿಕದ ಸಂಸದರು ಪಕ್ಷಭೇದ ಮರೆತು ಬೆಂಬಲ ಸೂಚಿಸಿದ್ದಾರೆ.

ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣಗೊಂಡಿತ್ತಲ್ಲದೇ, ಜೂನ್‌ 15ರಂದು ಗಾಲ್ವನ್‌ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಜನ ಯೋಧರು ಹುತಾತ್ಮರಾದರು. ಎಷ್ಟು ಜನ ತನ್ನ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಬಗ್ಗೆ ಚೀನಾ ಈ ವರೆಗೂ ತುಟಿಬಿಚ್ಚಿಲ್ಲ.

ಹೌಸ್‌ ಆಫ್‌ ರೆಪ್ರಸೆಂಟೇಟಿವ್‌ ಮತ್ತು ಸೆನೆಟ್‌ನಲ್ಲಿ ಮಾತನಾಡಿದ ಸಂಸದರು, ಭಾರತದ ಗಡಿಯನ್ನು ಅತಿಕ್ರಮಿಸಲು ಮುಂದಾಗಿದ್ದ ಚೀನಾದ ದುಸ್ಸಾಹಸಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಶ್ಲಾಘಿಸಿದರು.

ಡೆಮಾಕ್ರಟಿಕ್‌ ಪಕ್ಷದ ಹಿರಿಯ ಸಂಸದ ಫ್ರ್ಯಾಂಕ್ ಪಲ್ಲೋನ್‌ ಮಾತನಾಡಿ, ‘ಚೀನಾ ತಕ್ಷಣವೇ ಇಂಥ ಆಕ್ರಮಣಶೀಲತೆಯನ್ನು ನಿಲ್ಲಿಸಬೇಕು. ಗಡಿ ಕುರಿತ ವ್ಯಾಜ್ಯವನ್ನು ಶಾಂತಿಯುತ ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು.

ಸಂಸದರಾದ‌ ರಿಕ್‌ ಸ್ಕಾಟ್‌, ಜಾರ್ಜ್‌ ಹೋಲ್ಡಿಂಗ್, ಬ್ರ್ಯಾಡ್‌ ಶೇರ್‌ಮ್ಯಾನ್‌, ಪ್ರಮೀಳಾ ಜಯಪಾಲ್‌, ರೊ ಖನ್ನಾ ಸೇರಿದಂತೆ ಹಲವರು ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ್ದಾರೆ. ಕೆಲವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಭಾರತ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಅಮೆರಿಕದಲ್ಲಿನ ಭಾರತದ ರಾಯಭಾರಿ ತರಂಜಿತ್‌ ಸಿಂಗ್‌ ಸಂಧು ಅವರೊಂದಿಗೆ ಮಾತನಾಡಿದ ಹಲವು ಸಂಸದರು, ಚೀನಾ ನಡೆ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಸಂಧು ಅವರು ನಿತ್ಯವೂ ಅಮೆರಿಕದ ಸಂಸದರನ್ನು ಸಂಪರ್ಕಿಸಿ, ಭಾರತದ ನಿಲುವನ್ನು ವಿವರಿಸುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ, ಅಮೆರಿಕದ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಭಾರತಕ್ಕೆ ಬೆಂಬಲ ನೀಡುವ ತಮ್ಮ ನಿಲುವನ್ನು ವ್ಯಕ್ತಪಡಿಸುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು