ಕಥೆ ಕೇಳೋಣ ಬರ್ರಿ...

7
Story telling

ಕಥೆ ಕೇಳೋಣ ಬರ್ರಿ...

Published:
Updated:
Deccan Herald

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನಿಗೆ ಒಬ್ಬ ಮುದ್ದಾದ ರಾಜಕುಮಾರಿ ಇದ್ಲು...

ಈ ಸಾಲುಗಳನ್ನು ಓದುತ್ತಿದ್ದಂತೆಯೇ ಬಾಲ್ಯದಲ್ಲಿ ಅಜ್ಜ–ಅಜ್ಜಿ, ಅಪ್ಪ–ಅಮ್ಮ ಹೇಳುತ್ತಿದ್ದ ಕಥೆಗಳು ನೆನಪಾದವೇ? ಆ ಕಾಲವೇ ಎಷ್ಟೊಂದು ಚೆನ್ನಾಗಿತ್ತು. ಈಗಿನ ಮಕ್ಕಳಿಗೆ ಕಥೆ ಕೇಳುವುದಿರಲಿ, ಪುಸ್ತಕಗಳಲ್ಲಿ ಕಥೆ ಓದುವ ಹಸಿವೂ ಇಲ್ಲ ಅನ್ನೋದು ಬಹುತೇಕರ ಅಭಿಮತ. ಕಾಲಿಗೆ ಚಕ್ರ ಕಟ್ಟಿಕೊಂಡು ನಗರದ ಧಾವಂತದಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗುವ ಪೋಷಕರಿಗೆ ಮಕ್ಕಳಿಗೆ ಕಥೆ ಹೇಳುವ ತಾಳ್ಮೆಯೂ ಇಲ್ಲ. ಅಳುವ ಕಂದಮ್ಮನಿಗೆ ಮೊಬೈಲ್ ನೀಡಿ ಸುಮ್ಮನಾಗಿಸಿದರೆ ಆ ಕ್ಷಣದ ಒತ್ತಡದಿಂದ ಮುಕ್ತಿಯಾದಂತೆ ಅನ್ನೋದು ಕೆಲ ಪೋಷಕರ ತಂತ್ರ.

ಬಾಲ್ಯದಲ್ಲಿ ಕಥೆ ಕೇಳುತ್ತಾ ಬೆಳೆಯುವ ಮಕ್ಕಳು ಕಲ್ಪನಾ ಶಕ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತಿದ್ದರು. ಒಂದೇ ಕಥೆಯನ್ನು ಒಬ್ಬೊಬ್ಬರೂ ತಮ್ಮದೇ ಆದ ರೀತಿಯಯಲ್ಲಿ ಅರ್ಥೈಸಿಕೊಳ್ಳುತ್ತಿದ್ದರು. ಆ ಮೂಲಕ ಮಕ್ಕಳಲ್ಲಿ ಸಂವಹನ ಕೌಶಲ, ಕಲ್ಪನಾ ಶಕ್ತಿಯ ವೃದ್ಧಿಯೂ ಆಗುತ್ತಿತ್ತು. ಅಂಥ ಕಥೆಗಳ ಮೌಖಿಕ ಪರಂಪರೆ ನಗರದಲ್ಲೂ ದೊರೆಯುವಂತಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಅನ್ನೋದು ಅನೇಕರ ಆಸೆ. ಅದಕ್ಕೆ ಉತ್ತರವೆಂಬಂತೆ ಕಾರ್ಯ ನಿರ್ವಹಿಸುತ್ತಿದೆ ಬೆಂಗಳೂರು ಸ್ಟೋರಿ ಟೆಲ್ಲಿಂಗ್ ಸೊಸೈಟಿ.

2013ರಲ್ಲಿ ಆರಂಭವಾದ ಬೆಂಗಳೂರು ಸ್ಟೋರಿ ಟೆಲ್ಲಿಂಗ್ ಸೊಸೈಟಿಗೆ ಈಗ ಐದರ ಹರೆಯ. ಎಂಟು ಕಥೆಗಾರರ ಕಲ್ಪನೆಯ ಕೂಸು. ಅಪರ್ಣಾ ಅತ್ರೇಯ, ಅಪರ್ಣಾ ಜೈಶಂಕರ್, ಲಾವಣ್ಯಾ ಪ್ರಸಾದ್, ಉಷಾ ವೆಂಕಟರಾಮನ್, ಆಯೇಷಾ ತಬುಸುಂ, ಶೈಲಜಾ ಸಂಪತ್, ಸೌಮ್ಯ ರಾಜನ್ ಶ್ರೀನಿವಾಸನ್, ವಿಕ್ರಮ್ ಶ್ರೀಧರ್, ಜೀವ ರಘುನಾಥನ್ ... ಹೀಗೆ ಅನೇಕ ಕಥೆ ಹೇಳುವ ಕಲಾವಿದರ ದಂಡೇ ಇಲ್ಲಿದೆ.

ಪ್ರತಿ ತಿಂಗಳು ದೊಡ್ಡವರಿಗಾಗಿ ಆಟ–ಗಲಾಟದಲ್ಲಿ, ಕುಟುಂಬಕ್ಕಾಗಿ ಎಂ.ಜಿ ರಸ್ತೆಯ ರಂಗೋಲಿ ಮೆಟ್ರೊದಲ್ಲಿ, ಪ್ರತಿವರ್ಷ ನವೆಂಬರ್‌ನಲ್ಲಿ ಬೆಂಗಳೂರು ಕಥೆ ಹೇಳುವ ಹಬ್ಬವನ್ನು ಈ ಸೊಸೈಟಿ ಮಾಡುತ್ತಾ ಬಂದಿದೆ. ಇಲ್ಲಿ ಚಿಕ್ಕ ಮಕ್ಕಳಿಗಷ್ಟೇ ಅಲ್ಲ ಯುವಜನರು ಮತ್ತು ವಯಸ್ಕರಿಗಾಗಿಯೂ ಕಥೆ ಹೇಳುವ ಕಾಯಕವನ್ನು ಮಾಡಲಾಗುತ್ತಿದೆ.

‘ಬಾಯಿಂದ ಬಾಯಿಗೆ ಕಥೆ ಹರಡಬೇಕು ಎನ್ನುವುದೇ ಸೊಸೈಟಿಯ ಉದ್ದೇಶ. ಮಕ್ಕಳು, ಯುವಕರು, ವೃದ್ಧರು ಹೀಗೆ ವಯೋಭೇದವಿಲ್ಲದೇ ಎಲ್ಲರೂ ಕಥೆ ಕೇಳಬೇಕೆಂಬುದೇ ನಮ್ಮ ಆಶಯ. ಮಾತುಗಳ ಮೂಲಕ ಮನುಷ್ಯರನ್ನು ಬೆಸೆಯುವ ಸಂಕಲ್ಪ ನಮ್ಮದು. ಕಥೆಯಿಂದ ಸಿಗುವ ಸಣ್ಣ ಸಣ್ಣ ಸಂತೋಷಗಳನ್ನು ಅನುಭವಿಸುವುದು ಕಥೆ ಹೇಳುವ ಮತ್ತು ಕೇಳುವ ಉದ್ದೇಶ’ ಎನ್ನುತ್ತಾರೆ ಬೆಂಗಳೂರು ಸ್ಟೋರಿ ಟೆಲ್ಲಿಂಗ್ ಸೊಸೈಟಿಯ ಸದಸ್ಯೆ ಶೈಲಜಾ ಸಂಪತ್.

‘ಕನ್ನಡದಲ್ಲಿ ಎಷ್ಟೊಂದು ಒಳ್ಳೆಯ ಕಥೆಗಾರರಿದ್ದಾರೆ. ಗ್ಯಾಜೆಟ್ ಲೋಕದಲ್ಲಿ ಮೈಮರೆತು ನಾವೆಲ್ಲಾ ಕಥೆ ಓದುವ, ಕೇಳುವ ಮತ್ತು ಹೇಳುವ ಪರಂಪರೆಯೊಂದನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದ್ದೇವೆ. ಅದರಲ್ಲೂ ಕಥೆ ಹೇಳುವ ಮೌಖಿಕ ಪರಂಪರೆ ಅದ್ಭುತವಾದದ್ದು. ಆ ಪರಂಪರೆಗೆ ಜನರನ್ನು ಪರಸ್ಪರ ಬೆಸೆಯುವ ಮಾಂತ್ರಿಕ ಶಕ್ತಿ ಇದೆ. ಆ ಪರಂಪರೆಯನ್ನು ಪುನರ್ ರೂಪಿಸುವ ಅಗತ್ಯವಿದೆ. ಅದನ್ನು ಸ್ಟೋರಿ ಟೆಲ್ಲಿಂಗ್ ಸೊಸೈಟಿ ಮಾಡುತ್ತಿದೆ’ ಎನ್ನುತ್ತಾರೆ ಅವರು.

ಈ ಬಾರಿಯ ಬೆಂಗಳೂರು ಸ್ಟೋರಿ ಟೆಲ್ಲಿಂಗ್ ಹಬ್ಬ ಇದೇ 16ರಿಂದ 18ವರೆಗೆ ನಡೆಯಲಿದೆ. ಮೂರು ದಿನಗಳ ಕಾಲ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕಥೆ ಹೇಳುವ ಕಲಾವಿದರು ಭಾಗವಹಿಸುತ್ತಿರುವುದು ವಿಶೇಷ. 16ರಂದು ಸಂಜೆ ದೊಡ್ಡವರಿಗೆ ಕಥೆಗಳ ಸೆಷನ್ ನಡೆಯಲಿದೆ. ಆಹಾರದ ಕುರಿತು ಅನೇಕ ಕಥೆಗಳು ಇಲ್ಲಿರುತ್ತವೆ (ಸ್ಥಳ–ಮೈಬೊಟ್ರೀ, 5ನೇ ಕ್ರಾಸ್ ರಸ್ತೆ, 60 ಅಡಿ ರಸ್ತೆ, 5ನೇ ಬ್ಲಾಕ್ ಕೋರಮಂಗಲ). 17ರಂದು ಗಣಿತ ಮತ್ತು ವಿಜ್ಞಾನವನ್ನು ಕಥೆಗಳ ಮೂಲಕ ಹೇಳಿಕೊಡಲಿದ್ದಾರೆ ಉಷಾ ವೆಂಕಟರಾಮನ್, ಭಾರತದ ವಿವಿಧ ಸಂಸ್ಕೃತಿಯ ಕಥೆಗಳು, ಫನ್ ವಿತ್ ಪೊಪೆಟ್ಸ್‌, (ಸ್ಥಳ–ರಂಗಸ್ಥಳ, ಎಂ.ಜಿ.ರಸ್ತೆ, ಮೆಟ್ರೊ ಕಲಾಕೇಂದ್ರ), ದಿ ಬೆಸ್ಟ್‌ ಷೋ ಕೇಸ್ (ಸ್ಥಳ– ಮದರ್ ಟೆಕ್ಲಾ ಸಭಾಂಗಣ) 18ರಂದು ಇಂಪ್ರೂ ಫಾರ್ ಸ್ಟೋರಿ ಟೆಲ್ಲರ್ಸ್ ಕಾರ್ಯಾಗಾರ, ಸ್ಟೋರಿ ಟೆಲ್ಲಿಂಗ್ ವಿತ್ ಪೇಪರ್ ಕ್ರಾಫ್ಟ್‌, ಬೆಸ್ಟ್ ನಮ್ಮೂರ ಕಥೆಗಳ ಕುರಿತು ಕಾರ್ಯಕ್ರಮವಿರುತ್ತದೆ (ಸ್ಥಳ–ರಂಗಸ್ಥಳ, ಎಂ.ಜಿ.ರಸ್ತೆ, ಮೆಟ್ರೊ ಕಲಾಕೇಂದ್ರ)

ಹೆಚ್ಚಿನ ಮಾಹಿತಿಗೆ: ಲಾವಣ್ಯಾ 74066 90197, ಶೈಲಜಾ ಸಂಪತ್ 99164 45641. ಫೇಸ್‌ಬುಕ್: Bangalore Storytelling Society.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !