ಸೋಮವಾರ, ನವೆಂಬರ್ 18, 2019
26 °C
ಗಡುವಿನೊಳಗೆ ಬ್ಯಾನರ್, ಫ್ಲೆಕ್ಸ್‌ ತೆರವುಗೊಳಿಸಲು ಸೂಚನೆ, ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ

ಉಪಚುನಾವಣೆ | ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಆರ್.ಲತಾ

Published:
Updated:
Prajavani

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಅಕ್ಟೋಬರ್ 21 ರಂದು ನಿಗದಿಯಾಗಿದ್ದು, ಶನಿವಾರದಿಂದ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಪ್ರತಿಯೊಬ್ಬರು ಕಟ್ಟುನಿಟ್ಟಾಗಿ ಅದನ್ನು ಪಾಲಿಸಬೇಕು. ನೀತಿ ಸಂಹಿತೆ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಮುಖ್ಯ ಚುನಾವಣಾಧಿಕಾರಿಗಳು ಚುನಾವಣೆ ಘೋಷಣೆ ಮಾಡಿದ್ದು, ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಬ್ಯಾನರ್, ಫ್ಲೆಕ್ಸ್‌ಗಳನ್ನು 24 ಗಂಟೆಗಳ ಒಳಗೆ ತೆಗೆದು ಹಾಕಬೇಕು. 72 ಗಂಟೆಗಳ ಒಳಗೆ ಖಾಸಗಿ ಸ್ಥಳಗಳಲ್ಲಿರುವ ಬ್ಯಾನರ್, ಫ್ಲೆಕ್ಸ್‌ಗಳನ್ನು ತೆರವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಸೆಪ್ಟೆಂಬರ್ 23 ರಂದು ಉಪ ಚುನಾವಣೆ ಅಧಿಸೂಚನೆ ಪ್ರಕಟವಾಗಲಿದೆ. ಸೆ.30 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಅಕ್ಟೋಬರ್ 1 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅ.3 ಕೊನೆಯ ದಿನ. ಚುನಾವಣಾಧಿಕಾರಿಯಾದ ಉಪವಿಭಾಗಾಧಿಕಾರಿ ಅವರ ಕಚೇರಿಯಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರ ವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ’ ಎಂದರು.

‘ಅ.21 ರಂದು ಮತದಾನ, ಅ.24 ರಂದು ಮತ ಏಣಿಕೆ ಕಾರ್ಯ ನಡೆದು, ಫಲಿತಾಂಶ ಘೋಷಣೆಯಾಗಲಿದೆ. ನಡೆಯಲಿದೆ. ಅ.27ಕ್ಕೆ ಚುನಾವಣಾ ನೀತಿ ಸಂಹಿತೆ ಕೊನೆಗೊಳ್ಳಲಿದೆ. ಈ ಚುನಾವಣೆಯಲ್ಲಿ ಕೂಡ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಜತೆಗೆ ಮತ ಖಾತರಿ ಯಂತ್ರಗಳನ್ನು (ವಿವಿ ಪ್ಯಾಟ್‌) ಬಳಕೆ ಮಾಡಲಾಗುತ್ತದೆ’ ಎಂದು ಹೇಳಿದರು.

‘ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರಕ್ಕೆ ಸೀಮಿತವಾಗಿ ಈ ಉಪ ಚುನಾವಣೆ ನಡೆದರೂ ನೀತಿ ಸಂಹಿತೆ ಇಡೀ ಜಿಲ್ಲೆಗೆ ಅನ್ವಯಿಸುತ್ತದೆ. ಆದ್ದರಿಂದ, ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳು, ನಗರಸಭೆ, ಪಟ್ಟಣ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ನೌಕರರು ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ತಿಳಿಸಿದರು.

‘ಎಲ್ಲಾ ಸರ್ಕಾರಿ ಅಧಿಕಾರಿಗಳು, ನೌಕರರು ರಾಜಕೀಯ ಚಟುವಟಿಕೆಗಳಿಂದ ದೂರವಿರತಕ್ಕದ್ದು. ಚುನಾವಣಾ ನೆಪ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪಗಳ ವ್ಯವಸ್ಥೆಗೆ ಅಡಚಣೆ ಮಾಡಬಾರದು. ಎಲ್ಲಾ ಸಿಬ್ಬಂದಿಗಳು ತಮ್ಮ ಮೊಬೈಲ್‌ಗಳನ್ನು 24*7 ಚಾಲನೆಯಲ್ಲಿಟ್ಟು ಇಟ್ಟುಕೊಂಡಿರಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ಉಪವಿಭಾಗಾಧಿಕಾರಿ ಎ.ಎನ್.ರಘನಂದನ್, ತಹಶೀಲ್ದಾರ್ ಕೆ.ಎನ್.ನರಸಿಂಹಮೂರ್ತಿ, ನಗರಸಭೆ ಆಯುಕ್ತ ಉಮಾಕಾಂತ್ ಹಾಜರಿದ್ದರು.

ಅಂಕಿಅಂಶಗಳು..

* 99,825 ಪುರುಷ ಮತದಾರರು

* 1,00,776 ಮಹಿಳಾ ಮತದಾರರು

* 21 ತೃತೀಯ ಲಿಂಗಿ ಮತದಾರರು

* 2,00,622 ಜಿಲ್ಲೆಯ ಒಟ್ಟು ಮತದಾರರು

* 254 ಒಟ್ಟು ಮತಗಟ್ಟೆಗಳು

ಪ್ರತಿಕ್ರಿಯಿಸಿ (+)