ಭಾನುವಾರ, ನವೆಂಬರ್ 17, 2019
21 °C
ಜಿಲ್ಲೆಗೆ ಹಲವು ಬಾರಿ ಭೇಟಿ, ದೊಡ್ಡಾಣೆಯಲ್ಲೂ ವಾಸ್ತವ್ಯ ಹೂಡಿದ್ದ ಶಾಸಕ, 15ನೇ ಸಚಿವ

ಸುರೇಶ್‌ ಕುಮಾರ್‌ ಜಿಲ್ಲಾ ಉಸ್ತುವಾರಿ: ಜನರಲ್ಲಿ ನಿರೀಕ್ಷೆ

Published:
Updated:
Prajavani

ಚಾಮರಾಜನಗರ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರನ್ನು ಚಾಮರಾಜನಗರದ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. 

ಸುರೇಶ್‌ ಕುಮಾರ್‌ ಅವರದು ಒಂದು ರೀತಿಯಲ್ಲಿ ಅಚ್ಚರಿಯ ಆಯ್ಕೆ. ವಸತಿ ಸಚಿವ ವಿ.ಸೋಮಣ್ಣ ಅವರು ಉಸ್ತುವಾರಿ ಸಚಿವರಾಗುವ ಸಾಧ್ಯತೆ ಇದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಅವರು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಉಸ್ತುವಾರಿ ಹೊಣೆ ಹೊತ್ತಿದ್ದರು. 

ಈಗ, ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಸುರೇಶ್‌ ಕುಮಾರ್‌ ಅವರಿಗೆ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ನೀಡಿರುವುದು ಜನತೆಯಲ್ಲಿ ಹಲವು ನಿರೀಕ್ಷೆಗಳು ಹುಟ್ಟುಹಾಕಿದೆ. 

ಜಿಲ್ಲೆಯ ಪರಿಚಯವಿದೆ: ‘ಸುರೇಶ್‌ ಕುಮಾರ್‌ ಅವರಿಗೆ ಜಿಲ್ಲೆಯ ಪರಿಚಯ ಇದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾಗ ಮೂರು ಬಾರಿ ಜಿಲ್ಲೆಗೆ ಭೇಟಿ ಕೊಟ್ಟಿದ್ದರು. ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುವ ಪಕ್ಷದ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮಗಳಲ್ಲಿ ಸಕ್ರಿಯ ಭಾಗವಹಿಸಿದ್ದಾರೆ. ಪಕ್ಷದ ಸಂಘಟನೆಗಾಗಿ ಜಿಲ್ಲಾಧ್ಯಂತ ಓಡಾಡಿದ್ದಾರೆ. ಕಾರ್ಯಕರ್ತರೊಂದಿಗೆ ಉತ್ತಮ ಒಡನಾಟವನ್ನೂ ಹೊಂದಿದ್ದಾರೆ. ಪಕ್ಷದ ಸಂಘಟನೆಗಾಗಿ ಮೂರ್ನಾಲ್ಕು ತಿಂಗಳಿಗೊಮ್ಮೆ ಅವರು ಜಿಲ್ಲೆಗೆ ಭೇಟಿ ನೀಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ’ ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ.

ಹೊಸ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಳೆದ ಶನಿವಾರವಷ್ಟೇ ಕೊಳ್ಳೇಗಾಲದಲ್ಲಿ ಹಾಗೂ ಚಾಮರಾಜನಗರದಲ್ಲಿ  ನಡೆದಿದ್ದ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲೆಗೆ ಭೇಟಿ ನೀಡಿದ ಎರಡನೇ ಸಚಿವ ಸುರೇಶ್‌ ಕುಮಾರ್‌. ಅವರಿಗಿಂತ ಮೊದಲು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಬಂದಿದ್ದರು.

ದೊಡ್ಡಾಣೆಗೆ ಭೇಟಿ: ಸುಳ್ವಾಡಿಯಲ್ಲಿ ವಿಷ ಪ್ರಸಾದ ದುರಂತ ಸಂಭವಿಸಿದ ಸಂದರ್ಭದಲ್ಲೂ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಕೆಲವು ತಿಂಗಳ ಹಿಂದೆ ತಮ್ಮ ತಂಡದೊಂದಿಗೆ ಮಹದೇಶ್ವರ ಬೆಟ್ಟದ ವ್ಯಾಪ್ತಿಗೆ ಬರುವ ದೊಡ್ಡಾಣೆಗೆ ಭೇಟಿ ನೀಡಿ ಒಂದು ರಾತ್ರಿ ಅಲ್ಲಿ ಉಳಿದುಕೊಂಡು ಅಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದರು. ನಂತರ ಅದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಆ ಬಳಿಕ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಗ್ರಾಮಕ್ಕೆ ಕಚ್ಚಾರಸ್ತೆ ನಿರ್ಮಿಸಲು ಕ್ರಮ ಕೈಗೊಂಡಿತ್ತು. ಅಲ್ಲಿ ಕಾಮಗಾರಿ ಪೂರ್ಣಗೊಂಡ ನಂತರ, ಅದನ್ನೂ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದರು. 

ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಯತ್ನಿಸುತ್ತಿರುವ ಈ ಜಿಲ್ಲೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲೂ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕಾಡಂಚಿನ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಎದುರಿಸುತ್ತಿರುವ ಸಮಸ್ಯೆಗಳು ಕಡಿಮೆ ಏನಲ್ಲ. ಹಲವು ಸಮಸ್ಯೆಗಳನ್ನು ಕಣ್ಣಾರೆ ಕಂಡಿರುವ ಸುರೇಶ್‌ ಕುಮಾರ್‌ ಅವರು, ಅವುಗಳನ್ನು ಬಗೆಹರಿಸಲು  ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸದಲ್ಲಿ ಜಿಲ್ಲೆಯ ಜನರಿದ್ದಾರೆ. 

‘ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸುರೇಶ್‌ ಕುಮಾರ್‌ ಅವರು ಪ್ರಾಮಾಣಿಕವಾಗಿ ಶ್ರಮ ಹಾಕಲಿದ್ದಾರೆ ಎಂಬ ವಿಶ್ವಾಸ ಇದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್‌. ಮಲ್ಲಿಕಾರ್ಜುನಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

15ನೇ ಉಸ್ತುವಾರಿ ಸಚಿವ

ಚಾಮರಾಜನಗರವು 1997ರಲ್ಲಿ ಮೈಸೂರಿನಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾದಾಗಿನಿಂದ ಇದುವರೆಗೆ 14 ಉಸ್ತುವಾರಿ ಸಚಿವರನ್ನು ಕಂಡಿದೆ ಸುರೇಶ್‌ ಕುಮಾರ್‌ 15ನೆಯವರು. 

ಇದಕ್ಕೂ ಮೊದಲು, ಎಚ್‌.ನಾಗಪ್ಪ, ಜಿ.ರಾಜೂಗೌಡ, ಎಂ.ಮಹದೇವ್‌, ಡಿ.ಟಿ.ಜಯಕುಮಾರ್‌, ಎಚ್‌.ಎಸ್‌.ಮಹದೇವಪ್ರಸಾದ್‌, ಎಚ್‌.ಹಾಲಪ್ಪ, ಸಿ.ಎಚ್‌.ವಿಜಯಶಂಕರ್‌, ಪಿ.ಎಂ.ನರೇಂದ್ರಸ್ವಾಮಿ, ಎಂ.ಪಿ.ರೇಣುಕಾಚಾರ್ಯ, ಸಿ.ಸೋಮಣ್ಣ, ಎಚ್‌.ಎಸ್‌.ಮಹದೇವಪ್ರಸಾದ್‌, ಯು.ಟಿ.ಖಾದರ್‌, ಮೋಹನಕುಮಾರಿ, ಸಿ.ಪುಟ್ಟರಂಗಶೆಟ್ಟಿ ಅವರು ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 

ಪ್ರತಿಕ್ರಿಯಿಸಿ (+)